ಅರಾಭಿಕೊತ್ತನೂರು ಶಾಲಾ ಸಂಸತ್‌ಗೆ ಚುನಾವಣೆ

| Published : Jul 19 2024, 12:48 AM IST

ಸಾರಾಂಶ

ಮುಖ್ಯಮಂತ್ರಿಯಾಗಿ ೮೪ ಮತ ಪಡೆದ ಸಿ.ತೇಜಸ್ ಆಯ್ಕೆಯಾಗಿದ್ದು, ಉಪಮುಖ್ಯಮಂತ್ರಿಯಾಗಿ ಪ್ರತೀಕ್ಷಾ, ಆಹಾರ ಸಚಿವರಾಗಿ ಡಿ.ಅರ್ಜುನ್, ಪ್ರವಾಸೋದ್ಯಮ ಸಚಿವ ಮುರಳಿ, ಶಿಕ್ಷಣ ಸಚಿವೆಯಾಗಿ ಅಮೂಲ್ಯ, ಕ್ರೀಡಾ ಸಚಿವರಾಗಿ ಟಿ.ನವೀನ್,ಆರೋಗ್ಯ ಸಚಿವೆಯಾಗಿ ಕೆ.ಭವಾನಿ, ಸಾಂಸ್ಕೃತಿಕ ಸಚಿವೆಯಾಗಿ ರಕ್ಷಿತಾ, ಸಭಾಧ್ಯಕ್ಷರಾಗಿ ಅಶ್ವಿನ್, ತೋಟಗಾರಿಕಾ ಸಚಿವರಾಗಿ ಮನೋಜ್‌ಕುಮಾರ್, ಗ್ರಂಥಾಲಯ ಸಚಿವೆಯಾಗಿ ಸಿಂಧೂಶ್ರೀ, ವಿಜ್ಞಾನ, ತಂತ್ರಜ್ಞಾನ ಸಚಿವರಾಗಿ ಎಂ.ಸುದರ್ಶನ್, ಕಾನೂನು ಸಚಿವರಾಗಿ ಎಂ.ಗೌತಮ್, ವಾರ್ತಾ ಸಚಿವರಾಗಿ ಅಂಜನಾದ್ರಿ, ಸ್ವಚ್ಛತಾ ಸಚಿವೆಯಾಗಿ ಶಾಲಿನಿ, ಹಣಕಾಸು ಸಚಿವೆಯಾಗಿ ಭವ್ಯ ನೇಮಕಗೊಂಡರು.

ಕನ್ನಡಪ್ರಭ ವಾರ್ತೆ ಕೋಲಾರ

ಪವಿತ್ರವಾದ ಮತದಾನದ ಹಕ್ಕು ಚಲಾವಣೆ ಹಾಗೂ ಪ್ರಜಾಪ್ರಭುತ್ವ ಸರ್ಕಾರ ಮಹತ್ವದ ಕುರಿತು ಅರಿವು ಮೂಡಿಸಲು ವಿದ್ಯಾರ್ಥಿಗಳಿಂದಲೇ ಶಾಲಾ ಸಂಸತ್ ರಚನೆಗಾಗಿ ಚುನಾವಣೆಯನ್ನು ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಸಲಾಯಿತು.

ಚುನಾವಣೆ ಅಧಿಕೃತ ಘೋಷಣೆ, ನಾಮಪತ್ರ ಸಲ್ಲಿಕೆಗೆ ಕಾಲಾವಕಾಶ, ನಾಮಪತ್ರ ವಾಪಸಾತಿಗೆ ಅವಕಾಶ, ಅಂತಿಮ ಕಣದಲ್ಲಿ ಉಳಿದವರಿಗೆ ಪ್ರಚಾರಕ್ಕಾಗಿ ಒಂದು ವಾರ ಕಾಲ ಅವಕಾಶ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳಿಗೆ ಚುನಾವಣೆ ವಿಧಾನದ ಅರಿವು ಮೂಡಿಸಲಾಯಿತು.

ಚುನಾವಣೆಗಾಗಿ ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು, ವಿದ್ಯಾರ್ಥಿಗಳೇ ಮತಗಟ್ಟೆ ಸಿಬ್ಬಂದಿಯಾಗಿ, ಬಂದೋಬಸ್ತ್‌ಗೆ ಪೊಲೀಸರಾಗಿಯೂ ಕಾರ್ಯನಿರ್ವಹಿಸಿ ಗಮನ ಸೆಳೆದರು.

