ಚುನಾವಣೆ ಆಯುಕ್ತರ ಮಸೂದೆ, ದೇಶಾದ್ಯಂತ ಸಿಎಫ್‌ಡಿ ಆಂದೋಲನ

| Published : Dec 26 2023, 01:32 AM IST / Updated: Dec 26 2023, 01:33 AM IST

ಚುನಾವಣೆ ಆಯುಕ್ತರ ಮಸೂದೆ, ದೇಶಾದ್ಯಂತ ಸಿಎಫ್‌ಡಿ ಆಂದೋಲನ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನಶಿಲ್ಪಿ ಅಂಬೇಡ್ಕರ್‌ ಆಶಯಗಳು ದೇಶದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಉಲ್ಲಂಘನೆ ಮೂಲಕ ವಿವಾದಗಳು ಸೃಷ್ಟಿಯಾಗುತ್ತಲೇ ಇವೆ. ಚುನಾವಣಾ ಆಯೋಗ ನೇಮಕ ಮಸೂದೆಯೂ ಈಗ ಈ ಸಮಸ್ಯೆಗೆ ಸಿಲುಕಿದೆ. ಚುನಾವಣಾ ಆಯೋಗವನ್ನು ಕಾರ್ಯಾಂಗದ ಕೈಗೊಂಬೆಯಾಗುವಂತೆ ಮಾಡುವ ಉದ್ದೇಶದಿಂದ ಸಂಸತ್ತಿನಲ್ಲಿ ಅನುಮೋದಿಸಿರುವ ಮಸೂದೆ ವಿರುದ್ಧ ದೇಶಾದ್ಯಂತ ಆಂದೋಲನವನ್ನು ಆರಂಭಿಸಲು ಸಿಟಿಜನ್ ಫಾರ್ ಡೆಮಾಕ್ರಸಿ ತೀರ್ಮಾನಿಸಿದೆ ಎಂದು ಅಧ್ಯಕ್ಷ ಎಸ್.ಆರ್.ಹಿರೇಮಠ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಚುನಾವಣಾ ಆಯೋಗವನ್ನು ಕಾರ್ಯಾಂಗದ ಕೈಗೊಂಬೆಯಾಗುವಂತೆ ಮಾಡುವ ಉದ್ದೇಶದಿಂದ ಸಂಸತ್ತಿನಲ್ಲಿ ಅನುಮೋದಿಸಿರುವ ಮಸೂದೆ ವಿರುದ್ಧ ದೇಶಾದ್ಯಂತ ಆಂದೋಲನವನ್ನು ಆರಂಭಿಸಲು ಸಿಟಿಜನ್ ಫಾರ್ ಡೆಮಾಕ್ರಸಿ (ಸಿಎಫ್‌ ಡಿ) ತೀರ್ಮಾನಿಸಿದೆ ಎಂದು ಅಧ್ಯಕ್ಷ ಎಸ್.ಆರ್.ಹಿರೇಮಠ ಹೇಳಿದರು.

ನಗರದ ಪ್ರೆಸ್‌ ಟ್ರಸ್ಟ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಂವಿಧಾನ ರಚನಾ ಸಭೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಕಾರ್ಯಾಂಗದ ಅಧಿಕಾರ ಬಗ್ಗೆ ನೀಡಿದ್ದ ಎಚ್ಚರಿಕೆಯನ್ನು ಧಿಕ್ಕರಿಸಿ ಮತ್ತು ಸರ್ವೋಚ್ಚ ನ್ಯಾಯಾಲಯವು ಮಾರ್ಚ್ 2023ರಲ್ಲಿ ನೀಡಿದ್ದ ತೀರ್ಪಿನ ವಿರುದ್ಧವಾಗಿ ಈ ಆಂದೋಲನ ನಡೆಯಲಿದೆ. ಈ ಆಂದೋಲನ ಎಲ್ಲ ಸಂಘಟನೆಗಳು, ಚಳುವಳಿಗಾರರು ಮತ್ತು ಹೋರಾಟಗಾರರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ತಿಳಿಸಿದರು.

ಸಂವಿಧಾನ ರಚನಾ ಸಭೆಯಲ್ಲಿನ ಚರ್ಚೆಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ನಮ್ಮ ಜನತಂತ್ರದ, ಸಂವಿಧಾನದ ಮತ್ತು ಅದರ ಮೌಲ್ಯಗಳ ರಕ್ಷಣೆಗಾಗಿ ನೀಡಿದ್ದ ಮಹತ್ವದ ಗಂಭೀರ ಎಚ್ಚರಿಕೆಯನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಚುನಾವಣಾ ಆಯೋಗದ ನೇಮಕಾತಿಯನ್ನು ಕಾರ್ಯಾಂಗವು ತನ್ನ ಕೈವಶ ಮಾಡಿಕೊಳ್ಳುವುದಕ್ಕೆ ಅನುವು ಮಾಡಿಕೊಡಬಲ್ಲಂಥ ಮಸೂದೆ ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ. ಈ ಮಸೂದೆಯು ರಾಷ್ಟ್ರಪತಿ ಅಂಕಿತಕ್ಕಾಗಿ ಕಾಯುತ್ತಿದೆ. ಒಕ್ಕೂಟ ಸರ್ಕಾರವು 1949ರಲ್ಲಿ ಡಾ. ಬಿ.ಆರ್. ಅಂಬೆಡ್ಕರ್ ಅವರು ಸಂವಿಧಾನ ರಚನಾ ಸಭೆಯಲ್ಲಿ ನೀಡಿದ್ದ ಎಚ್ಚರಿಕೆಯನ್ನು ಧಿಕ್ಕರಿಸಿ ಮತ್ತು ಸರ್ವೋಚ್ಚ ನ್ಯಾಯಾಲಯದ 2023ರ ತೀರ್ಪಿನ ಆಶಯ ಮತ್ತು ಸತ್ವವನ್ನು ಶಿಥಿಲಗೊಳಿಸಿ, ರಾಜ್ಯಸಭೆಯಲ್ಲಿ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ಆಯ್ಕೆ ಮಸೂದೆಯನ್ನು ಮಂಡಿಸಿ ಅನುಮೋದಿಸಲಾಗಿದೆ ಎಂದು ಆರೋಪಿಸಿದರು.‌

