ಚುನಾವಣಾ ರಾಯಭಾರಿಗಳಿಂದ ಮತದಾನ

| Published : Apr 27 2024, 02:02 AM IST / Updated: Apr 27 2024, 08:51 AM IST

Lokasabhe Election 2024 Voting Live Blog 04

ಸಾರಾಂಶ

ಬೆಂಗಳೂರಿನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ರಾಯಭಾರಿ ರಮೇಶ್‌ ಅರವಿಂದ್‌ ಸೇರಿದಂತೆ ಹಲವರು ಮತದಾನ ಮಾಡಿದರು.

ಬೆಂಗಳೂರು: ಲೋಕಸಭಾ ಚುನಾವಣೆ-2024ರ ಅಂಗವಾಗಿ ಚುನಾವಣಾ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ ಚಲನಚಿತ್ರ ನಟ ಹಾಗೂ ನಿರ್ದೇಶಕರಾದ ರಮೇಶ್ ಅರವಿಂದ್ ಅವರು ತಮ್ಮ ಕುಟುಂಬದೊಂದಿಗೆ ಪದ್ಮನಾಭನಗರದ ಬಿ.ಎನ್.ಎಂ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಚೊಂಬು, ಖಾಲಿ ಸಿಲಿಂಡರ್‌ ಪ್ರದರ್ಶನ

ಬೆಂಗಳೂರಿನ ಮಂಜುನಾಥ್‌ನಗರ ಗೌತಮ್ ಕಾಲೇಜಿನಲ್ಲಿ ಮತ ಹಾಕಲು ಬಂದ ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಚೊಂಬು‌, ಖಾಲಿ ಸಿಲಿಂಡರ್ ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದರು.92 ವರ್ಷದ ಮಹಿಳೆ ಮತದಾನ

ಬೆಂಗಳೂರು ಉತ್ತರ ಲೋಕಸಭಾ ವ್ಯಾಪ್ತಿಯ ಬ್ಯಾಟರಾಯನಪುರದ 92 ವರ್ಷದ ಹಿರಿಯ ನಾಗರಿಕರಾದ ಇಂದಿರಮ್ಮ ಅಯ್ಯರ್ ಅವರು ಗಾಲಿಕುರ್ಚಿ ಸಹಾಯದೊಂದಿಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಮತಗಟ್ಟೆಗೆ ಬರಲು ಇಂದಿರಮ್ಮ ಅಯ್ಯರ್‌ಗೆ ಅವರ ಕುಟುಂಬದ ಸದಸ್ಯರು ನೆರವಾದರು. ಮತ ಹಾಕಿದ ಕುಂಬ್ಳೆ, ದ್ರಾವಿಡ್‌

ಕ್ರಿಕೆಟ್ ಆಟಗಾರರಾದ ಅನಿಲ್ ಕುಂಬ್ಳೆ ಅವರು ತಮ್ಮ ಕುಟುಂಬದೊಂದಿಗೆ ಪದ್ಮನಾಭನಗರದ ಕೆಂಪೇಗೌಡ ಮೆಡಿಕಲ್ ಕಾಲೇಜಿನ ಮತಗಟ್ಟೆಯಲ್ಲಿ ಮತ್ತು ಭಾರತ ಕ್ರಿಕೆಟ್‌ ತಂಡದ ಕೋಚ್‌ ರಾಹುಲ್‌ ದ್ರಾವಿಡ್‌ ಅವರು ಡಾಲರ್ಸ್‌ ಕಾಲೋನಿಯ ಶಿಕ್ಷಾ ಪ್ರೀ ಸ್ಕೂಲ್‌ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಆಕ್ಸಿಜನ್‌ ನೆರವು

ಬ್ಯಾಟರಾಯನಪುರದ ಮೈಕೋ ಲೇಔಟ್‌ನಲ್ಲಿ ಅನಾರೋಗ್ಯ ಪೀಡಿದ ಮತದಾರರೊಬ್ಬರು ಆಮ್ಲಜನಕದ ನೆರವಿನೊಂದಿಗೆ ಬಂದು ಮತ ಚಲಾವಣೆ ಮಾಡಿದರು. ಸಾಮಾನ್ಯ ಮತದಾರರಂತೆ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಅದೇ ರೀತಿ ಬೆನ್ನುಮೂಳೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಎರಡು ದಿನದ ಹಿಂದೆ ಡಿಸ್ಜಾರ್ಜ್‌ ಆಗಿದ್ದ ಡೇಬಾಸ್‌ ಮುಖರ್ಜಿ ಎಂಬುವರು ಆರ್‌ಟಿ ನಗರದ ಮತ ಕೇಂದ್ರಕ್ಕೆ ವಾಕರ್ ನೆರವಿನೊಂದಿಗೆ ಬಂದು ಮತದಾನ ಮಾಡಿದರು.ಕುಸಿದು ಬಿದ್ದ ಮಹಿಳೆ

