ಸಾರಾಂಶ
ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವತ್ತಾ ಕಮಲ ಪಡೆ, ಈ ದಿನ ಬೆಳಿಗ್ಗೆ ಫೈನಲ್, 9 ಗಂಟೆಗೆ ನಾಮಪತ್ರ ಸಲ್ಲಿಕೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆಯಲಿದೆ.
ಬೆಳಿಗ್ಗೆ 9 ಗಂಟೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮಧ್ಯಾಹ್ನ 1 ಗಂಟೆಗೆ ಚುನಾವಣೆ ನಡೆಯಲಿದೆ. ಹಾಗಾಗಿ ಗುರುವಾರ ಬೆಳಿಗ್ಗೆ 8 ಗಂಟೆಗೆ ಚಿಕ್ಕಮಗಳೂರು ನಗರ ಬಿಜೆಪಿ ಕೋರ್ ಕಮಿಟಿ ಸಭೆ ನಡೆದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅಭ್ಯರ್ಥಿಗಳ ಆಯ್ಕೆ ಫೈನಲ್ ಆಗಲಿದೆ. ಬಹುಮತ ವಲ್ಲದಿದ್ದರೂ ಕೂಡ ಕಾಂಗ್ರೆಸ್ ಚುನಾವಣಾ ಕಣದಲ್ಲಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸಲು ತಯಾರಿ ಮಾಡಿಕೊಂಡಿದ್ದು, ಯಾರನ್ನು ಕಣಕ್ಕೆ ಇಳಿಸಬೇಕು ಎಂಬುದು ಗುರುವಾರ ಬೆಳಿಗ್ಗೆ ಕರೆದಿರುವ ಪಕ್ಷದ ಮುಖಂಡರ ಸಭೆಯಲ್ಲಿ ಅಂತಿಮ ತೀರ್ಮಾನ ಆಗಲಿದೆ. ಅಂದರೆ, ಎರಡು ಪಕ್ಷಗಳೂ ಕೂಡ ಕೊನೆಗಳಿಗೆವರೆಗೆ ಗೌಪ್ಯತೆ ಕಾಪಾಡಿಕೊಂಡು ಬರುತ್ತಿವೆ.ಸಂಖ್ಯಾ ಬಲ:ಚಿಕ್ಕಮಗಳೂರು ನಗರಸಭೆಯಲ್ಲಿ 35 ಮಂದಿ ಸದಸ್ಯರು ಇದ್ದಾರೆ. ಈ ಪೈಕಿ ಬಿಜೆಪಿ 18, ಕಾಂಗ್ರೆಸ್ 12, ಜೆಡಿಎಸ್ 2, ಎಸ್‌ಡಿಪಿಐ 1, ಪಕ್ಷೇತರ ಇಬ್ಬರು ಸದಸ್ಯರಿ್ದು, ಪಕ್ಷಗಳ ಬಲಾಬಲ ನೋಡಿದರೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಆದರೂ ತನ್ನ ಸದಸ್ಯರಿಗೆ ಪಕ್ಷ ವಿಪ್ ಜಾರಿ ಮಾಡಿದೆ.
