ಸಾರಾಂಶ
- ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ರೆಹಮಾನ್ ಪಟೇಲ್ ಮತ್ತು ಉಪಾಧ್ಯಕ್ಷರಾಗಿ ಲಕ್ಷ್ಮೀಬಾಯಿ ಕಂಬಾರ ಆಯ್ಕೆ
----ಕನ್ನಡಪ್ರಭ ವಾರ್ತೆ ಸುರಪುರ
ಕೆಂಭಾವಿ ಪಟ್ಟಣದಲ್ಲಿ ಶುಕ್ರವಾರ ಪುರಸಭೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಿತು. ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ 4ನೇ ವಾರ್ಡಿನ ರೆಹಮಾನ್ ಪಟೇಲ್ ಯಲಗೋಡ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿದ್ದ 2ನೇ ವಾರ್ಡಿನ ಲಕ್ಷ್ಮೀಬಾಯಿ ಕಂಬಾರ ಅವರು ಆಯ್ಕೆಯಾದರು.ಬಿಸಿಎ ಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ರಹೆಮಾನ ಪಟೇಲ ಯಲಗೋಡ ಹಾಗೂ ಬಿಜೆಪಿ ಪಕ್ಷದಿಂದ ಶರಣಪ್ಪ ಅಂಗಡಿ ನಾಮಪತ್ರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 22ನೇ ವಾರ್ಡಿನ ಕಾಳಮ್ಮ ಮೇಲಿನಮನಿ ನಾಮಪತ್ರ ಸಲ್ಲಿಸಿದ್ದರು. ಎಸ್ಸಿ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬಂಡಾಯ ಅಭ್ಯರ್ಥಿ ಲಕ್ಷ್ಮೀಬಾಯಿ ಕಂಬಾರ ಅವರೂ ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಎ.ಎಸ್.ಸಿ. ಮಹಿಳಾ ಸದಸ್ಯರು ಇಲ್ಲದೆ ಇರುವುದರಿಂದ ತಮ್ಮ ಪಕ್ಷದಿಂದ ಬಂಡಾಯವಿದ್ದು, ತಟಸ್ಥರಾಗಿದ್ದ ಲಕ್ಷ್ಮಿಬಾಯಿ ಕಂಬಾರ ಅವರಿಗೆ ಉಪಾಧ್ಯಕ್ಷ ಸ್ಥಾನದ ಗದ್ದುಗೆ ಒಲಿದು ಬಂದಿತು.
ಪಕ್ಷೇತರ ಬೆಂಬಲದಿಂದ 100 ಸ್ಥಾನಕ್ಕೇರಿದ್ದ ಕಾಂಗ್ರೆಸ್ ಪಕ್ಷಕ್ಕೆ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಸಂಸದ ಜಿ. ಕುಮಾರ ನಾಯಕ ಅವರು ಚುನಾವಣೆಯಲ್ಲಿ ಭಾಗವಹಿಸಿ, ತಮ್ಮ ಅಭ್ಯರ್ಥಿಗಳ ಪರವಾಗಿ ಕೈ ಎತ್ತಿ ಮ್ಯಾಜಿಕ್ ನಂಬರ್ ತಲುಪಿಸಿ, ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಸೋಲಿನ ರುಚಿ ತೋರಿಸಿದರು.ಚುನಾವಣಾಧಿಕಾರಿಯಾಗಿ ತಹಸೀಲ್ದಾರ ಎಚ್. ಎ. ಸರಕಾವಸ್ ಕಾರ್ಯನಿರ್ವಹಿಸಿದರು. ಆಡಳಿತಾಧಿಕಾರಿ ಡಾ. ಹಂಪಣ್ಣ ಸಜ್ಜನ್, ಮುಖ್ಯಾಧಿಕಾರಿ ಮಹ್ಮದ್ ಯುಸೂಫ್ ಇದ್ದರು. 23 ಸದಸ್ಯರಲ್ಲಿ 13 ಜನ ಬಿಜೆಪಿ ಸದಸ್ಯರಿದ್ದರೂ ಏಳು ಜನ ಬಿಜೆಪಿ ಸದಸ್ಯರು ಕಾಂಗ್ರೆಸ್ ಹಾಕಿದ್ದ ಗಾಳಕ್ಕೆ ಬಿದ್ದಿದ್ದು, ಹೀಗಾಗಿ ಬಿಜೆಪಿ ಪಕ್ಷಕ್ಕೆ ಬಂಡಾಯದ ಬಿಸಿ ಈ ಚುನಾವಣೆಯಲ್ಲಿ ತಟ್ಟಿತು. ಏಳು ಜನ ಬಿಜೆಪಿ ಸದಸ್ಯರು ಚುನಾವಣಾ ಸಮಯದಲ್ಲಿ ತಮ್ಮ ಪ್ರತ್ಯೇಕ ಆಸನದಲ್ಲಿ ಕುಳಿತು ತಟಸ್ಥ ನಿಲುವು ತಾಳಿದರು.
ಸಿಪಿಐ ಸಚಿನ್ ಚಲುವಾದಿ ನೇತೃತ್ವದಲ್ಲಿ ಪಿಎಸ್‌ಐ ಅಮೋಜ ಕಾಂಬಳೆ ಚುನಾವಣೆ ನಡೆಯುವ ವೇಳೆ ಪುರಸಭೆ ಸುತ್ತಮುತ್ತಲಿನ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಹಾಗೂ ಸಚಿವರು ಮತ್ತು ಸಂಸದರಿಗೆ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಬೃಹತ್ ಹೂಮಾಲೆ ಹಾಕಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.ಸಿದ್ಧಗೌಡ ಪೊಲೀಸ್ ಪಾಟೀಲ್, ಶಂಕ್ರಣ್ಣ ವಣಕ್ಯಾಳ, ವಾಮನರಾವ ದೇಶಪಾಂಡೆ, ಬಸವರಾಜ ಚಿಂಚೋಳಿ, ಶಾಂತಗೌಡ ನೀರಲಗಿ, ಬಾಪುಗೌಡ ಪಾಟೀಲ್, ಬಸನಗೌಡ ಯಾಳಗಿ ಇದ್ದರು.
----14ವೈಡಿಆರ್19: ಕೆಂಭಾವಿ ಪಟ್ಟಣದ ಪುರಸಭೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ರಹೆಮಾನ ಪಟೇಲ ಮತ್ತು ಉಪಾಧ್ಯಕ್ಷರಾಗಿ ಲಕ್ಷ್ಮಿಬಾಯಿ ಕಂಬಾರ ಆಯ್ಕೆಯಾಗುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹಾಗೂ ಸಂಸದ ಜಿ. ಕುಮಾರ ನಾಯಕ ಅವರಿಗೆ ಬೃಹತ್ ಹೂಮಾಲೆ ಹಾಕಿ ಸಂಭ್ರಮಿಸಿದರು.