ಅದ್ದೂರಿ ನಂದಿ ಮೂರ್ತಿ ಪ್ರತಿಷ್ಠಾಪನೆ, ಕಳಸ ಮೆರವಣಿಗೆ

| Published : Aug 01 2024, 12:17 AM IST

ಸಾರಾಂಶ

ಸಂಸ್ಕೃತಿ ಹಾಗೂ ಧಾರ್ಮಿಕ ಆಚರಣೆಗಳಲ್ಲಿ ತೊಡಗಿದಾಗ ಮನುಷ್ಯನ ಬದುಕು ಎಂಬುದು ಸುಂದರ ಹಾಗೂ ಅರ್ಥಪೂರ್ಣ

ಗಜೇಂದ್ರಗಡ: ಪಟ್ಟಣದಲ್ಲಿ ನೂತನವಾಗಿ ನವೀಕರಣಗೊಂಡ ಚಂದ್ರಮೌಳೇಶ್ವರ ಮಂದಿರದ ನಂದಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣದ ಅಂಗವಾಗಿ ಬುಧವಾರ ಮೂರ್ತಿ ಹಾಗೂ ಕಳಸದ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಪಟ್ಟಣದ ಗ್ರಾಮದೇವತೆ ಹಿರೇದುರ್ಗಾದೇವಿ ದೇಗುಲದಿಂದ ಆರಂಭವಾದ ಮೆರವಣಿಗೆಗೆ ಚಾಲನೆ ನೀಡಿದ ಬಳಿಕ ಪಟ್ಟಣದ ಪ್ರಮುಖ ಮಾರುಕಟ್ಟೆ ರಸ್ತೆಯ ಮೂಲಕ ಸುಮಂಗಲೆಯರು ಕುಂಭಮೇಳ ಹೊತ್ತು ಸಂಚರಿಸಿ ನಂದಿ ದೇವರ ಮೂರ್ತಿ ಹಾಗೂ ಕಳಸವನ್ನು ವಿಜೃಂಭಣೆಯಾಗಿ ಭರಮಾಡಿಕೊಂಡರು.

ನಂದಿ ದೇವರು ಹಾಗೂ ಕಳಸದ ಮೆರವಣಿಗೆಯಲ್ಲಿ ಅಪಾರ ಭಕ್ತರು ಭಾಗವಹಿಸಿದ್ದು ಕಂಡು ಬಂದಿತು. ಮಹಿಳೆಯರಿಂದ ಪೂರ್ಣಕುಂಭದೊಂದಿಗೆ ಸಕಲ ವಾದ್ಯಮೇಳಗಳೊಂದಿಗೆ ಇಲ್ಲಿನ ಹಿರೇದುರ್ಗಾದೇವಿ ದೇಗುಲದಿಂದ ಸಾಗಿದ ಮೆರವಣಿಗೆಯು ಚಂದ್ರಮೌಳೇಶ್ವರ ಮಂದಿರಕ್ಕೆ ಬಂದು ತಲುಪಿತು.

