ಕಬ್ಬಿನಾಲೆ ಜಲಪ್ರವಾಹಕ್ಕೆ ವೃದ್ಧೆ ಬಲಿ

| Published : Oct 08 2024, 01:10 AM IST

ಸಾರಾಂಶ

ಮುದ್ರಾಡಿ ಗ್ರಾ.ಪಂ. ವ್ಯಾಪ್ತಿಯ ಈಶ್ವರನಗರ, ಹನ್‌ಸನ್‌ಬೆಟ್ಟು, ಗುಮ್ಮಿಗುಂಡಿ, ವರಂಗ ಗ್ರಾಮದ ಅಡ್ಕ ಬಳಿಯ ಸುಮಾರು 200 ಎಕರೆಗೂ ಹೆಚ್ಚು ಭತ್ತ ಕೃಷಿಗೆ ಹಾನಿಯಾಗಿದೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಹೆಬ್ರಿ ತಾಲೂಕಿನ ಮುದ್ರಾಡಿ ಪ್ರದೇಶದ ಬಲ್ಲಾಡಿ ಗುಮ್ಮಗುಂಡಿ ತೋಡು ಹಾಗೂ ಕೆಲಕಿಲ ನದಿಯಲ್ಲಿ ಭಾನುವಾರ ಉಂಟಾದ ಭಾರಿ ಪ್ರವಾಹಕ್ಕೆ ಓರ್ವ ವೃದ್ಧೆ ಮೃತಪಟ್ಟಿದ್ದು, ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಸೋಮವಾರ ನದಿ ನೀರು, ತೋಟ ಹಾಗೂ ಮನೆಗೆ ನುಗ್ಗಿದ ನೀರು ಸಂಪೂರ್ಣವಾಗಿ ಇಳಿದಿದೆ.

ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಬಲ್ಲಾಡಿ ಎಂಬಲ್ಲಿ ಹಠಾತ್ ಜಲ ಪ್ರವಾಹದಿಂದಾಗಿ ಬಲ್ಲಾಡಿ ಬೆಂಡುಗುಡ್ಡೆಯ ವೃದ್ಧೆ ಚಂದ್ರು ಗೌಡ್ತಿ (91) ಎಂಬವರು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಸುಮಾರು ಎರಡು ಕಿ.ಮೀ. ದೂರದ ಬಲ್ಲಾಡಿಯ ಅರ್ಧನಾರೀಶ್ವರ ದೇವಸ್ಥಾನದ ಬಳಿ ಶವ ಪತ್ತೆಯಾಗಿದೆ.

ನೀರಿನಲ್ಲಿ ಕೊಚ್ಚಿ ಹೋಗಿದ್ದ ವಾಹನಗಳು: ಬಲ್ಲಾಡಿ ಗುಡ್ಡ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ 2.30ಕ್ಕೆ ಭಾರಿ ಗಾಳಿ, ಗುಡುಗು ಸಹಿತ ಮಳೆ ಸುರಿದಿದ್ದು, ಬಲ್ಲಾಡಿ ಹೊಸಕಂಬಳ ಮನೆಯ ಶೇಖರ್ ಎಂಬವರ ಓಮ್ನಿ ಕಾರು 200 ಮೀ. ದೂರಕ್ಕೆ ಪ್ರವಾಹದಲ್ಲಿ ತೇಲಿ ಹೋಗಿತ್ತು. ಕಾಂತರಬೈಲು ಗುಮ್ಮಗುಂಡಿ ನದಿಯಲ್ಲಿ ಉಂಟಾದ ಪ್ರವಾಹಕ್ಕೆ ಕೇರಳ ಮೂಲದ ಪ್ರಭಾಕರ್ ಅವರ ಬೈಕ್, ಪ್ರದೀಪ್ ಅವರ ಕಾರು, ಪ್ಲಾಟಿನ ಬೈಕ್‌ ಪ್ರವಾಹದಲ್ಲಿ ಸುಮಾರು 300 ಮೀಟರ್ ದೂರದಲ್ಲಿ ಪತ್ತೆಯಾಗಿದೆ.