ಜೆಪಿ ನಗರದ 8ನೇ ಹಂತದ ಜಂಬೂ ಸವಾರಿ ದಿನ್ನೆಯ ಮತ ಕೇಂದ್ರದಲ್ಲಿ ಮಹಿಳೆಯೊಬ್ಬರು ಇದ್ದಕ್ಕಿಂದಂತೆ ಕುಸಿದು ಬಿದ್ದರು. ಸ್ಥಳದಲ್ಲಿಯೇ ಇದ್ದ ಬೊಮ್ಮಸಂದ್ರದ ನಾರಾಯಣ ಆರೋಗ್ಯ ಕೇಂದ್ರದಲ್ಲಿ ಮೂತ್ರಪಿಂಡ ತಜ್ಞ ಡಾ। ಗಣೇಶ್‌ ಶ್ರೀನಿವಾಸ್‌ ಪ್ರಸಾದ್‌ ತಕ್ಷಣ ಸಿಪಿಆರ್‌ ಚಿಕಿತ್ಸೆ ನೀಡಿದರು. ನಂತರ ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಮಾದರಿ ಮತದಾರರು

ಸಿ.ವಿ.ರಾಮನ್‌ ನಗರದ ನಿವಾಸಿ ಶಿವರಾಮಕೃಷ್ಣ ಶಾಸ್ತ್ರಿ ತಮ್ಮ 86ನೇ ವಯಸ್ಸಿನಲ್ಲೂ ಉತ್ಸಾಹದಿಂದ ಮತದಾನ ಮಾಡಿದರು. ಮನೆಯಿಂದ ಮತದಾನಕ್ಕೆ ಅವಕಾಶವಿದ್ದರೂ, ಅದು ಮತದಾನಕ್ಕೆ ಮಹತ್ವ ಕೊಟ್ಟಂತಾಗುವುದಿಲ್ಲ ಎಂಬ ಉದ್ದೇಶದಿಂದ ಮತಗಟ್ಟೆಗೆ ಹಾಜರಾಗಿ ಮತದಾನ ಮಾಡಿದ್ದು ವಿಶೇಷ. ಶಾಮಿಯಾನ ಕಿತ್ತಾಕಿದ ಪೊಲೀಸರು

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೆ.ಆರ್‌.ಪುರ ಮತಗಟ್ಟೆ ಸಂಖ್ಯೆ 223ರ ವ್ಯಾಪ್ತಿಯ ಟಿ.ಸಿ.ಪಾಳ್ಯ ಮುಖ್ಯ ರಸ್ತೆಯಲ್ಲಿ ಚೈತನ್ಯ ಟೆಕ್ನೋ ಸ್ಕೂಲ್‌ ಮತ ಕೇಂದ್ರದಿಂದ 100 ಮೀಟರ್‌ ವ್ಯಾಪ್ತಿಯೊಳಗಿದ್ದ ಪಕ್ಷವೊಂದರ ಶಾಮಿಯಾನವನ್ನು ಪೊಲೀಸರು ಕಿತ್ತೆಸೆದರು. ಈ ವೇಳೆ ಕೆಲವೊತ್ತು ಪಕ್ಷದ ಮುಖಂಡರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದ ಘಟನೆ ನಡೆಯಿತು.ವಿದೇಶದಿಂದ ಬಂದವರು

ಆಸ್ಟ್ರೇಲಿಯಾದಲ್ಲಿ ಮಕ್ಕಳೊಂದಿಗೆ ನೆಲೆಸಿದ್ದ ವಿದ್ಯಾರಣ್ಯಪುರ ತಿಂಡ್ಲುವಿನ ಸುಧೀಂದ್ರ ಕುಲಕರ್ಣಿ ಮತ್ತು ವಿಜಯಮಾಲಾ ದಂಪತಿ ಮತದಾನಕ್ಕಾಗಿಯೇ ಬೆಂಗಳೂರಿಗೆ ಆಗಮಿಸಿದ್ದರು. ಮೂಲತಃ ತಿಂಡ್ಲುವಿನ ಎಪಿಸಿ ಲೇಔಟ್‌ನ ನಿವಾಸಿಗಳಾಗಿದ್ದು, ಕುಟುಂಬದ ಸದಸ್ಯರೊಂದಿಗೆ ಬಂದು ಮತ ಚಲಾಯಿಸಿದರು. ಆಸ್ಪತ್ರೆಯಲ್ಲಿ ಮತದಾನ

ಚುನಾವಣಾ ಆಯೋಗ ಮತ್ತು ಬಿಬಿಎಂಪಿ ಸಹಯೋಗದಲ್ಲಿ ನಗರದ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಳರೋಗಿಗಳಿಂದ ಮತದಾನ ಕಾರ್ಯ ಕೈಗೊಂಡಿತ್ತು. ಸುಮಾರು 41 ರೋಗಿಗಳು ಆಸ್ಪತ್ರೆಯಲ್ಲೇ ಮತದಾನ ಮಾಡಿದ್ದು ವಿಶೇಷ.ಮತ ಹಾಕಿದ ಅನುಪ್ ಶ್ರೀಧರ್

