ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚಿಕ್ಕಮಗಳೂರು ನಗರಸಭೆಯ 2021-26ನೇ ಸಾಲಿನ ಕೊನೆಯ 9 ತಿಂಗಳ ಅವಧಿಗೆ ನೂತನ‌ ಅಧ್ಯಕ್ಷರ ಆಯ್ಕೆಗೆ ಮೇ 21 ರಂದು ಚುನಾವಣೆ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಬಿಜೆಪಿಯ ಸದಸ್ಯರು ಅಧ್ಯಕ್ಷರಾಗಿ ಅಧಿಕಾರ ನಡೆಸುವುದು ಬಹುತೇಕ ಖಚಿತವಾಗಿದೆ.

ಚಿಕ್ಕಮಗಳೂರು ನಗರಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿದ್ದರೂ, ಒಳಗಿನ ಭಿನ್ನಮತದಿಂದಾಗಿ ಈಗಾಗಲೇ ಮೂವರು ಸದಸ್ಯರು ಬಿಜೆಪಿಯಿಂದ ದೂರ ಉಳಿದಿದ್ದಾರೆ. ಆದರೆ, ಜೆಡಿಎಸ್ ಬೆಂಬಲವೂ ಬಿಜೆಪಿಗೆ ಸಿಕ್ಕಿರುವುದರಿಂದಾಗಿ ಮತ್ತೆ ಕೊನೆ ಒಂಬತ್ತು ತಿಂಗಳೂರು ಬಿಜೆಪಿ ಅಧಿಕಾರಕ್ಕೇರುವುದು ನಿಚ್ಚಳವಾಗಿದೆ.

35 ಸಂಖ್ಯಾಬಲದ ನಗರಸಭೆಯಲ್ಲಿ ಬಿಜೆಪಿಯಿಂದ‌ 18, ಕಾಂಗ್ರೆಸ್ 12, ಎಸ್ ಡಿಪಿಐ 1, ಪಕ್ಷೇತರ 1, ಮೂವರು ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದರು.

ಇದಲ್ಲದೆ ಅಧ್ಯಕ್ಷರ ಆಯ್ಕೆಗೆ ಓರ್ವ ಎಂಎಲ್ಎ ಹಾಗೂ ಎಂಪಿ ಮತ್ತು ಇಬ್ಬರು ಎಂಎಲ್ ಸಿಗಳು ಮತ ಚಲಾವಣೆಯ ಅಧಿಕಾರ ಹೊಂದಿದ್ದಾರೆ. ಹೀಗಾಗಿ ಪೂರ್ಣ ಬಹುಮತ ಪಡೆದಿರುವ ಬಿಜೆಪಿ ಅಧಿಕಾರದ ಗದ್ದುಗೆ ಏರುವುದರಲ್ಲಿ ಅನುಮಾನವಿಲ್ಲ. ಆದರೆ ಬಿಜೆಪಿಯಲ್ಲೇ ಒಂದಷ್ಟು ಗೊಂದಲಗಳಿವೆ ಬಿಜೆಪಿಯಿಂದ‌ ಗೆದ್ದ 18 ಸದಸ್ಯರಲ್ಲಿ ಮೂವರು ಬಿಜೆಪಿಯಿಂದ ಮಾನಸಿಕವಾಗಿ ದೂರ‌ ಸರಿದಂತಿದ್ದು ದೈಹಿಕವಾಗಿ ಮಾತ್ರ ಬಿಜೆಪಿ ಜೊತೆ ಇದ್ದಾರೆ. ಆದರೆ ಜೆಡಿಎಸ್ ಮೈತ್ರಿ ಕಾರಣದಿಂದಾಗಿ ಮೂರು ಸದಸ್ಯರು ಬಿಜೆಪಿ ಮೈತ್ರಿ ಪಾಳಯಕ್ಕೆ ಬಂದಿರಿವುದರಿಂದ ಹಾಗೂ ಇಬ್ಬರು ಪರಿಷತ್ ಸದಸ್ಯರು ಹಾಗೂ ಓರ್ವ ಎಂಪಿ ಬಿಜೆಪಿ ಅಭ್ಯರ್ಥಿ ಪರವಾಗಿರುವುದರಿಂದ ಬಿಜೆಪಿ ಗೆಲುವಿನ ವಿಶ್ವಾಸದಲ್ಲಿದೆ.


ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಜೋರು

ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಒಲಿದು ಬಂದಿದೆ. ಹೀಗಾಗಿ ಕೊನೆಯ 9 ತಿಂಗಳ ಅವಧಿಗೆ ಅಧ್ಯಕ್ಷರಾಗ ಬಯಸಿರುವ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ. ಬಿಜೆಪಿ ಸದಸ್ಯೆ ಉಮಾದೇವಿ ಕೃಷ್ಣಪ್ಪ, ನಗರ ಸಭೆ ಮಾಜಿ ಅಧ್ಯಕ್ಷೆ ಕವಿತಾ ಶೇಖರ್ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಳಿದಂತೆ ಸೊಸೆ ದೀಪಾ ರವಿಕುಮಾರ್ ಹೆಸರು ನಗರಸಭೆ ಅಧ್ಯಕ್ಷಗಾದಿಗೆ ಮೊದಲ ಸ್ಥಾನದಲ್ಲಿದೆ. ಕಳೆದ ಬಾರಿ ಶೀಲಾ ದಿನೇಶ್ ಅಧ್ಯಕ್ಷರಾದ ಅವಧಿಯಲ್ಲೇ ದೀಪಾ ರವಿಕುಮಾರ್ ಅಧ್ಯಕ್ಷರಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಕೊನೆ ಅವಧಿಯಲ್ಲಿ ಶೀಲಾ ದಿನೇಶ್ ಅಧ್ಯಕ್ಷರಾಗಿದ್ದರು. ಹೀಗಾಗಿ ಕೊನೆ 9 ತಿಂಗಳ ಅಧಿಕಾರಾವಧಿಯನ್ನು ದೀಪಾ ರವಿಕುಮಾರ್ ಅವರಿಗೆ ನೀಡುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನಿಂದಲೂ ಚುನಾವಣೆಗೆ ನಡೆದಿದೆ ಕಸರತ್ತು

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ನಗರ ಸಭೆಯಲ್ಲಿಯೂ ಅಧಿಕಾರ ಹಿಡಿಸುವುದಕ್ಕೆ ಕಾರ್ಯತಂತ್ರ ನಡೆಸಲಿದೆ. ನಗರಸಭೆಯಲ್ಲಿ ಬಿಜೆಪಿ ಬಹುಮತ ಸಾಧಿಸಿ ಸುಲಭವಾಗಿ ಅಧಿಕಾರ ಹಿಡಿಯುವ ಸಾಧ್ಯತೆ ಇದ್ದರೂ, ಇತರ ನಡುವೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆಯು ದೊಡ್ಡದಿದೆ. ಜೊತೆಗೆ ಈ ಹಿಂದೆ ಬಿಜೆಪಿಯಲ್ಲಿ ಮುನಿಸಿಕೊಂಡು ಅಂತರ ಕಾಪಾಡಿಕೊಂಡ ಸದಸ್ಯರೂ ಇದ್ದಾರೆ. ಇವರ ಸಹಕಾರ ಪಡೆದು, ಎಸ್ ಡಿಪಿಐ, ಸ್ವತಂತ್ರ ಅಭ್ಯರ್ಥಿ ಸಹಕಾರ ಪಡೆದು ಅಧಿಕಾರಕ್ಕೇರಲು ಕಾಂಗ್ರೆಸ್ ಪ್ರಯತ್ನ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಬಿಜೆಪಿಯಿಂದ ಅಂತರ ಕಾಪಾಡಿಕೊಂಡಿರುವ ಸದಸ್ಯರನ್ನು ಮನವೊಲಿಸಿ ಅಧಿಕಾರದಿಂದ ವಂಚಿತರಾದವರ ಸಹಕಾರ ಪಡೆದರೆ ಅಧಿಕಾರ ಹಿಡಿಯಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ. ಆದರೆ ಇದೆಲ್ಲವೂ ಕಾಂಗ್ರೆಸ್ ನಾಯಕರು ಅಂದುಕೊಂಡಂತೆ ನಡೆದರೆ ಮಾತ್ರ ಸಾಧ್ಯವಾಗಲಿದೆ.

ರೆಸಾರ್ಟ್‌ಗೆ ತೆರಳಿರುವ ಬಿಜೆಪಿ ಸದಸ್ಯರು?

ಮೇ 21ರಂದು ನಗರಸಭೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುವ ಹಿನ್ನೆಲೆಯಲ್ಲಿ ನಗರ ಸಭೆಯ ಬಿಜೆಪಿ ಸದಸ್ಯರು ಚಿಕ್ಕಮಗಳೂರು ನಗರ ಬಿಜೆಪಿ ಮಂಡಲದ ಅಧ್ಯಕ್ಷ ಪುಷ್ಪರಾಜ್‌ ನೇತೃತ್ವದಲ್ಲಿ ರೆಸಾರ್ಟ್‌ಗೆ ತೆರಳಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಬಿಜೆಪಿಯ 18 ಸದಸ್ಯರ ಪೈಕಿ 13 ಮಂದಿ ಮಾತ್ರ ತೆರಳಿದ್ದಾರೆ. ಒಬ್ಬರು ವಿದೇಶದಲ್ಲಿ ಇದ್ದಾರೆ. ಮೂರು ಮಂದಿ ಈಗಾಗಲೇ ಬಿಜೆಪಿಯಿಂದ ಮಾನಸಿಕವಾಗಿ ದೂರವಾಗಿರುವುದರಿಂದ ತೆರಳಿಲ್ಲ. ರೆಸಾರ್ಟ್‌ನಲ್ಲಿ ಇರುವವರು ಗುರುವಾರ ಬೆಳಗ್ಗೆ ಚಿಕ್ಕಮಗಳೂರು ನಗರಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.