* ಅಪಾರ ಹಾನಿ

ಪ್ರವಾಹದ ಪರಿಣಾಮ ದನದ ಕೊಟ್ಟಿಗೆಯು ಸಂಪೂರ್ಣ ಧರೆಶಾಹಿಯಾಗಿದೆ. 5000 ಸಾವಿರ ತೆಂಗಿನಕಾಯಿ, ರಬ್ಬರ್ ಸ್ಕ್ರಾಪ್, ಎರಡು ಪಂಪ್‌ಗಳು ಸೇರಿದಂತೆ ಕೃಷಿ ಸಲಕರಣೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ‌. ಗುಮ್ಮಗುಂಡಿ ನದಿಯಲ್ಲಿ ಭಾರಿ ಪ್ರಮಾಣದಲ್ಲಿ ಮರಳು ತುಂಬಿದ್ದು, ಮನೆಗೆ ಸಾಗುವ ರಸ್ತೆಯು ಸಂಪೂರ್ಣ ಹಾನಿಯಾಗಿದೆ. ಕಾಂತರಬೈಲು ರಬ್ಬರ್ ತೋಟದಲ್ಲಿ ಆಶ್ರಯ ಪಡೆದಿದ್ದ ಸುಮಾರು 25ಕ್ಕೂ ಹೆಚ್ಚು ಬೀಡಾಡಿ ದನಗಳು ಕೂಡ ಭಾರಿ ಪ್ರವಾಹಕ್ಕೆ ತುತ್ತಾಗಿ ಕಣ್ಮರೆಯಾಗಿವೆ ಎಂದು ಕಾಂತರಬೈಲು ನಿವಾಸಿ ಪ್ರದೀಪ್ ತಿಳಿಸಿದ್ದಾರೆ.

ಮುದ್ರಾಡಿ ಗ್ರಾ.ಪಂ. ವ್ಯಾಪ್ತಿಯ ಈಶ್ವರನಗರ, ಹನ್‌ಸನ್‌ಬೆಟ್ಟು, ಗುಮ್ಮಿಗುಂಡಿ, ವರಂಗ ಗ್ರಾಮದ ಅಡ್ಕ ಬಳಿಯ ಸುಮಾರು 200 ಎಕರೆಗೂ ಹೆಚ್ಚು ಭತ್ತ ಕೃಷಿಗೆ ಹಾನಿಯಾಗಿದೆ.ಭಾರಿ ಮಳೆಗೆ ಮೇಘ ಸ್ಫೋಟವೇ ಕಾರಣ:

ವರಂಗ, ಬಲ್ಲಾಡಿ‌, ಕಬ್ಬಿನಾಲೆ, ಅಡ್ಕ‌, ಚೆಂದುಗುಡ್ಡೆ, ಮುದ್ರಾಡಿ ಭಾಗಗಳಲ್ಲಿ ಭಾರಿ ಗುಡುಗು, ಸಿಡಿಲು ಕಾಣಿಸಿದ್ದು ಏಕಾಏಕಿ ಮಳೆ ಸುರಿದಿದೆ. ಕೆಲಕಿಲ‌ ನದಿಯ ಉಪನದಿಗಳಾದ ಗುಮ್ಮಗುಂಡಿ, ಕಬ್ಬಿನಾಲೆ ನದಿಗಳಲ್ಲಿ ನೀರಿನ ಏರಿಕೆ ಕಂಡುಬಂದಿತ್ತು. ಇದಕ್ಕೆ ಮೇಘಸ್ಫೋಟವೇ ಕಾರಣ ಎನ್ನಲಾಗಿದೆ. ಕಬ್ಬಿನಾಲೆ ಗ್ರಾಮದ ತಿಂಗಳಮಕ್ಕಿ, ಪೀತಬೈಲು ಸೇರಿದಂತೆ ಎಲ್ಲಿಯೂ ಗುಡ್ಡ ಕುಸಿತದ ಕುರುಹು ಕಂಡು ಬಂದಿಲ್ಲ ಎಂದು ಅರಣ್ಯ ಇಲಾಖೆ ತಿಳಿಸಿದೆ.ಪ್ರವಾಹ ಪೀಡಿತ ಸ್ಥಳಕ್ಕೆ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಕುಂದಾಪುರ ವಿಭಾಗಾಧಿಕಾರಿ ಮಹೇಶ್ ಚಂದ್ರ, ಹೆಬ್ರಿ ತಹಸೀಲ್ದಾರ್ ಪ್ರಸಾದ್, ಕಾರ್ಕಳ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.