ಈ ವೇಳೆ ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ಸಂಸ್ಕೃತಿ ಹಾಗೂ ಧಾರ್ಮಿಕ ಆಚರಣೆಗಳಲ್ಲಿ ತೊಡಗಿದಾಗ ಮನುಷ್ಯನ ಬದುಕು ಎಂಬುದು ಸುಂದರ ಹಾಗೂ ಅರ್ಥಪೂರ್ಣವಾಗುತ್ತದೆ. ಏನನ್ನು ತರದ ಹಾಗೂ ಏನನ್ನೂ ಮರಳಿ ಒಯ್ಯದ ನಾವುಗಳು ನಮ್ಮ ಸಂಸ್ಕೃತಿ ಪರಂಪರೆ ಮತ್ತು ಆಚರಣೆಗಳಲ್ಲಿ ತೊಡಗಿಕೊಳ್ಳಬೇಕಿದೆ ಎಂದ ಅವರು, ದೇವಸ್ಥಾನಗಳು ಮಾನವನ ಜೀವನಕ್ಕೆ ಸಾಕ್ಷಾತ್ಕಾರ ಕೇಂದ್ರಗಳಾಗಿವೆ. ಧಾರ್ಮಿಕ ಪ್ರಜ್ಞೆಯು ಮನುಷ್ಯನನ್ನು ಸರಿ ದಾರಿಯಲ್ಲಿ ಸಾಗಿಸಲು ಸಹಕಾರಿ. ಹೀಗಾಗಿ ಗುಡಿ ಹಾಗೂ ದೇವಸ್ಥಾನಗಳ ನಿರ್ಮಾಣ ಮತ್ತು ಜೀರ್ಣೋದ್ಧಾರದ ಕೆಲಸದಲ್ಲಿ ಭಾಗವಹಿಸುವುದು ಎಂದರೆ ಪುಣ್ಯದ ಕೆಲಸವಾಗಿದೆ. ಈ ದೆಸೆಯಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಪಟ್ಟಣದ ಚಂದ್ರಮೌಳೇಶ್ಚರ ದೇವಸ್ಥಾನವು ಜೀರ್ಣೋದ್ಧಾರಕ್ಕೆ ಭಕ್ತಾದಿಗಳು ನೀಡಿದ ಸಹಕಾರ ಸ್ಮರಣೀಯ. ಇಂತಹ ಮಹತ್ವದ ಹಾಗೂ ಅರ್ಥಪೂರ್ಣ ಕೈಂಕರ್ಯದಲ್ಲಿ ಭಾಗಿಯಾದ ತೃಪಿಯಿದೆ ಎಂದರು.

ನೂತನ ಗೋಪುರ ಹಾಗೂ ನಂದಿ ವಿಗ್ರಹ ಪ್ರತಿಷ್ಠಾಪನೆ ಪ್ರಯುಕ್ತ ಗುರುವಾರ ಮಹಾಮೃತ್ಯುಂಜಯ ಹೋಮ, ಮಹಾಗಣಪತಿ ಹವನ ಹಾಗೂ ಸುದರ್ಶನ ಹೋಮ ಸೇರಿದಂತೆ ಚಂದ್ರಮೌಳೇಶ್ವರ ಸ್ವಾಮಿಗೆ ವಿಶೇಷ ಮಹಾರುದ್ರಾಭಿಷೇಕ ಪೂಜೆಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಸಂಘಟಿಕರು ತಿಳಿಸಿದರು.

ಈ ಸಂದರ್ಭದಲ್ಲಿ ಮುತ್ತಣ್ಣ ಚಟ್ಟೇರ, ಬಸವರಾಜ ಬಂಕದ, ಸಿದ್ದಣ್ಣ ಬಳಿಗೇರ, ಪುರಸಭೆ ಸದಸ್ಯರಾದ ಮುದಿಯಪ್ಪ ಮುಧೋಳ, ಸುಭಾಸ ಮ್ಯಾಗೇರಿ, ಮೂಕಪ್ಪ ನಿಡಗುಂದಿ, ಮಾಜಿ ಸದಸ್ಯ ಷಣ್ಮುಖಪ್ಪ ಚಿಲಝರಿ, ಸುಲೇಮಾನ ಮೋಮಿನ, ಬಸವರಾಜ ಹೂಗಾರ, ಬಸವರಾಜ ಹೂಲಿಗೇರಿ, ಪರಸಪ್ಪ ಬಂಡಿ, ವಿಜಯ ಬೂದಿಹಾಳ, ಶಿವಣ್ಣ ಸಂಗನಾಳ, ಸಂಗಪ್ಪ ಕುಂಬಾರ, ಬಸವರಾಜ ಕುಷ್ಟಗಿ, ಶೇಖಪ್ಪ ಚಳಗೇರಿ, ನಿಂಗಪ್ಪ ತೊಂಡಿಹಾಳ, ಅಶೋಕ ವನ್ನಾಲ, ಭದರಿನಾಥ ಜೋಶಿ, ಕೆ.ಸತ್ಯನಾರಾಯಣಭಟ್ಟ, ದೇವಕ್ಕ ಬೆಳವಣಿಕಿ, ವಿಜಯಲಕ್ಷ್ಮೀ ಚಟ್ಟೇರ, ಯಶೋಧಾ ಪಲ್ಲೇದ, ಶ್ವೇತಾ ಕಾರಡಿಗಿಮಠ, ಸುಮಿತ್ರಾ ಗಾಣಗೇರಿ, ರೇಣುಕಾ ಕಲ್ಲೊಡ್ಡರ ಇದ್ದರು.