ಸಾರಾಂಶ
ಅಧ್ಯಕ್ಷರಾಗಿ ಎಂ.ಆರ್.ಬಾಲಕೃಷ್ಣ, ಉಪಾಧ್ಯಕ್ಷರಾಗಿ ಡಿ.ಕೃಷ್ಣಪ್ಪ ಹಾಗೂ ನಿರ್ದೇಶಕರಾಗಿ ಕೆ.ಕೃಷ್ಣಯ್ಯ, ಗೋಪಾಲ, ಬೆಟ್ಟಸ್ವಾಮಿ, ಆತ್ಮಾನಂದ, ಎಂ.ವಿ.ವೆಂಕಟೇಶ್, ಜೋಗಿಗೌಡ, ಬಿ.ಗಿರೀಶ್, ಆರ್.ಸಿದ್ದಪ್ಪ, ಎಸ್.ಎಲ್. ಜಯಲಿಂಗೇಗೌಡ, ಸಿ.ಕೆಂಪರಾಜು, ಎಂ.ಸಿ.ಯೋಗೇಶ್, ಎಲ್.ಸಿ.ಪ್ರವೀಣ್ ಕುಮಾರ್ ಚುನಾಯಿತುರಾದರು.
ಕನ್ನಡಪ್ರಭ ವಾರ್ತೆ ಮದ್ದೂರು
ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಮಂಡ್ಯ ಜಿಲ್ಲಾ ಕೋಳಿ ಉತ್ಪಾದಕ ರೈತರ ಸಹಕಾರ ಒಕ್ಕೂಟ ಅಸ್ತಿತ್ವಕ್ಕೆ ಬಂದಿದ್ದು, ನೂತನ ಅಧ್ಯಕ್ಷರಾಗಿ ಎಂ.ಆರ್.ಬಾಲಕೃಷ್ಣ ಹಾಗೂ ಉಪಾಧ್ಯಕ್ಷರಾಗಿ ಡಿ.ಕೃಷ್ಣಪ್ಪ ಅವಿರೋಧವಾಗಿ ಆಯ್ಕೆಯಾದರು.ತಾಲೂಕಿನ ಶಿವಪುರದ ಒಕ್ಕೂಟದ ಕಚೇರಿ ಆವರಣದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ಆರ್.ಬಾಲಕೃಷ್ಣ, ಉಪಾಧ್ಯಕ್ಷರಾಗಿ ಡಿ.ಕೃಷ್ಣಪ್ಪ ಹಾಗೂ ನಿರ್ದೇಶಕರಾಗಿ ಕೆ.ಕೃಷ್ಣಯ್ಯ, ಗೋಪಾಲ, ಬೆಟ್ಟಸ್ವಾಮಿ, ಆತ್ಮಾನಂದ, ಎಂ.ವಿ.ವೆಂಕಟೇಶ್, ಜೋಗಿಗೌಡ, ಬಿ.ಗಿರೀಶ್, ಆರ್.ಸಿದ್ದಪ್ಪ, ಎಸ್.ಎಲ್. ಜಯಲಿಂಗೇಗೌಡ, ಸಿ.ಕೆಂಪರಾಜು, ಎಂ.ಸಿ.ಯೋಗೇಶ್, ಎಲ್.ಸಿ.ಪ್ರವೀಣ್ ಕುಮಾರ್ ಚುನಾಯಿತುರಾದರು.
ಚುನಾವಣಾಧಿಕಾರಿಯಾಗಿ ಸಹಕಾರ ಸಂಘದ ಮಾರಾಟಾಧಿಕಾರಿ ಸಿ.ಎ.ಸುಧಾಕರ್ ಕರ್ತವ್ಯ ನಿರ್ವಹಿಸಿದರು. ಅಧ್ಯಕ್ಷರಾಗಿ ಆಯ್ಕೆಯಾದ ಬಾಲಕೃಷ್ಣ ಮಾತನಾಡಿ, ಕೆಎಂಎಫ್ ಸಂಸ್ಥೆ ಹಾಲಿನಿಂದ ತಯಾರಿಸುವ ಉತ್ಪನ್ನಗಳ ಮಾದರಿಯಲ್ಲೇ ಕೋಳಿ ಮಾಂಸದ ಬಿಡಿಭಾಗಗಳನ್ನು ಮಾರಾಟ ಮಾಡುವ ಯೋಜನೆಯನ್ನು ನಮ್ಮ ಒಕ್ಕೂಟ ರೂಪುರೇಷೆ ತಯಾರಿಸಿದೆ ಎಂದರು.ಜಿಲ್ಲೆ ಮತ್ತು ನೆರೆ ಜಿಲ್ಲೆಗಳಲ್ಲಿ ರಿಟೇಲ್ ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು. ಕೋಳಿ ಮಾಂಸದ ವಿವಿಧ ಭಾಗಗಳನ್ನು ಪ್ರತ್ಯೆಕಿಸಿ 1 ಕೆಜಿ ಮೌಲ್ಯದ ಪ್ಯಾಕೇಟ್ ಗಳನ್ನು ಮಾಡಿದ ನಂತರ ಮಳಿಗೆಗಳಲ್ಲಿ ಮಾರಾಟ ಮಾಡಲಾಗುವುದು ಎಂದರು.
ದೇವರ ಕಾರ್ಯ, ಬೀಗರ ಔತಣ ಕೂಟ, ಹುಟ್ಟು ಹಬ್ಬ ಹಾಗೂ ವಿವಿಧ ಸಮಾರಂಭಗಳಿಗೆ ಗ್ರಾಹಕರು ಬಯಸಿದ ಮಾದರಿಯಲ್ಲೆ ಕೋಳಿಯ ವಿವಿಧ ಭಾಗಗಳನ್ನು ಪೂರೈಸಲಾಗುವುದು. ಸರ್ಕಾರಿ ಸ್ವಾಮ್ಯದ ನವೋದಯ, ವಿಧ್ಯಾರ್ಥಿ ನಿಲಯಗಳು ಹಾಗೂ ಬಂಧಿಖಾನೆ ಸೇರಿದಂತೆ ಇನ್ನು ಹಲವು ನಿಲಯಗಳಿಗೆ ಬೇಡಿಕೆ ಆಧಾರದ ಮೇಲೆ ಸರಬರಾಜು ಮಾಡಲು ಒಕ್ಕೂಟವು ಆಧ್ಯತೆ ನೀಡುತ್ತದೆ ಎಂದರು.ಗ್ರಾಹಕರಿಗೆ ಆನ್ ಲೈನ್ ಮೂಲಕ ಆರ್ಡರ್ ಪಡೆದು ಗುಣಮಟ್ಟದ ತಾಜಾ ಕೋಳಿ ಮಾಂಸದ ವಿವಿಧ ಭಾಗಗಳನ್ನು ಮನೆ ಬಾಗಿಲಿಗೆ ತಲುಪಿಸುವ ಮೂಲ ಉದ್ದೇಶವಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಸ್ಪಷ್ಟಪಡಿಸಿದರು.