ಸಾರಾಂಶ
ಕಡೂರು ತಾಲೂಕಿನ ಪಂಚನಹಳ್ಳಿ- 9ನೇ ಮೈಲಿಕಲ್ಲಿನಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಸಭೆ
ಕನ್ನಡಪ್ರಭ ವಾರ್ತೆ, ಕಡೂರುದೇಶ ಉಳಿಯುವುದು ಗ್ಯಾರಂಟಿ ಆದರೆ ಎಲ್ಲವೂ ಉಳಿಯಲಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಚುನಾವಣೆ ಸನಾತನ ಧರ್ಮ ಮತ್ತು ಧರ್ಮ ವಿರೋಧಿಗಳ ನಡುವೆ ನಡೆಯುವ ಯುದ್ಧ ಎಂದು ಮಾಜಿ ಶಾಸಕ ಬೆಳ್ಳಿಪ್ರಕಾಶ್ ಹೇಳಿದರು. ಗುರುವಾರ ಹಾಸನ ಲೋಕಸಭಾ ವ್ಯಾಪ್ತಿಯ ಕಡೂರು ತಾಲೂಕಿನ ಪಂಚನಹಳ್ಳಿ ಹಾಗೂ 9ನೇ ಮೈಲಿಕಲ್ಲಿನಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ದೇಶಕ್ಕೆ ಸಮರ್ಥ ನಾಯಕತ್ವವಿಲ್ಲದಿದ್ದರೆ ಏನಾಗುತ್ತದೆ ಎಂಬುದನ್ನು ಯುದ್ಧ ಪೀಡಿತ ಉಕ್ರೇನ್ ನಂತಹ ದೇಶಗಳನ್ನು ನೋಡಿ ತಿಳಿದು ಕೊಳ್ಳಬೇಕು. ಕಳೆದ ಹತ್ತು ವರ್ಷಗಳಲ್ಲಿ ಭಾರತ ದೇಶಕ್ಕೆ ವಿಶ್ವಮಟ್ಟದಲ್ಲಿ ಸಿಕ್ಕ ಮಾನ್ಯತೆ ಏನೆಂಬುದು ದೇಶದ ಜನತೆಗೆ ತಿಳಿದಿದೆ. ಆ ಮಾನ್ಯತೆ ಮತ್ತಷ್ಟು ಹೆಚ್ಚಿ ಭಾರತ ದೇಶ ವಿಶ್ವದ ನಾಯಕತ್ವ ವಹಿಸಬೇಕೆಂದರೆ ಮತ್ತೆ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು. ಅವರ ಕೈ ಬಲಪಡಿಸಲು ಇಲ್ಲಿ ನಮ್ಮ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣರನ್ನು ಗೆಲ್ಲಿಸಬೇಕಿದೆ. ಯಾರನ್ನೂ ಟೀಕಿಸದೆ, ಯಾರಿಗೂ ಬೆದರದೆ ಕೇವಲ ರಾಷ್ಟ್ರ ಚಿಂತನೆ ದೃಷ್ಟಿಯಲ್ಲಿಟ್ಟುಕೊಂಡು ಮತ ಚಲಾಯಿಸಬೇಕು. ನಿಮ್ಮ ಒಂದೊಂದು ಮತವೂ ದೇಶ ಸೇವೆಗೆ ಸಮರ್ಪಿತವಾಗುತ್ತದೆ ಎಂದರು.ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ದೇಶದ ಸುಭಧ್ರತೆ, ಏಕತೆಗೆ ಮತ್ತು ಸಮಗ್ರತೆಗೆ ನರೇಂದ್ರ ಮೋದಿಯವರ ನಾಯಕತ್ವ ಅನಿವಾರ್ಯ. ಮೋದಿಯವರ ಕೈ ಬಲ ಪಡಿಸಲು ಇಲ್ಲಿ ಪ್ರಜ್ವಲ್ ಅವರನ್ನು ಗೆಲ್ಲಿಸಿ ಸಂಸತ್ತಿಗೆ ಕಳುಹಿಸಬೇಕು. ಬೆಳ್ಳಿ ಪ್ರಕಾಶ್ ಮತ್ತು ನಾನು 2 ಪಕ್ಷಗಳ ಕಾರ್ಯಕರ್ತರೊಡನೆ ಕೈ ಜೋಡಿಸುವ ಮುಖೇನ ಪ್ರಜ್ವಲ್ ಗೆಲುವಿಗೆ ಶ್ರಮಿಸುತ್ತೇವೆ ಎಂದರು.ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ಈ ಚುನಾವಣೆ ನಮ್ಮೆಲ್ಲರ ಸ್ವಾಭಿಮಾನದ ಚುನಾವಣೆ. ದೇಶದ ಹಿತದೃಷ್ಟಿಯಿಂದ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ವಿರೋಧಿಗಳು ಏನೇ ಹೇಳಲಿ. ದೇಶ ಮತ್ತು ರಾಜ್ಯದ ಹಿತಕ್ಕಾಗಿ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ದಯವಿಟ್ಟು ತಮ್ಮ ಮನಸ್ಸಿನಲ್ಲಿ ಚಿಂತನೆ ನಡೆಸಿ ಮತ ಚಲಾಯಿಸಿ ಎಂದು ಪ್ರಜ್ವಲ್ ಮನವಿ ಮಾಡಿದರುಜೆಡಿಎಸ್ ಅಧ್ಯಕ್ಷ ಕೆ.ಎಂ.