ಮುಖ್ಯಶಿಕ್ಷಕಿ ತಾಹೇರಾ ನುಸ್ರತ್ ಹಾಗೂ ಸಮಾಜ ವಿಜ್ಞಾನ ಶಿಕ್ಷಕಿಯರಾದ ಫರೀದಾ ಮತ್ತು ರಮಾದೇವಿ ಮಾರ್ಗದರ್ಶನದಲ್ಲಿ ನಡೆದ ಚುನಾವಣೆ ಮತ್ತು ಮತದಾನ ಪ್ರಕ್ರಿಯೆಯಲ್ಲಿ ಪ್ರಿಸೈಡಿಂಗ್ ಅಧಿಕಾರಿ, ಒಂದನೇ ಪೋಲಿಂಗ್ ಅಧಿಕಾರಿ, ೨ನೇ ಪೋಲಿಂಗ್ ಅಧಿಕಾರಿ, ೩ನೇ ಪೋಲಿಂಗ್ ಅಧಿಕಾರಿ ಹಾಗೂ ಮತಗಟ್ಟೆಗೆ ಭದ್ರತೆ ಒದಗಿಸಲು ಸಮವಸ್ತ್ರ ಧರಿಸಿದ ಪೊಲೀಸ್ ಸಿಬ್ಬಂದಿಯಾಗಿಯೂ ಮಕ್ಕಳೇ ಕಾರ್ಯನಿರ್ವಹಿಸಿದರು.

ಮತದಾನದಲ್ಲಿ ಪಾಲ್ಗೊಳ್ಳಲು ಗುರುತಿನ ಚೀಟಿ ಕಡ್ಡಾಯ ಎಂಬ ಅರಿವು ಮೂಡಿಸಲು ವಿದ್ಯಾರ್ಥಿಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ತರಲು ಸೂಚಿಸಲಾಗಿತ್ತು.

ಚುನಾವಣೆಗೆ ೨೨ ಸ್ಥಾನಗಳಿಗೆ ೪೦ ಮಂದಿ ಸ್ವರ್ಧಿಸಿದ್ದು, ಸ್ವರ್ಧಾಗಳುಗಳಿಗಾಗಿ ವಿವಿಧ ಚಿತ್ರಗಳುಳ್ಳ ವರ್ಣರಂಜಿತ ಮತಪತ್ರಗಳನ್ನು ಮುದ್ರಿಸಿ ಕೊಡಲಾಗಿತ್ತು. ಆಧಾರ್‌ಕಾಡ್, ಗುರುತಿನ ಚೀಟಿ ಹಿಡಿದು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದ ವಿದ್ಯಾರ್ಥಿಗಳಲ್ಲಿ ಖುಷಿ ಕಂಡು ಬಂತು.

ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿದ್ಯಾರ್ಥಿಗಳು ಸಾರ್ವತ್ರಿಕ ಚುನಾವಣೆ ಮತಗಟ್ಟೆಯಲ್ಲಿನ ಸಿಬ್ಬಂದಿ ಕಾರ್ಯನಿರ್ವಹಿಸುವ ರೀತಿಯಲ್ಲೇ ಗುರುತಿನ ಚೀಟಿ ಇಲ್ಲದವರಿಗೆ ಮತದಾನಕ್ಕೆ ಅವಕಾಶ ನೀಡದೇ ಹೊರ ಕಳುಹಿಸಿದರು.

ವಿವಿಧ ಅಭ್ಯರ್ಥಿಗಳ ಏಜೆಂಟರನ್ನು ನೇಮಿಸಲಾಗಿದ್ದು, ಅವರು ಮತದಾನ ಪ್ರಕ್ರಿಯೆಗೆ ಸಾಕ್ಷಿಯಾದರು. ಮತ ಚಲಾಯಿಸಿದವರ ಕೈಗೆ ನೀಲಿ ಶಾಹಿ ಹಾಕುವ ಕಾರ್ಯವೂ ನಡೆಯಿತು. ಶೇ.೯೮ರಷ್ಟು ಮತದಾನವಾಗಿದ್ದು, ಎಣಿಕೆ ಕಾರ್ಯ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಮುಖ್ಯ ಚುನಾವಣಾಧಿಕಾರಿ ತಾಹೇರಾ ನುಸ್ರತ್, ಉಪಚುನಾವಣಾಧಿಕಾರಿ ಗೋಪಾಲಕೃಷ್ಣ, ಶಿಕ್ಷಕರಾದ ಸಿದ್ದೇಶ್ವರಿ, ಭವಾನಿ, ಲೀಲಾ, ಶ್ವೇತಾ,ಸುಗುಣಾ, ಶ್ರೀನಿವಾಸಲು, ರಮಾದೇವಿ, ಚಂದ್ರಶೇಖರ್, ಮತ್ತಿತರರ ನೇತೃತ್ವದಲ್ಲಿ ನಡೆಯಿತು.