50 ಯುವಕರಿಗೆ ತರಬೇತಿ:

ಜನಾಂದೋಲನ ಮಹಾಮೈತ್ರಿಯು ತನ್ನ ಸಭೆಯಲ್ಲಿ ಬಿಜೆಪಿ ಸರ್ಕಾರ 2020ರಲ್ಲಿ ಜಾರಿಗೊಸಿರುವ ರೈತ-ವಿರೋಧಿ ಮತ್ತು ಕಾರ್ಪೊರೇಟ್ ಪರವಾದ ಮೂರು ಕೃಷಿ ಕಾಯಿದೆಗಳನ್ನು ರದ್ದುಪಡಿಸುವಂತೆ ಕರ್ನಾಟಕ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಸಮಗ್ರ ಚಳವಳಿ ಆರಂಭಿಸಲು ಹಾಗೂ 50 ಯುವಕರಿಗೆ ತರಬೇತಿ ನೀಡುವುದಕ್ಕಾಗಿ ಸಂಘಟನೆಯ ಎಲ್ಲ ನಾಯಕರ ಜೊತೆಯಲ್ಲಿ ಒಂದು ದಿನದ ಸಮಾಲೋಚನೆ ಸಭೆಯನ್ನು ನಡೆಸಲು ತೀರ್ಮಾನಿಸಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಗಿರೀಶ್ ಆಚಾರ್ ಇದ್ದರು.

- - - ಬಾಕ್ಸ್‌ ಜಯಪ್ರಕಾಶ್‌ ನಾರಾಯಣ ಕಟ್ಟಿದ ಸಂಸ್ಥೆ ಸಿಟಿಜನ್ ಫಾರ್ ಡೆಮಾಕ್ರಸಿ (ಸಿಎಫ್‌ಡಿ)ಯು 1974ರಲ್ಲಿ ಲೋಕನಾಯಕ ಜಯಪ್ರಕಾಶ್ ನಾರಾಯಣ ಅವರು ಭಾರತದಲ್ಲಿ ಜನತಂತ್ರವನ್ನು ಬಲಪಡಿಸಲು, ಅದು ಬೇರೂರುವಂತೆ ಮಾಡಲು ಮತ್ತು ವಿಸ್ತೃತಗೊಳಿಸಲು ಆರಂಭ ಮಾಡಿದ ಸಂಸ್ಥೆ. ಜಯಪ್ರಕಾಶ್ ನಾರಾಯಣ ಅವರು ಇಂದಿರಾಗಾಂಧಿ ಜೂನ್ 1975ರಿಂದ 1977ರವರೆಗೆ ಜಾರಿಗೊಳಿಸಿದ್ದ "ಘೋಷಿತ ತುರ್ತು ಪರಿಸ್ಥಿತಿ”ಯ ಸಂಕೋಲೆಯಿಂದ ಭಾರತದ ಜನತಂತ್ರವನ್ನು ರಕ್ಷಿಸುವುದಕ್ಕಾಗಿ ಮತ್ತು ಜನತಂತ್ರದ ಮರುಸ್ಥಾಪನೆಗಾಗಿ ಚಾರಿತ್ರಿಕ ಹೋರಾಟ ನಡೆಸಿದವರು. ಸಿಟಿಜನ್ ಫಾರ್ ಡೆಮಾಕ್ರಸಿಯು ಪ್ರಸ್ತುತ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರವು ಪ್ರಜಾಪ್ರಭುತ್ವ ವಿರೋಧಿಯಾದ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರನ್ನು ನೇಮಿಸುವ ಮಸೂದೆ-2023 ಸಂಸತ್ತಿನಲ್ಲಿ ಅನುಮೋದಿಸಿದೆ. ಇದರ ವಿರುದ್ಧ ರಾಷ್ಟ್ರ ವ್ಯಾಪಿ ಆಂದೋಲನವನ್ನು ಆರಂಭಿಸಲು ತೀರ್ಮಾನಿಸಿದೆ ಎಂದು ತಿಳಿಸಿದರು.

- - - -25ಎಸ್‌ಎಂಜಿಕೆಪಿ01: ಎಸ್‌.ಆರ್‌.ಹಿರೇಮಠ