ಕೇಂದ್ರ ಸರ್ಕಾರ ಚುನಾವಣೆ ಆಯೋಗ ಬಳಸಿಕೊಂಡು ಕೆಲವು ರಾಜ್ಯಗಳಲ್ಲಿ ರಾಜಕೀಯ ಲಾಭಕ್ಕಾಗಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಪ್ರಯತ್ನ
ಕಾರಟಗಿ: ಪಟ್ಟಣದ ನವಲಿ ರಸ್ತೆಯ ವಾಣಿಜ್ಯ ಮಳಿಗೆಯೊಂದರಲ್ಲಿ ಮತದಾರರ ಸಮಗ್ರ ಪರಿಷ್ಕರಣೆ (ಎಸ್ಐಆರ್) ಸಂಬಂಧಿತ ಪ್ರಕ್ರಿಯೆಯಲ್ಲಿ ಸಮಸ್ಯೆ ಎದುರಿಸುವ ಮತದಾರರ ನೆರವಿಗಾಗಿ ಸಹಾಯವಾಣಿ ಕಚೇರಿ ಭಾನುವಾರ ತೆರೆಯಲಾಗಿದೆ. ಕನಕಗಿರಿ ಕ್ಷೇತ್ರದ ಕಾಂಗ್ರೆಸ್ ಮುಖಂಡ, ತಂಗಡಗಿ ಟ್ರಸ್ಟ್ ಕಾರ್ಯದರ್ಶಿ ವೆಂಕಟೇಶ ತಂಗಡಗಿ ಕಚೇರಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಚುನಾವಣಾ ಆಯೋಗವು ಬಿಜೆಪಿಗೆ ಅನುಕೂಲವಾಗುವ ರೀತಿಯಲ್ಲಿ ಎಸ್ಐಆರ್ ಪ್ರಕ್ರಿಕೆ ನಡೆಸುತ್ತಿದೆ. ಚುನಾವಣಾ ಆಯೋಗ ನಿಷ್ಪಕ್ಷಪಾತ ಕಾರ್ಯನಿರ್ವಹಿಸಬೇಕು ಆಗ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ. ಅರ್ಜಿಯಲ್ಲಿ ತಪ್ಪು ಮಾಹಿತಿ ಕೊಟ್ಟರೆ ಅವರ ಹೆಸರು ಅಂತಿಮ ಪಟ್ಟಿಯಲ್ಲಿ ಬರುವುದಿಲ್ಲ. ಪ್ರತಿ ಮತದಾರರು ಅರ್ಜಿ ತುಂಬಲು ನಮ್ಮ ಬಿಎಲ್ಒಗಳ ಸಹಾಯ ಮಾಡಬೇಕು.ಮಾಹಿತಿ ಸರಿ ಇರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಸ್ವಲ್ಪ ಎಚ್ಚರ ತಪ್ಪಿದಲ್ಲಿ ಮುಂದೆ ಅರ್ಹ, ಪ್ರಾಮಾಣಿಕ ಮತದಾರರರಿಗೆ ಅನ್ಯಾಯವಾಗಲಿದೆ ಎಂದರು.ಕೇಂದ್ರ ಸರ್ಕಾರ ಚುನಾವಣೆ ಆಯೋಗ ಬಳಸಿಕೊಂಡು ಕೆಲವು ರಾಜ್ಯಗಳಲ್ಲಿ ರಾಜಕೀಯ ಲಾಭಕ್ಕಾಗಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಪ್ರಯತ್ನ ನಡೆಸುತ್ತಿದೆ. ಇಂಥ ಪ್ರಕ್ರಿಯೆಗಳ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲಾಗುತ್ತಿದೆ. ಈ ನಿಟ್ಟಿ ನೈಜ ಮತದಾರರಿಗೆ ಅನ್ಯಾಯವಾಗಲು ಬಿಡಬಾರದು ಎನ್ನುವ ಕಾರಣಕ್ಕೆ ಕ್ಷೇತ್ರದ ಮತದಾರರಿಗೆ ನೆರವಾಗುವ ಉದ್ಧೇಶದಿಂದ ಕಾರಟಗಿ ಹಾಗೂ ಕನಕಗಿರಿ ಬ್ಲಾಕ್ ಎರಡರಲ್ಲಿ ಎಸ್.