ಮುಖ್ಯ ಶಿಕ್ಷಕಿ ತಾಹೇರಾ ನುಸ್ರತ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮತದಾನದ ಹಕ್ಕು ಚಲಾಯಿಸಲು ಅನೇಕ ಸುಶಿಕ್ಷಿತರೇ ಮತಗಟ್ಟೆಯತ್ತ ಸುಳಿಯುತ್ತಿಲ್ಲ. ಇದರಿಂದಾಗಿ ಶೇಕಡಾವಾರು ಮತದಾನ ಕಡಿಮೆಯಾಗುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಹೆಚ್ಚಿಸಬೇಕಾಗಿದೆ ಎಂದರು.

ಮುಖ್ಯಮಂತ್ರಿಯಾಗಿ ಸಿ.ತೇಜಸ್ ಆಯ್ಕೆ:

ಮುಖ್ಯಮಂತ್ರಿಯಾಗಿ ೮೪ ಮತ ಪಡೆದ ಸಿ.ತೇಜಸ್ ಆಯ್ಕೆಯಾಗಿದ್ದು, ಉಪಮುಖ್ಯಮಂತ್ರಿಯಾಗಿ ಪ್ರತೀಕ್ಷಾ, ಆಹಾರ ಸಚಿವರಾಗಿ ಡಿ.ಅರ್ಜುನ್, ಪ್ರವಾಸೋದ್ಯಮ ಸಚಿವ ಮುರಳಿ, ಶಿಕ್ಷಣ ಸಚಿವೆಯಾಗಿ ಅಮೂಲ್ಯ, ಕ್ರೀಡಾ ಸಚಿವರಾಗಿ ಟಿ.ನವೀನ್,ಆರೋಗ್ಯ ಸಚಿವೆಯಾಗಿ ಕೆ.ಭವಾನಿ, ಸಾಂಸ್ಕೃತಿಕ ಸಚಿವೆಯಾಗಿ ರಕ್ಷಿತಾ, ಸಭಾಧ್ಯಕ್ಷರಾಗಿ ಅಶ್ವಿನ್, ತೋಟಗಾರಿಕಾ ಸಚಿವರಾಗಿ ಮನೋಜ್‌ಕುಮಾರ್, ಗ್ರಂಥಾಲಯ ಸಚಿವೆಯಾಗಿ ಸಿಂಧೂಶ್ರೀ, ವಿಜ್ಞಾನ, ತಂತ್ರಜ್ಞಾನ ಸಚಿವರಾಗಿ ಎಂ.ಸುದರ್ಶನ್, ಕಾನೂನು ಸಚಿವರಾಗಿ ಎಂ.ಗೌತಮ್, ವಾರ್ತಾ ಸಚಿವರಾಗಿ ಅಂಜನಾದ್ರಿ, ಸ್ವಚ್ಛತಾ ಸಚಿವೆಯಾಗಿ ಶಾಲಿನಿ, ಹಣಕಾಸು ಸಚಿವೆಯಾಗಿ ಭವ್ಯ ನೇಮಕಗೊಂಡರು.

ವಿರೋಧ ಪಕ್ಷಕ್ಕೆ ಸಂಜಯ್ ನಾಯಕ:

ವಿರೋಧ ಪಕ್ಷದ ನಾಯಕನಾಗಿ ಎನ್.ಸಂಜಯ್, ಉಪನಾಯಕನಾಗಿ ಮಿಥುನ್‌ಕುಮಾರ್, ಸದಸ್ಯರಾಗಿ ಚರಣಾಚಾರಿ ಶೋಭಶ್ರೀ, ಶೀನು, ರಾಮ್‌ಚರಣ್, ವಿಶ್ವನಾಥ, ಹೃದನ್ ಆಯ್ಕೆಯಾಗಿದ್ದು, ಎಲ್ಲಾ ಸದಸ್ಯರಿಗೂ ಶಿಕ್ಷಕಿ ಫರೀದಾ ಪ್ರಮಾಣ ವಚನ ಬೋಧಿಸಿದರು.