ಸಾರಾಂಶ
ಈ ಬಾರಿಯ ಸರ್ಕಾರಿ ನೌಕರರ ಸಂಘದ ಚುನಾವಣೆ ಬಂಡವಾಳ ಶಾಹಿಗಳು ಹಾಗೂ ಸ್ವಾಭಿಮಾನಿಗಳ ನಡುವೆ ನಡೆಯುತ್ತಿರುವ ಚುನಾವಣೆಯಾಗಿದೆ.
ಕನ್ನಡಪ್ರಭ ವಾರ್ತೆ ಹಾಸನ
ಈ ಬಾರಿ ನಡೆಯುತ್ತಿರುವ ಸರ್ಕಾರಿ ನೌಕರರ ಸಂಘದ ಚುನಾವಣೆಯು ಬಂಡವಾಳ ಶಾಹಿಗಳ ಹಣಬಲ ಹಾಗೂ ತೋಳ್ಬಲದ ನಡುವೆ ಸ್ಪರ್ಧೆ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಸಮಸ್ತ ನೌಕರರ ಅಭಿಪ್ರಾಯ ಸಂಗ್ರಹಿಸಿ ಎಲ್ಲರ ಸಹಕಾರದಲ್ಲಿ ೨೦೨೪-೨೯ನೇ ಸಾಲಿನ ನೌಕರರ ಸಂಘದ ಚುನಾವಣೆಯಲ್ಲಿ ಕೆ.ಎಂ. ಶ್ರೀನಿವಾಸ್ ಮತ್ತು ನಾನು ಇಬ್ಬರೂ ಜಂಟಿಯಾಗಿ ತಂಡದೊಂದಿಗೆ ಸ್ಪರ್ಧೆ ಮಾಡುತ್ತಿದ್ದು, ನಾನು ಈ ಬಾರಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಎಲ್ಲಾ ಸರಕಾರಿ ನೌಕರರು ಬೆಂಬಲಿಸುವಂತೆ ಜಿಲ್ಲಾ ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಸ್ವಾಮಿ ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಸರ್ಕಾರಿ ನೌಕರರ ನಾಡಿಮಿಡಿತ ಅರಿತಿರುವ ನಾನು ಈ ಬಾರಿ ಸಂಘದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಎಲ್ಲಾ ನೌಕರರು ತನ್ನನ್ನು ಬೆಂಬಲಿಸಿ ಸಹಕಾರ ನೀಡಬೇಕು. ಈ ಹಿಂದೆ ನಡೆದ ಹಾಸನ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆ ವೇಳೆ ಎರಡನೇ ಹಂತದಲ್ಲಿ ಅಧ್ಯಕ್ಷ ಸ್ಥಾನವನ್ನು ನನಗೆ ಬಿಟ್ಟುಕೊಡುವ ಬಗ್ಗೆ ಒಪ್ಪಂದ ನಡೆದಿತ್ತು. ಆದರೆ ಈ ಹಿಂದಿನ ಅಧ್ಯಕ್ಷರು ವಂಚಿಸಿ ಅನ್ಯಾಯ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ನೌಕರರು ನನ್ನ ಕೈ ಹಿಡಿಯಲಿದ್ದಾರೆ ಎಂಬ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮತ್ತೊಬ್ಬ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಕೆ.ಎಂ. ಶ್ರೀನಿವಾಸ್ ಮಾತನಾಡಿ, ಈ ಬಾರಿಯ ಸರ್ಕಾರಿ ನೌಕರರ ಸಂಘದ ಚುನಾವಣೆ ಬಂಡವಾಳ ಶಾಹಿಗಳು ಹಾಗೂ ಸ್ವಾಭಿಮಾನಿಗಳ ನಡುವೆ ನಡೆಯುತ್ತಿರುವ ಚುನಾವಣೆಯಾಗಿದೆ. ಅಧ್ಯಕ್ಷರಾದವರು ಕೇಂದ್ರ ಸ್ಥಾನದಲ್ಲಿ ಇದ್ದು, ನೌಕರರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬುದು ಹಲವು ನೌಕರರ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ತಂಡ ಉತ್ತಮವಾಗಿ ಕೆಲಸ ಮಾಡಲಿದೆ ಎಂಬ ಭರವಸೆ ನೀಡಿದರು. ಸರ್ಕಾರಿ ನೌಕರರ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಕೆಲಸ ಮಾಡುತ್ತಿವೆ, ಈ ನಿಟ್ಟಿನಲ್ಲಿ ಹಣಬಲ ಹಾಗೂ ಜನಬಲದ ನಡುವೆ ನಡೆಯುತ್ತಿರುವ ಈ ಚುನಾವಣೆಯಲ್ಲಿ ತಮ್ಮೆಲ್ಲರ ಬೆಂಬಲ ನಮಗೆ ಬಹು ಮುಖ್ಯ ಎಂದು ಸರ್ಕಾರಿ ನೌಕರರ ಬಳಿ ಅವರು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘದ ಮಧು, ರಘು, ಪ್ರದೀಪ್, ರಾಜು, ವಿಶ್ವನಾಥ್, ಯಶೋಧರ್, ಗಿರೀಶ್ ಇತರರು ಉಪಸ್ಥಿತರಿದ್ದರು.