ಐ.ಆರ್ ಸಹಾಯವಾಣಿ ಆರಂಭಿಸಲಾಗಿದ್ದು, ಮತದಾರ ಬಾಂಧವರು ಇದರ ಸದುಪಯೋಗಪಡಿದುಕೊಳ್ಳಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್ ಮತ್ತು ನ್ಯಾಯವಾದಿ ಶಿವರೆಡ್ಡಿ ನಾಯಕ ಮಾತನಾಡಿ, ರಾಜ್ಯದಲ್ಲಿ ಹಲವು ಪ್ರಗತಿಪರ ಸಂಘಟನೆ ಎಸ್.ಐ.ಆರ್ ಬಗ್ಗೆ ಆತಂಕ ಸೂಚಿಸಿವೆ. ಎಸ್ಐಆರ್ ಜಾರಿಗೆ ತರುವ ಮೂಲಕ ಒಂದು ಅಲ್ಪಸಂಖ್ಯಾತ, ದಲಿತ ಹಾಗೂ ಹಿಂದುಳಿದ ವರ್ಗದವರ ಮತದಾನ ಹಕ್ಕನ್ನು ಕಸಿಯುವ ಹುನ್ನಾರ ಕೇಂದ್ರದ ಬಿಜೆಪಿ ಸರ್ಕಾರ ಮಾಡಿದೆ. ಆ ಕಾರಣಕ್ಕೆ ನಮ್ಮೆಲ್ಲ ಕಾಂಗ್ರೆಸ್ ಕಾರ್ಯಕರ್ತರು, ಬಿಎಲ್ 2 ಕಾರ್ಯಕರ್ತರು ನಮ್ಮ ಕ್ಷೇತ್ರದ ಮತದಾರರ ಹಿತ ಕಾಪಾಡಲು ಶ್ರಮಿಸಬೇಕು. ಈ ನಿಟ್ಟಿನಲ್ಲಿ ಈ ಕಚೇರಿ ಆರಂಭಿಸಲಾಗಿದೆ ಎಂದರು.ಎದ್ದೇಳು ಕರ್ನಾಟಕದ ಎಂ.ಡಿ.ಶಿರಾಜ್, ಪುರಸಭೆ ಅಧ್ಯಕ್ಷ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ದೊಡ್ಡಬಸವರಾಜ ಬೂದಿ, ಸದಸ್ಯ ಹಿರೇಬಸಪ್ಪ ಸಜ್ಜನ್, ಕಾಂಗ್ರೆಸ್ ಹಿರಿಯ ಮುಖಂಡ ಬಸವರಾಜ ನೀರಗಂಟಿ, ದಾನನಗೌಡ ಪನ್ನಾಪುರ, ದುರುಗೇಶ ಪ್ಯಾಟ್ಯಾಳ, ವೀರೇಶ ತಳವಾರ, ಸುರೇಶ ಬೆನಕಟ್ಟಿ, ಶರಣಪ್ಪ ಭೋವಿ, ಅಮ್ರುಲ್ ಹುಸೇನ್, ಮಹಿಬುಲಿ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್, ನಗರ ಘಟಕ ಅಧ್ಯಕ್ಷ ಅಯ್ಯಪ್ಪ ಉಪ್ಪಾರ, ದೇವರಾಜ್ ಕಟ್ಟಿಮನಿ, ಜನಗಂಡೆಪ್ಪ ಪೂಜಾರ್, ಬಸವರಾಜ ಸಾಹುಕಾರ್, ಶರಣೇಗೌಡ ಗುಂಡೂರು, ಹನುಮೇಶ ಟಿವಿ, ಶಿವಕುಮಾರ ವಕೀಲರು, ಗುರಪ್ಪ ನಾಗನಕಲ್ ಇನ್ನಿತರರು ಇದ್ದರು.