ಸಾರಾಂಶ
ಅರಸೀಕೆರೆ : ದರ್ಪದಿಂದ ಮೆರೆಯುತ್ತಿರುವವರ ವಿರುದ್ಧ ಸ್ವಾಭಿಮಾನ ಚುನಾವಣೆ ನಡೆಯುತ್ತಿದೆ. ಕ್ಷೇತ್ರದಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡರ ದರ್ಪದ ಕಾರ್ಯರೂಪವನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡರು ಜೆಡಿಎಸ್ ಪಕ್ಷವನ್ನು ಸೇರುತ್ತಿದ್ದಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಯುವ ಕಾಂಗ್ರೆಸ್ ಅಧ್ಯಕ್ಷ ನಾಗಸಮುದ್ರ ಸ್ವಾಮಿ ಮತ್ತು ನೂರಾರು ಬೆಂಬಲಿಗರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾಭಿಮಾನ ಇರುವ ವ್ಯಕ್ತಿ ಯಾರು ಸಹ ಕೆ.ಎಂ.ಶಿವಲಿಂಗೇಗೌಡರ ಜತೆಯಲ್ಲಿ ಇರಲು ಸಾಧ್ಯವಿಲ್ಲ. ಇಂತಹ ವ್ಯಕ್ತಿಗೆ ಬುದ್ಧಿ ಕಲಿಸುವ ಕಾರ್ಯವನ್ನು ಈ ಚುನಾವಣೆಯಲ್ಲಿ ಮತದಾರರು ಮಾಡುವ ಅವಶ್ಯಕತೆ ಇದೆ. ಜೆಡಿಎಸ್ ಪಕ್ಷಕ್ಕೆ ಬರುವವರಿಗೆ ಹೆಚ್ಚಿನ ಸ್ಥಾನಮಾನವನ್ನು ಸಿಗುವಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.
ಸ್ವಾಭಿಮಾನದ ಯುದ್ಧ: ಈ ಚುನಾವಣೆ ದರ್ಪದ ಮತ್ತು ಸ್ವಾಭಿಮಾನದ ಯುದ್ದವಾಗಿ ಪರಿಣಮಿಸಿದೆ. ತಾಲೂಕಿನ ಎಲ್ಲಾ ಪಂಚಾಯಿತಿಗಳನ್ನು ತಿರುಗಿದ್ದೇನೆ. ಇಲ್ಲಿ ಶಾಸಕರು ಬಡವರ, ರೈತರ, ಜನರ ಕಣ್ಣೀರು ಹಾಕಿಸಿದ್ದಾರೆ. ನೊಂದಿರುವ ಜೀವಗಳು ಈ ಚುನಾವಣೆಯಲ್ಲಿ ಉತ್ತರಿಸಲಿವೆ ಎಂದು ತಿಳಿಸಿದರು.
ಕೆ.ಎಂ.ಶಿವಲಿಂಗೇಗೌಡ ಯಾವುದೇ ಕಾರಣಕ್ಕೂ ಯಾರನ್ನೂ ಬೆಳೆಸಲು ಮುಂದಾಗಿಲ್ಲ, ಹೊಸ ಗೂಟದ ಕಾರನ್ನು ನೋಡಿದ ತಕ್ಷಣ ತಾವೇ ಹತ್ತಿ ಕುಳಿತವರು ಇವರು. ತೆನೆಹೊತ್ತ ಮಹಿಳೆಯ ಹೆಸರು ಕಮಲ ಎಂದು ನಾಮಕರಣ ಮಾಡಲಾಗಿದೆ. ದೇಶದ ಭದ್ರತೆಗಾಗಿ, ಮೋದಿ ಪ್ರಧಾನಿಯಾಗಲು, ದೇಶ ಉಳಿಸಲು ಎಲ್ಲಾ ಬಿಜೆಪಿ ಕಾರ್ಯಕರ್ತರು, ಮುಖಂಡರು ಮೈತ್ರಿ ಪಕ್ಷ ಜೆಡಿಎಸ್ ಗುರುತಿಗೆ ಮತ ನೀಡಲು ಪ್ರಚಾರ ಮಾಡಬೇಕು ಎಂದು ಹೇಳಿದರು.
ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್, ನಾಗಸಮುದ್ರ ಸ್ವಾಮಿ ಮಾತನಾಡಿದರು. ಎಪಿಎಂಸಿ ಮಾಜಿ ಉಪಾಧ್ಯಕ್ಷ ಶಶಿಧರ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ದುಮ್ಮೇನಹಳ್ಳಿ ರಮೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್, ರಾಂಪುರ ಶೇಖರಪ್ಪ, ಪಿಎಲ್‌ಡಿ ಬ್ಯಾಂಕ್ ಗಂಗಾಧರ್, ನಿರಂಜನ್, ಬಾಣಾವರ ಅಣ್ಣಿ, ಉಮೇಶ್, ದಯಾ, ಹನುಮಂತಣ್ಣ, ರಾಜಣ್ಣ, ಚಂದ್ರಣ್ಣ ಇದ್ದರು.
ನಾಗಸಮುದ್ರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಯೂತ್ ಕಾಂಗ್ರೆಸ್ ಅಧ್ಯಕ್ಷ ನಾಗಸಮುದ್ರ ಸ್ವಾಮಿ ಮತ್ತು ಬೆಂಬಲಿಗರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಸಂಸದ ಪ್ರಜ್ವಲ್ ರೇವಣ್ಣ, ಮುಖಂಡರು ಇದ್ದರು.