ಮಹೇಶ್ವರಪ್ಪ, ಬಿಜೆಪಿ ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್, ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ವಡೆಯರ್, ಮುಖಂಡರಾದ ಬಿದರೆ ಜಗದೀಶ್, ದಾನಿ ಉಮೇಶ್, ಜಿಗಣೇಹಳ್ಳಿ ನೀಲಕಂಠಪ್ಪ, ಚೇತನ್ ಕೆಂಪರಾಜು, ಮುಖಂಡರಾದ ಕೆ.ಎಂ.ವಿನಾಯಕ, ಸೀಗೇಹಡ್ಲು ಹರೀಶ್, ವೈ.ಎಸ್.ರವಿಪ್ರಕಾಶ್, ಯುವ ಜನತಾದಳ ತಾಲೂಕು ಅಧ್ಯಕ್ಷ ಕೆ.ಎಚ್.ಹರ್ಷ, ವಿರೂಪಾಕ್ಷಪ್ಪ, ಪುಟ್ಟಲಿಂಗಪ್ಪ, ರಾಜಣ್ಣ ಮತ್ತಿತರರು ಇದ್ದರು.---- ಬಾಕ್ಸ್ ಸುದ್ದಿ ---ದೇವೇಗೌಡರ ಮನೆ ರಾಜಕೀಯ ಗುರುಕುಲವಿದ್ದಂತೆ. ಬಹುತೇಕ ರಾಜಕಾರಣಿಗಳು ಮಾಜಿ ಪ್ರಧಾನಿ ದೇವೇಗೌಡರ ಆಶೀರ್ವಾದ ಪಡೆದು ಬೆಳೆದಿದ್ದಾರೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಕೆ.ಆರ್. ಮಹೇಶ್ ವಡೆಯರ್ ಹೇಳಿದರು. ಕಡೂರಿನ ಹಾಲಿ ಶಾಸಕರು, ಮಾಜಿ ಶಾಸಕರೂ ಸೇರಿದಂತೆ ಬಹಳಷ್ಟು ರಾಜಕಾರಣಿಗಳು ಗೌಡರ ಕೃಪೆಯಿಂದ ರಾಜಕೀಯದಲ್ಲಿ ಸ್ಥಾನ ಮಾನ ಪಡೆದಿರುವುದು ಇತಿಹಾಸ. ಪ್ರಜ್ವಲ್ ಅವರು ಮತ್ತೆ ಗೆದ್ದು ಮೋದಿಯವರೊಡನೆ ಕೆಲಸ ಮಾಡುವ ಅವಕಾಶ ದೊರೆಯಲಿದೆ. ಹಿಂದೆ ಶಾಸಕರಾಗಿದ್ದ ವೈ.ಎಸ್.ವಿ ದತ್ತ, ಬೆಳ್ಳಿ ಪ್ರಕಾಶ್ ಅವರು ಕಡೂರು ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ.
ಪ್ರಜ್ವಲ್ ಮತ್ತೊಮ್ಮೆ ಸಂಸದರಾಗಿ ಕಡೂರು ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಗಮನ ನೀಡಲಿದ್ದಾರೆ. ಅವರಿಗೆ ಒಂದು ಲಕ್ಷಕ್ಕೂ ಅಧಿಕ ಮತಗಳು ದೊರೆಯುವಲ್ಲಿ ಅನುಮಾನವಿಲ್ಲ. ಕೇಂದ್ರದ ಸಾಧನೆಗಳು, ಕಡೂರಿನಲ್ಲಿ ಬೆಳ್ಳಿಪ್ರಕಾಶ್, ವೈ.ಎಸ್ ವಿ. ದತ್ತ ರವರ ಕಾರ್ಯಗಳು ಮತ್ತು 2 ಪಕ್ಷಗಳ ಕಾರ್ಯಕರ್ತರ ಶ್ರಮ ಪ್ರಜ್ವಲ್ ಅವರಿಗೆ ಗೆಲುವು ದೊರಕಿಸಿಕೊಡುವಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎಂದರು.--- ಬಾಕ್ಸ್ ಸುದ್ದಿ---ಜೋರು ಗಾಳಿ: ಭಾಷಣ ಮೊಟಕುಸಂಜೆ 9ನೇ ಮೈಲಿ ಕಲ್ಲಿನಲ್ಲಿ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಅಭ್ಯರ್ಥಿ ಪ್ರಜ್ವಲ್ ಭಾಷಣ ಮಾಡುವಾಗ ದಿಢೀರ್ ಎಂದು ಜೋರಾಗಿ ಗಾಳಿ ಬೀಸುವ ಮೂಲಕ ಶಾಮಿಯಾನ ಅಲ್ಲಾಡಲು ಆರಂಭವಾಗುತ್ತಿದ್ದಂತೆ ಶಾಮಿಯಾನದ ಮಾಲೀಕ ಸುರೇಶ್ ವೇದಿಕೆ ಬಳಿ ಓಡಿ ಬಂದು ಪೈಪ್ ಶಾಮಿಯನ ಬೀಳುತ್ತದೆ ಎಂದಾಗ ಪ್ರಜ್ವಲ್ ತಮ್ಮ ಭಾಷಣ ಮೊಟಕು ಮಾಡಿ ಮುಖಂಡರೊಂದಿಗೆ ಇಳಿದು ಚೌಳಹಿರಿಯೂರಿನ ಕಡೆಗೆ ತೆರಳಿದರು.
18ಕೆಕೆಡಿಯು2. ಹಾಸನ ಲೋಕಸಭಾ ವ್ಯಾಪ್ತಿಯ ಕಡೂರು ತಾಲ್ಲೂಕಿನ ಪಂಚನಹಳ್ಳಿ ಹಾಗೂ 9 ನೇ ಮೈಲಿಕಲ್ಲಿನಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಚುನಾವಣಾ ಪ್ರಚಾರ ಸಭೆ ನಡೆಯಿತು.