ಮೊದಲ ಅವಧಿಯಲ್ಲಿ ನಡೆದ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಸದಸ್ಯರು ಬಿಜೆಪಿಗೆ ಬೆಂಬಲಿಸಿದ್ದರು. ಆದರೆ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ದೋಸ್ತಿ ಆಗಿದ್ದು, ನಗರಸಭೆ ಚುನಾವಣೆಯಲ್ಲೂ ಇದೇ ದೋಸ್ತಿ ಸಂಬಂಧ ಮುಂದುವರಿಸಿಕೊಂಡು ಹೋಗಲು ಇಚ್ಛಿಸಿವೆ. ಹಾಗಾಗಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ಒಟ್ಟು ಬಲ 20ಕ್ಕೆ ಏರಿದ್ದು, ವಿಧಾನಪರಿಷತ್ ಸದಸ್ಯರಾದ ಸಿ.ಟಿ. ರವಿ ಹಾಗೂ ಎಸ್.ಎಲ್. ಭೋಜೇಗೌಡರ ಮತಗಳು ಸೇರಿದಂತೆ ಮೈತ್ರಿಯ ಸಂಖ್ಯಾ ಬಲ 22 ಆಗಲಿದೆ. ಜತೆಗೆ ಸಂಸದರಿಗೂ ಮತದಾನ ಮಾಡಲು ಅವಕಾಶ ಇರುವುದರಿಂದ ಈ ಸಂಖ್ಯೆ 23ಕ್ಕೆ ಏರಿಕೆ ಆಗಲಿದೆ. ಅದ್ದರಿಂದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ.ವಾಸ್ತವ ಚಿತ್ರಣ ಹೀಗಿದ್ದರೂ ಕಾಂಗ್ರೆಸ್ ತನ್ನ ಅಸ್ತಿತ್ವ ತೋರಿಸಲು ಅನಿವಾರ್ಯತೆ ಇರುವುದರಿಂದ ಸ್ಪರ್ಧೆ ಮಾಡಲು ಇಚ್ಛಿಸಿದೆ. ಕಳೆದ ಒಂದು ವರ್ಷ ಕಾಂಗ್ರೆಸ್ ಸದಸ್ಯರ ಬೆಂಬಲದಿಂದ ನಗರಸಭೆ ಅಧ್ಯಕ್ಷರಾಗಿದ್ದ ವರಸಿದ್ದಿ ವೇಣುಗೋಪಾಲ್ ಅವರಿಗೂ ಈ ಬಾರಿ ಬಿಜೆಪಿ ವಿಪ್ ಜಾರಿ ಮಾಡಿದೆ. ವರಸಿದ್ದಿ ವೇಣುಗೋಪಾಲ್ ಕಾಂಗ್ರೆಸ್ ಸದಸ್ಯರ ಪರವಾಗಿ ಮತ ಚಲಾವಣೆ ಮಾಡಿದ್ದೆಯಾದರೆ ವಿಪ್ ಉಲ್ಲಂಘನೆ ಕಾರಣಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಅಂದರೆ, ಪಕ್ಷದ ಸದಸ್ಯತ್ವ ರದ್ದುಪಡಿಸಲು ಕೋರಿ ನ್ಯಾಯಾಲಯದ ಮೆಟ್ಟಿಲು ಏರುವ ದಾರಿ ಮಾಡಿ ಕೊಟ್ಟಂತಾಗುತ್ತದೆ. ಆದರೆ, ಅವರು ಮಾನಸಿಕವಾಗಿ ಬಿಜೆಪಿಯಲ್ಲಿಯೇ ಇರುವುದರಿಂದ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತ ಚಲಾವಣೆ ಮಾಡುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್‌ಗೆ ಸಂಖ್ಯಾ ಬಲದ ಕೊರತೆ ಎದುರಾಗಲಿದೆ.--- ಬಾಕ್ಸ್--- ಕಣದಲ್ಲಿ ಯಾರಿದ್ದಾರೆ ?
ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿಗಳು ಸಾಮಾನ್ಯ ಮಹಿಳೆಗೆ ಬಂದಿವೆ. ಸದ್ಯ ಬಿಜೆಪಿಯಲ್ಲಿ 9 ಮಂದಿ ಮಹಿಳಾ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಕೋರಿರುವ ಸದಸ್ಯರ ಪಟ್ಟಿಯಲ್ಲಿ ರೂಪಾ ಕುಮಾರ್, ಸುಜಾತ ಶಿವಕುಮಾರ್, ದೀಪ ರವಿಕುಮಾರ್, ಲಲಿತಾಬಾಯಿ ರವಿನಾಯ್ಕ, ಕವಿತಾ ಶೇಖರ್ ಇದ್ದಾರೆ. ಉಪಾಧ್ಯಕ್ಷ ಸ್ಥಾನವನ್ನು ಅನು ಮಧುಕರ್ ಅವರಿಗೆ ಕೊಡುವ ಸಾಧ್ಯತೆ ಇದೆ. ಅದ್ದರಿಂದ ಬಿಜೆಪಿಯ ನಡೆ ಕುತುಹೂಲ ಮೂಡಿಸಿದೆ.ಪೋಟೋ ಫೈಲ್ ನೇಮ್ 21 ಕೆಸಿಕೆಎಂ 3