ಚುನಾವಣಾ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಅನುಪ್ ಶ್ರೀಧರ್ ಅವರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಶಾಂತಿನಗರ ವ್ಯಾಪ್ತಿಯ ಶ್ರೀ ಧನರಾಜ್ ಪೂಲ್ಚಂದ್ ಹಿಂದಿ ಹೈ ಸ್ಕೂಲ್‌ನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.ಕೈಕೊಟ್ಟ ಮತಯಂತ್ರ

ತಾಂತ್ರಿಕ ಸಮಸ್ಯೆಯಿಂದ ಮತಯಂತ್ರ ಕೆಟ್ಟು ಹೋಗಿದ್ದ ಪರಿಣಾಮ ಚಲನಚಿತ್ರ ಹಿರಿಯ ನಟ ಅನಂತ್‌ನಾಗ್‌ ಮತ್ತು ಕುಟುಂಬ ಸದಸ್ಯರು ಸುಮಾರು 30 ನಿಮಿಷ ಮತದಾನಕ್ಕಾಗಿ ಕಾಯಬೇಕಾಯಿತು. ಆ ನಂತರ ಚುನಾವಣಾ ಸಿಬ್ಬಂದಿ ವಿವಿಪ್ಯಾಡ್‌ ಬದಲಿಸಿದ ನಂತರ ಮತದಾನ ಪ್ರಕ್ರಿಯೆ ಮುಂದುವರೆಯಿತು.ವೋಟ್‌ ಹಾಕಿ ತಿಂಡಿ ತಿನ್ನಿ!

ನಗರದ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್‌ ಹೋಟೆಲ್‌ನಲ್ಲಿ ಮತ ಹಾಕಿ ಬಂದವರಿಗೆ ಉಚಿತ ಬೆಣ್ಣೆದೋಸೆ, ಗೀರೈಸ್‌, ಜ್ಯೂಸ್‌ ಉಚಿತವಾಗಿ ವಿತರಿಸಲಾಯಿತು. ಬೆಳ್ಳಂದೂರಿನ ರೆಸ್ಟೋ-ಪಬ್ ಡೆಕ್ ಆಫ್ ಬ್ರೂಸ್​​ನಲ್ಲಿ ಉಚಿತ ಮಗ್​ ಬಿಯರ್​ ಆಫರ್‌ ಮಾಡಲಾಗಿತ್ತು. ಕೆಲವೆಡೆ ಬಿಲ್‌ ಮೇಲೆ ಶೇ.20ರಷ್ಟು ರಿಯಾಯಿತಿ ಘೋಷಿಸಲಾಗಿತ್ತು.ಮತದಾನ ಸ್ಥಗಿತ

ಹೊಸಕೆರೆಹಳ್ಳಿ ಸರ್ಕಾರಿ ಶಾಲೆಯಲ್ಲಿ ಇವಿಎಂ ಯತ್ರ ಕೆಟ್ಟಿದ್ದರಿಂದ ಕೆಲಹೊತ್ತು ಮತದಾನ ಸ್ಥಗಿತಗೊಂಡಿತ್ತು. ಚುನಾವಣಾ ಸಿಬ್ಬಂದಿ ಮತಯಂತ್ರ ದುರಸ್ತಿಗೆ ಹರಸಾಹಸ ಪಟ್ಟರು ಪ್ರಯೋಜನವಾಗದ್ದರಿಂದ ಮತಯಂತ್ರವನ್ನು ಬದಲಿಸಿ, ಮತದಾನ ಪ್ರಕ್ರಿಯೆಗೆ ಅವಕಾಶ ಮಾಡಿಕೊಟ್ಟರು.ಹೆಸರೇ ಮಾಯ!

ಎಚ್‌ಎಂಟಿ ಲೇಔಟ್‌ ಗಂಗಾನಗರದ ನಿವಾಸಿ ವಸಿಮುಲ್ಲಾ ಖಾನ್‌ ಅವರು ಕಳೆದ 30 ವರ್ಷದಿಂದ ಅದೇ ಏರಿಯಾದಲ್ಲಿ ವಾಸವಾಗಿದ್ದರೂ ಮತದಾನ ಮಾಡಲು ಸಾಧ್ಯವಾಗಿಲ್ಲ. ಮತಪಟ್ಟಿಯಲ್ಲಿ ಕುಟುಂಬದ ಎಲ್ಲರ ಹೆಸರು ಇದ್ದರೂ ವಸಿಮುಲ್ಲಾ ಖಾನ್‌ ಅವರ ಹೆಸರೇ ಮಾಯ. ಚುನಾವಣಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಸಿಮುಲ್ಲಾಖಾನ್‌.ಮತಗಟ್ಟೆಗೆ ಬಂದ ನವ ದಂಪತಿ

ಮದುವೆಯಾಗ್ತಿದಂತೆ ಮತಗಟ್ಟೆಗೆ ಬಂದು ಮತ ಚಲಾಯಿಸಿ ನವ ದಂಪತಿಗಳು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶ್ರೀನಗರದ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಿನೋದ್ ಯಾದವ್ ಮತ್ತು ಕವಿತಾ ಯಾದವ್ ದಂಪತಿ.