ಫೆ. 2ರಂದು ಪಿಎಲ್.ಡಿ ಬ್ಯಾಂಕ್‌ ಚುಮಾವಣೆ

| Published : Jan 22 2025, 12:34 AM IST

ಸಾರಾಂಶ

ಜ. 19 ರಿಂದಲೇ ನಾಮ ಪತ್ರಸಲ್ಲಿಕೆ ಕಾರ್ಯ ಆರಂಭಗೊಂಡಿದ್ದು, ಜ. 25 ಕ್ಕೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾಗಿದೆ.

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರ ಚುನಾವಣೆಯು ಫೆ. 2ರಂದು ನಿಗದಿಪಡಿಸಲಾಗಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ 5 ವರ್ಷಗಳ ಅವಧಿಗೆ ಚುನಾವಣೆ ನಡೆಯಲಿದ್ದು, 14 ಮಂದಿ ನಿರ್ದೇಶಕರ ಆಯ್ಕೆಗಾಗಿ ಚುನಾವಣೆ ನಿಗದಿ ಪಡಿಸಿದೆ.

ಜ. 19 ರಿಂದಲೇ ನಾಮ ಪತ್ರಸಲ್ಲಿಕೆ ಕಾರ್ಯ ಆರಂಭಗೊಂಡಿದ್ದು, ಜ. 25 ಕ್ಕೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾಗಿದೆ. ಸಾಲ ಪಡೆದವರ ಕ್ಷೇತ್ರಗಳ ಪೈಕಿ ಕುಪ್ಯ, ಬನ್ನೂರು, ಯಾಚೇನಹಳ್ಳಿ, ಅತ್ತಹಳ್ಳಿ, ಸೋಮನಾಥಪುರ, ಚಿದರವಳ್ಳಿ, ಕೊತ್ತೇಗಾಲ ಕ್ಷೇತ್ರಗಳನ್ನು ಸಾಮಾನ್ಯ ಕ್ಷೇತ್ರಗಳಾಗಿ, ಸೋಸಲೆ (ಪ. ಜಾತಿ), ಮಾದಾಪುರ (ಪ. ಪಂಗಡ), ಮೂಗೂರು (ಮಹಿಳಾ ಮೀಸಲು), ಕಸಬಾ (ಮಹಿಳಾ ಮೀಸಲು), ದೊಡ್ಡೇಬಾಗಿಲು (ಹಿಂದುಳಿದ ಪ್ರವರ್ಗ ಎ), ತಲಕಾಡು (ಹಿಂದುಳಿದ ಪ. ವರ್ಗ ಬಿ) ಹಾಗೂ ಟಿ. ನರಸೀಪುರ ತಾಲೂಕು ಕಾರ್ಯ ವ್ಯಾಪ್ತಿಗೆ ಬರುವ ಗ್ರಾಮಗಳನ್ನು ಸಾಲಗಾರರಲ್ಲದ ಕ್ಷೇತ್ರಗಳೆಂದು ವಿಂಗಡಣೆ ಮಾಡಲಾಗಿದೆ.

ಈಗಾಗಲೇ ಒಟ್ಟು 7 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಸಾಲಗಾರರಲ್ಲದ ಕ್ಷೇತ್ರದಿಂದ ಆಯ್ಕೆ ಬಯಸಿ ಎಸ್ಟಿ ವರ್ಗಕ್ಕೆ ಮೀಸಲಾದ ಮಾದಾಪುರ ಕ್ಷೇತ್ರದಿಂದ ಕೆ.ಬಿ. ಪ್ರಭುಸ್ವಾಮಿ, ಹೆಮ್ಮಿಗೆ ಸೋಮಣ್ಣ, ಮಹಿಳಾ ಮೀಸಲು ಕಸಬಾ ಕ್ಷೇತ್ರದಿಂದ ಮನ್ನೇಹುಂಡಿ ಎಂ. ನಾಗರತ್ನ, ಸಾಮಾನ್ಯ ವರ್ಗಕ್ಕೆ ಮೀಸಲಾದ ಯಾಚೇನಹಳ್ಳಿ ಕ್ಷೇತ್ರದಿಂದ ಟಿ.ಸಿ. ಸಂದೀಪ್ ಹಾಗೂ ತುರುಗನೂರು ಟಿ.ಎಸ್. ಪ್ರಸನ್ನ, 2 ಎ ವರ್ಗಕ್ಕೆ ಮೀಸಲಾದ ದೊಡ್ಡೇಬಾಗಿಲು ಕ್ಷೇತ್ರದಿಂದ ಎಂ. ಮಲ್ಲಿಕಾರ್ಜುನ ಸ್ವಾಮಿ ನಾಮಪತ್ರ ಸಲ್ಲಿಸಿದರೆ, ಸಾಮಾನ್ಯ ವರ್ಗಕ್ಕೆ ಮೀಸಲಾದ ಅತ್ತಹಳ್ಳಿ ಕ್ಷೇತ್ರದಿಂದ ಎ.ಎಂ. ಮಹದೇವ ಅವರು ಸಹಾಯಕ ಚುನಾವಣಾಧಿಕಾರಿ ವಿಮಲ್ ಕುಮಾರ್ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು.

ನಾಮಪತ್ರಗಳ ಪರಿಶೀಲನೆ ಜ. 26 ರಂದು ನಡೆಯಲಿದ್ದು, ನಾಮಿನೇಷನ್ ವಾಪಸ್ ಪಡೆಯಲು ಜ. 27 ಕೊನೆಯ ದಿನವಾಗಿರುತ್ತದೆ. ಚುನಾವಣೆ ಫೆ. 2ರ ಗುರುಭವನದ ಹಿಂಭಾಗದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದ್ದು, ಅಂದೇ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ವ್ಯವಸ್ಥಾಪಕ ಎನ್. ಮಹೇಶ್ ತಿಳಿಸಿದರು.