ಜುಲೈ 21ಕ್ಕೆ ವೀರಶೈವ ಮಹಾಸಭಾ ಜಿಲ್ಲಾ ಘಟಕಕ್ಕೆ ಚುನಾವಣೆ

| Published : Jul 15 2024, 01:53 AM IST

ಜುಲೈ 21ಕ್ಕೆ ವೀರಶೈವ ಮಹಾಸಭಾ ಜಿಲ್ಲಾ ಘಟಕಕ್ಕೆ ಚುನಾವಣೆ
Share this Article
  • FB
  • TW
  • Linkdin
  • Email

ಸಾರಾಂಶ

ಅಖಿಲ ಭಾರತ ವೀರಶೈವ ಮಹಾಸಭಾದ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಒಟ್ಟು 4,025 ಮತದಾರರಿದ್ದು, ಈ ಪೈಕಿ ಮಂಡ್ಯ ತಾಲೂಕಿನಲ್ಲಿ 600, ಮದ್ದೂರು ತಾಲೂಕಿನಲ್ಲಿ 200, ಶ್ರೀರಂಗಪಟ್ಟಣ ಹಾಗೂ ನಾಗಮಂಗಲ ತಾಲೂಕಿನಲ್ಲಿ ತಲಾ 67 ಮತದಾರರಿದ್ದರೆ, ಮಳವಳ್ಳಿಯಲ್ಲಿ 500, ಕೆ.ಆರ್.ಪೇಟೆಯಲ್ಲಿ 1400, ಪಾಂಡವಪುರ ತಾಲೂಕಿನಲ್ಲಿ 1200 ಮತದಾರರು ಇದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ನಿರ್ದೇಶಕರ ಸ್ಥಾನಕ್ಕೆ ಜು.21ರಂದು ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಜಿಲ್ಲಾದ್ಯಂತ ಚುನಾವಣೆ ನಡೆಯಲಿದೆ ಎಂದು ಉಪ ಚುನಾವಣಾಧಿಕಾರಿ ಕೆ.ಎಸ್. ಷಡಕ್ಷರಿ ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 4,025 ಮತದಾರರಿದ್ದು, ಈ ಪೈಕಿ ಮಂಡ್ಯ ತಾಲೂಕಿನಲ್ಲಿ 600, ಮದ್ದೂರು ತಾಲೂಕಿನಲ್ಲಿ 200, ಶ್ರೀರಂಗಪಟ್ಟಣ ಹಾಗೂ ನಾಗಮಂಗಲ ತಾಲೂಕಿನಲ್ಲಿ ತಲಾ 67 ಮತದಾರರಿದ್ದರೆ, ಮಳವಳ್ಳಿಯಲ್ಲಿ 500, ಕೆ.ಆರ್.ಪೇಟೆಯಲ್ಲಿ 1400, ಪಾಂಡವಪುರ ತಾಲೂಕಿನಲ್ಲಿ 1200 ಮತದಾರರು ಇದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಅಂದು ಜಿಲ್ಲಾ ಮತ್ತು ತಾಲೂಕು ಘಟಕಕ್ಕೂ ಚುನಾವಣೆ ನಡೆಯಲಿದ್ದು, ಈಗಾಗಲೇ ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ ಹಾಗೂ ನಾಗಮಂಗಲ ತಾಲೂಕು ಘಟಕಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದಂತೆ ಕೆ.ಆರ್.ಪೇಟೆ ಮತ್ತು ಪಾಂಡವಪುರ ತಾಲೂಕು ಘಟಕಗಳಿಗೆ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.

ಜಿಲ್ಲಾ ಘಟಕಕ್ಕೆ ಅಧ್ಯಕ್ಷ ಮತ್ತು 20 ಪುರುಷರು ಹಾಗೂ 10 ಮಹಿಳೆಯರು ಆಯ್ಕೆಯಾಗಬೇಕಿದ್ದು, ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಪುರುಷ ನಿರ್ದೇಶಕ ಸ್ಥಾನಕ್ಕೆ 35 ಮಂದಿ ಹಾಗೂ ಮಹಿಳಾ ನಿರ್ದೇಶಕ ಸ್ಥಾನಕ್ಕೆ 12 ಮಂದಿ ಸ್ಪರ್ಧಿಸಿದ್ದಾರೆ ಎಂದರು.

ಚುನಾವಣೆಗಾಗಿ ಸಕಲ ಸಿದ್ಧತೆ ನಡೆಸಲಾಗಿದ್ದು, ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ ಹಾಗೂ ನಾಗಮಂಗಲ ತಾಲೂಕು ಸದಸ್ಯರಿಗಾಗಿ ಮಂಡ್ಯದ ಗಿರಿಜಾ ಟಾಕೀಸ್ ಪಕ್ಕದಲ್ಲಿರುವ ವೀರಶೈವ ವಿದ್ಯಾರ್ಥಿನಿಲಯದಲ್ಲಿ ಮತಗಟ್ಟೆಯನ್ನು ಸ್ಥಾಪಿಸಲಾಗುವುದು. ಮಳವಳ್ಳಿಯಲ್ಲಿ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘ, ಕೋಟೆ ಬೀದಿ, ಕೆ.ಆರ್.ಪೇಟೆಯಲ್ಲಿ ಸರ್ಕಾರಿ ಜೂನಿಯರ್ ಕಾಲೇಜು ಹೊಸಹೊಳಲು ರಸ್ತೆ, ಕೆ.ಆರ್. ಪೇಟೆ, ಪಾಂಡವಪುರದಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಫ್ರೆಂಚ್‌ರಾಕ್ಸ್ ಶಾಲೆ, ಪಾಂಡವಪುರದಲ್ಲಿ ಮತಗಟ್ಟೆ ಸ್ಥಾಪಿಸಲಾಗಿದೆ ಎಂದು ವಿವರಿಸಿದರು.

ಸದಸ್ಯರು ಮತದಾನಕ್ಕೆ ಬರುವಾಗ ಯಾವುದಾದರೂ ಭಾವಚಿತ್ರವಿರುವ ಗುರುತಿನ ಚೀಟಿಗಳ ಜೊತೆ ಮತದಾರರ ಪಟ್ಟಿ ಕ್ರಮ ಸಂಖ್ಯೆ ಮತ್ತು ನೋಂದಣಿ ಸಂಖ್ಯೆಯನ್ನು ಮತಗಟ್ಟೆ ಅಧಿಕಾರಿಗಳಿಗೆ ನೀಡಿ ಮತ ಚಲಾಯಿಸುವಂತೆ ಮನವಿ ಮಾಡಿದರು.

ಸಹಾಯಕ ಚುನಾವಣಾಧಿಕಾರಿಗಳಾದ ರಮೇಶ್ ಹಾಗೂ ಜವರೇಗೌಡ ಗೋಷ್ಠಿಯಲ್ಲಿದ್ದರು.