ಎಲೆಕ್ಟ್ರೋರಲ್ ಬಾಂಡ್ ಹಣ ಚುನಾವಣೆಗೆ ಬಳಕೆ: ಮಯೂರ್ ಜೈಕುಮಾರ್ ಆರೋಪ

| Published : Apr 29 2024, 01:35 AM IST

ಎಲೆಕ್ಟ್ರೋರಲ್ ಬಾಂಡ್ ಹಣ ಚುನಾವಣೆಗೆ ಬಳಕೆ: ಮಯೂರ್ ಜೈಕುಮಾರ್ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ತೆರಿಗೆ ಪಾಲನ್ನು ವಾಪಾಸ್ ನೀಡದ ಕೇಂದ್ರ ಸರ್ಕಾರದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರು ದಾಖಲಿಸಿದ ಹಿನ್ನೆಲೆಯಲ್ಲಿ 3.5 ಸಾವಿರ ಕೋಟಿ ರು. ನೀಡುವಂತೆ ಆದೇಶವಾಗಿದೆ ಎಂದು ಮಯೂರ್ ಜೈಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ / ಶಿಕಾರಿಪುರ

ಕೇಂದ್ರದ ಬಿಜೆಪಿ ಸರ್ಕಾರದ ಅನ್ಯಾಯ ದೌರ್ಜನ್ಯವನ್ನು ಪ್ರಶ್ನಿಸುವವರನ್ನು ಐಟಿ, ಇಡಿ, ಸಿಬಿಐನಿಂದ ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಸರ್ಕಾರವನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸದಿದ್ದಲ್ಲಿ ಪ್ರಶ್ನಿಸುವ ಅರ್ಹತೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ್ ಜೈಕುಮಾರ್ ಎಚ್ಚರಿಸಿದರು.

ಭಾನುವಾರ ಸಂಜೆ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ ಎಲ್ಲ ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾರಿ ಗೊಳಿಸಿದ್ದು, ಯೋಜನೆಯನ್ನು ಜಾರಿಗೊಳಿಸುವಲ್ಲಿ ಕೇಂದ್ರ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬುದನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವಂತೆ ತಿಳಿಸಿದರು.

ಇದೀಗ ಎಲೆಕ್ಟ್ರೋರಲ್ ಬಾಂಡ್ ಮೂಲಕ 6.5 ಸಾವಿರ ಕೋಟಿ ರು. ಹಗರಣದ ಮೂಲಕ ಉತ್ತರಪ್ರದೇಶ, ರಾಜಸ್ತಾನ್, ಮಧ್ಯಪ್ರದೇಶ ಮತ್ತಿತರ ಚುನಾವಣೆಯಲ್ಲಿ ವಿನಿಯೋಗಿಸುವ ದೊಡ್ಡ ಷಡ್ಯಂತ್ರ ನಡೆದಿದೆ ಎಂದು ತಿಳಿಸಿದರು.

ರಾಜ್ಯದ ಜನತೆ ಬೆವರು ಸುರಿಸಿ ತೆರಿಗೆ ಪಾವತಿಸಿದ್ದು, ದೇಶದಲ್ಲಿಯೇ ಕರ್ನಾಟಕ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ರಾಜ್ಯದ ತೆರಿಗೆ ಪಾಲನ್ನು ವಾಪಾಸ್ ನೀಡದ ಕೇಂದ್ರ ಸರ್ಕಾರದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರು ದಾಖಲಿಸಿದ ಹಿನ್ನೆಲೆಯಲ್ಲಿ 3.5 ಸಾವಿರ ಕೋಟಿ ರು. ನೀಡುವಂತೆ ಆದೇಶವಾಗಿದೆ. ರಾಜ್ಯದ ಜನತೆಯ ತೆರಿಗೆ ಹಣವನ್ನು ಇತರೆ ರಾಜ್ಯಗಳಿಗೆ ನೀಡುವ ಕೇಂದ್ರ ಇಲ್ಲಿನ ಜನತೆ ಕಣ್ಣಿಗೆ ಖಾರದ ಪುಡಿ ಎರಚಿ ಅಲ್ಲಿನ ಜನತೆಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ರಾಜ್ಯ, ದೇಶಕ್ಕಾಗಿ ಲೋಕಸಭೆಯಲ್ಲಿ ಪ್ರಶ್ನಿಸುತ್ತಿದ್ದ ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿದ್ದು, 5 ತಲೆಮಾರು ದೇಶಕ್ಕಾಗಿ ತ್ಯಾಗ ಬಲಿದಾನದ ಕುಟುಂಬದ ರಾಹುಲ್ ಗಾಂಧಿ ಸರ್ವೋಚ್ಛ ನ್ಯಾಯಾಲಯದ ಮೂಲಕ ಸದಸ್ಯತ್ವ ವಾಪಾಸ್ ಪಡೆಯ ಲಾಗಿದೆ ಎಂದರು. ಎಲ್ಲರೂ ಒಗ್ಗಟ್ಟಾಗಿ ಶೇ.40 ಕಮೀಷನ್ ಸರ್ಕಾರ ಕಿತ್ತೊಗೆದ ರೀತಿ ಖಾಲಿ ಚೊಂಬು ಸರ್ಕಾರವನ್ನು ಕಿತ್ತೊಗೆ ಯುವ ದೃಢಸಂಕಲ್ಪ ಮಾಡುವಂತೆ ಕರೆ ನೀಡಿದರಲ್ಲದೆ, ಪಕ್ಷದ ಅಭ್ಯರ್ಥಿ ಗೀತಾರನ್ನು ಅತ್ಯಧಿಕ ಮತಗಳ ಅಂತರದಿಂದ ಜಯಗಳಿಸುವಂತೆ ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಯೂರ್ ಜೈಕುಮಾರ್‌ರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಂ ಪಾರಿವಾಳದ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗರಾಜಗೌಡ, ಸದಸ್ಯ ಗೋಣಿ ಮಾಲತೇಶ್ ಮುಖಂಡ ಉಳ್ಳಿ ದರ್ಶನ್, ರವೀಂದ್ರ [ರಾಘು], ಶ್ರೀಧರ ಕರ್ಕಿ, ವೀರೇಶ್, ಶಿವ್ಯಾನಾಯ್ಕ, ಸಾಲೂರು ಪ್ರಕಾಶ್, ಮಂಜುನಾಥ್ ಎಸ್.ಎನ್ ಮತ್ತಿತರರು ಉಪಸ್ಥಿತರಿದ್ದರು.20 ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲುವು: ಐವಾನ್ ಡಿಸೋಜ

