ಸಾರಾಂಶ
ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶಾಸಕ ಎಚ್.ಸಿ. ಬಾಲಕೃಷ್ಣರವರು ಈಗಾಗಲೇ ಮುಖ್ಯಮಂತ್ರಿ ವಿಶೇಷ ಅನುದಾನದಡಿ 25 ಕೋಟಿ ರು. ಅನುದಾನವನ್ನು ತಂದಿದ್ದು, ಅದರಲ್ಲಿ ಮಾಗಡಿ ಪುರಸಭಾ ವ್ಯಾಪ್ತಿಯಲ್ಲಿ ಚರಂಡಿ ಮತ್ತು ರಸ್ತೆ ಅಭಿವೃದ್ಧಿಗೆ 4.5 ಕೋಟಿ ರು. ಅನುದಾನ ಕೊಟ್ಟಿರುವ ಹಿನ್ನೆಲೆಯಲ್ಲಿ ಅಗತ್ಯವಾಗಿ ವಾರ್ಡ್ಗಳಿಗೆ ಕಾಂಕ್ರಿಟ್ ರಸ್ತೆ, ಚರಂಡಿ ನಿರ್ಮಾಣದ ಕೆಲಸ ಆಗಲಿದ್ದು, ಪಟ್ಟಣದ ಜ್ಯೋತಿನಗರದ ವಾರ್ಡ್ ಗೆ 1.25 ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತ ರಸ್ತೆ, ಚರಂಡಿ ನಿರ್ಮಿಸಲಾಗುತ್ತದೆ.
ಕನ್ನಡಪ್ರಭ ವಾರ್ತೆ ಮಾಗಡಿ
ಚನ್ನಪಟ್ಟಣ ಉಪ ಚುನಾವಣೆ ಹಾಗೂ ಹಿಂದೆ ನಡೆದ ಚುನಾವಣೆಯ ನೀತಿ ಸಂಹಿತೆ ಕಾರಣದಿಂದ ಕಾಮಗಾರಿಗಳಿಗೆ ವೇಗ ಸಿಕ್ಕಿಲ್ಲ. ಶೀಘ್ರದಲ್ಲೇ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತೇವೆ ಎಂದು ಪುರಸಭೆ ಅಧ್ಯಕ್ಷೆ ರಮ್ಯ ನರಸಿಂಹಮೂರ್ತಿ ಹೇಳಿದರು.ಪಟ್ಟಣದಲ್ಲಿ ಮುಖ್ಯಮಂತ್ರಿ ವಿಶೇಷ ಅನುದಾನದಡಿ 4.5 ಕೋಟಿ ರು. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಶೀಘ್ರದಲ್ಲೇ ಕೆಲಸ ಆರಂಭವಾಗುವ ಹಿನ್ನೆಲೆಯಲ್ಲಿ ವಾರ್ಡ್ ಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಪಟ್ಟಣದಲ್ಲಿ ಕೇಶಿಪ್ ಕಾಮಗಾರಿಗೂ ಚಾಲನೆ ಕೊಡಲಿದ್ದು, ಕಾಮಗಾರಿ ಆರಂಭಿಸುವಂತೆ ಕೇಶಿಫ್ ಅಧಿಕಾರಿಗಳಿಗೆ ಶಾಸಕ ಬಾಲಕೃಷ್ಣ ರವರು ಸೂಚನೆ ನೀಡಿದ್ದಾರೆ, ಈ ಕಾಮಗಾರಿಯು ಶೀಘ್ರದಲ್ಲೇ ಆರಂಭವಾಗಲಿದ್ದು, ಪಟ್ಟಣದ ಜನತೆಗೆ ಸುಸಜ್ಜಿತ ರಸ್ತೆ ಕೊಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶಾಸಕ ಎಚ್.ಸಿ. ಬಾಲಕೃಷ್ಣರವರು ಈಗಾಗಲೇ ಮುಖ್ಯಮಂತ್ರಿ ವಿಶೇಷ ಅನುದಾನದಡಿ 25 ಕೋಟಿ ರು. ಅನುದಾನವನ್ನು ತಂದಿದ್ದು, ಅದರಲ್ಲಿ ಮಾಗಡಿ ಪುರಸಭಾ ವ್ಯಾಪ್ತಿಯಲ್ಲಿ ಚರಂಡಿ ಮತ್ತು ರಸ್ತೆ ಅಭಿವೃದ್ಧಿಗೆ 4.5 ಕೋಟಿ ರು. ಅನುದಾನ ಕೊಟ್ಟಿರುವ ಹಿನ್ನೆಲೆಯಲ್ಲಿ ಅಗತ್ಯವಾಗಿ ವಾರ್ಡ್ಗಳಿಗೆ ಕಾಂಕ್ರಿಟ್ ರಸ್ತೆ, ಚರಂಡಿ ನಿರ್ಮಾಣದ ಕೆಲಸ ಆಗಲಿದ್ದು, ಪಟ್ಟಣದ ಜ್ಯೋತಿನಗರದ ವಾರ್ಡ್ ಗೆ 1.25 ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತ ರಸ್ತೆ, ಚರಂಡಿ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.ಆಡಿಟೋರಿಯಂ, ಗುರುಭವನ ಆರಂಭ:
ಪಟ್ಟಣಕ್ಕೆ ಶಾಸಕರು 25 ಕೋಟಿ ರು. ಅನುದಾನ ತಂದಿದ್ದು, ಇದರಲ್ಲಿ ಸುಸಜ್ಜಿತ ಆಡಿಟೋರಿಯಂ ಹಾಗೂ ಗುರುಭವನ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಶಿಕ್ಷಕರ ಕ್ಷೇತ್ರದ ಚುನಾವಣೆ, ಲೋಕಸಭಾ ಚುನಾವಣೆ, ಈಗ ಚನ್ನಪಟ್ಟಣ ಉಪಚುನಾವಣೆಯ ಹಿನ್ನೆಲೆ ನೀತಿ ಸಂಹಿತೆಯಿಂದ ಕಾಮಗಾರಿಗಳಿಗೆ ವೇಗ ಸಿಗಲು ಸಾಧ್ಯವಾಗಿಲ್ಲ. ಆರು ತಿಂಗಳ ಕಾಲ ನೀತಿ ಸಂಹಿತೆಯಲ್ಲೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಉಪಚುನಾವಣೆ ಮುಗಿದ ನಂತರ ಕಾಮಗಾರಿಗಳಿಗೆ ವೇಗ ಸಿಗಲಿದೆ. ಸಿದ್ದರಾಮಯ್ಯ ಸರ್ಕಾರದಿಂದ ಹೆಚ್ಚುವರಿ ಅನುದಾನ ತಂದು ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡಲು ನಮ್ಮ ಶಾಸಕರು ಬದ್ಧರಾಗಿದ್ದಾರೆ ಎಂದು ರಮ್ಯ ನರಸಿಂಹಮೂರ್ತಿ ತಿಳಿಸಿದರು. ಪುರಸಭಾ ನಾಮಿನಿ ಸದಸ್ಯ ಆನಂದ್, ಪುರಸಭೆ ಇಂಜಿನಿಯರ್ ಪ್ರಶಾಂತ್, ಸಹಾಯಕ ಇಂಜಿನಿಯರ್ ಶೀಲಾ ಜೋಗೂರು, ಸಿಬ್ಬಂದಿ ದಿನೇಶ್, ಇಂಜಿನಿಯರ್ ಮಹೇಶ್ ಸೇರಿದಂತೆ ಗುತ್ತಿಗೆದಾರರು ಭಾಗವಹಿಸಿದ್ದರು.