ಶಿವಮೊಗ್ಗ: ದೇಶದಾದ್ಯಂತ ಐಎನ್‌ಡಿಐಎ ಒಕ್ಕೂಟ ಅಭ್ಯರ್ಥಿಗಳಿಗೆ ಒಳ್ಳೆಯ ವಾತಾವರಣ ನಿರ್ಮಾಣವಾಗಿದೆ ಎಂದು ಕೆಪಿಸಿಸಿಯ ಮುಖ್ಯ ವಕ್ತಾರ ಐವಾನ್ ಡಿಸೋಜ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಧಾನಿ ಅವರ ಭಾಷಣದಲ್ಲಿ ಬದಲಾವಣೆ ಕಂಡು ಬರುತ್ತಿದೆ. ಮೋದಿ ಅವರ ಭಾಷಣವನ್ನು ಬಹಳ ವರ್ಷದಿಂದ ಗಮನಿಸುತ್ತಿದ್ದೆ. ಪ್ರಧಾನಿ ವಿಚಲಿತರಾದಂತೆ ಕಂಡಿದ್ದಾರೆ ಎಂದರು.ಕಾಂಗ್ರೆಸ್ ಬಹುಸಂಖ್ಯಾತರನ್ನು ಕಸಿದುಕೊಂಡು ಅಲ್ಪಸಂಖ್ಯಾತರಿಗೆ ಕೊಡುತ್ತಾರೆ ಎಂದು ಪ್ರಧಾನಿ ಹೇಳ್ತಾ ಇದ್ದಾರೆ. ದೇಶದ ಆಸ್ತಿಯನ್ನೂ ಸಹ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ನೀಡುತ್ತಿದ್ದಾರೆ ಎನ್ನುತ್ತಿದ್ದಾರೆ. ಚುನಾವಣೆಯಲ್ಲಿ ಸೋಲಿನ ಭಯದಿಂದ ಪ್ರಧಾನಿ ಮಾತಾಡಿದ್ದಾರೆ ಎಂದು ಕುಟುಕಿದರು.

ರಾಜ್ಯದಲ್ಲಿ ಮುಸ್ಲೀಂರಿಗೆ ಶೇ.4 ಮೀಸಲಾತಿ ನೀಡಲಾಗಿತ್ತು. ಬಿಜೆಪಿ ರಾಜ್ಯದಲ್ಲಿತ್ತು.‌ ಬದಲಾಯಿಸಲಾಗಿಲ್ಲ. ಬೊಮ್ಮಾಯಿ ಸರ್ಕಾರ ಕೊನೆ ಹಂತದಲ್ಲಿ ಮುಸ್ಲಿಂ ಸಮುದಾಯದ ಶೇ.4 ಮೀಸಲಾತಿ ತೆಗೆದು ಬೇರೆ ಸಮುದಾಯಕ್ಕೆ ನೀಡಿತು.ನ್ಯಾಯಾಲಯಕ್ಕೆ ಹೋದರು.‌ ನ್ಯಾಯಾಲಯವು ಈ ಮೀಸಲಾತಿಯನ್ನು ಪುರಸ್ಕರಿಸಿಲ್ಲ. ಈ ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ರಾಜ್ಯದಲ್ಲಿ ನಡೆದ 14 ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಗಿಂತ ಉತ್ತಮ ಸ್ಥಿತಿಯಲ್ಲಿದೆ ಎಂದರು.

ಗ್ಯಾರಂಟಿಗಳು ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಬಲ ತಂದು ಕೊಡಲಿದೆ. ಶಿವಮೊಗ್ಗದಲ್ಲಿ ಮತದಾರರನ್ನು ಭೇಟಿಯಾಗಿದ್ದೇನೆ. ಮೋದಿ ಅಲೆ ಇಲ್ಲ, ಗೀತಾಗೆ ಹೆಚ್ಚಿನ ಒಲವಿದೆ. ಇಲ್ಲಿ ಗೀತಾ ಗೆಲುವಿನ ಜೊತೆಗೆ ರಾಜ್ಯದಲ್ಲಿ 20 ಕ್ಷೇತ್ರದ ಪಕ್ಷ ಅಭ್ಯರ್ಥಿಗಳು ಗೆದ್ದು ಬೀಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ವಿಡಿಯೋಗಳು ವೈರಲ್ ಕುರಿತು ಎಸ್‌ಐಟಿಗೆ ನೀಡಲಾಗಿದೆ. ಅವರು ವಿದೇಶಕ್ಕೆ ಹೋಗಿರುವ ಮಾಹಿತಿ ಇದೆ. ಅಪರಾಧ ಸಾಬೀತಾದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ ಸೇರಿದಂತೆ ಹಲವರು ಇದ್ದರು.