ಸಾರಾಂಶ
ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣಾ ಕಾರ್ಯ ಕೈಗೊಂಡು ಮತದಾರರ ಕರಡು ಪಟ್ಟಿ ಪ್ರಕಟಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ನಡೆದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತ ಚುನಾವಣಾ ಆಯೋಗ ಪ್ರತಿ ವರ್ಷ ಜನವರಿ 1 ನ್ನು ಅರ್ಹತಾ ದಿನಾಂಕವಾಗಿ ನಿಗಧಿಪಡಿಸಿಕೊಂಡು ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಕಾರ್ಯ ಕೈಗೊಳ್ಳಲು ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದರು.
ಅ. 29 ರಂದು ಮತದಾರರ ಕರಡು ಪಟ್ಟಿ ಪ್ರಕಟಿಸಲಾಗಿದ್ದು, ನ. 28 ರವರೆಗೆ ಸರಿಪಡಿಸಿಕೊಳ್ಳಲು ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ನ. 9, 10, 23 ಮತ್ತು 24 ರಂದು ಮನವಿ, ಆಕ್ಷೇಪಣೆಗಳ ಸರಿಪಡಿಸುವ ಕಾರ್ಯ ನಡೆಯಲಿದ್ದು, 2025 ಜ. 6 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಹೇಳಿದರು.ಮತದಾರರ ಕರಡು ಪಟ್ಟಿಯಂತೆ ಜಿಲ್ಲೆಯಲ್ಲಿ 9,73,913 ಮತದಾರರಿದ್ದಾರೆ. ಪುರುಷರು 4,77,941, ಮಹಿಳಾ 4,95,943 ಮಹಿಳೆಯರು ಮತ್ತು ತೃತೀಯ ಲಿಂಗಿಗಳು 29 ಮತದಾರರಿದ್ದು, 8812 ಯುವ ಮತದಾರರು ಇದ್ದಾರೆ ಎಂದರು.2024ರ ಏಪ್ರಿಲ್ 4 ರಿಂದ ಅ. 26 ರವರೆಗೆ ನಡೆದ ನಿರಂತರ ಪರಿಷ್ಕರಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 8,043 ಮತದಾರರು ಸೇರ್ಪಡೆಯಾಗಿದ್ದಾರೆ. 8,311 ಮತದಾರರನ್ನು ಕೈಬಿಡಲಾಗಿದ್ದು, ಮತದಾರರ ಪಟ್ಟಿಯಲ್ಲಿ 15,141 ತಿದ್ದುಪಡಿ ಮಾಡಲಾಗಿದೆ ಎಂದ ಅವರು, ಜಿಲ್ಲೆಯಲ್ಲಿ 1229 ಮತಗಟ್ಟೆಗಳಿದ್ದು, ಹಾಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ತರೀಕೆರೆ ವಿಧಾನಸಭಾ ಕ್ಷೇತ್ರದ ಅಜ್ಜಂಪುರ ತಾಲೂಕಿನಲ್ಲಿ 1 ಮತಗಟ್ಟೆಯನ್ನು ಹೊಸದಾಗಿ ರಚಿಸಲಾಗಿದೆ. ಅದರಂತೆ ಜಿಲ್ಲೆಯಲ್ಲಿ 1230 ಮತಗಟ್ಟೆಗಳಿವೆ ಎಂದು ತಿಳಿಸಿದರು.ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿದ್ದು, ಮೃತ, ಸ್ಥಳಾಂತರ, ಪುನರಾವರ್ತನೆ ಆಗಿದ್ದಲ್ಲಿ ಹೆಸರು ತೆಗೆಯಲು ಆಕ್ಷೇಪಣೆ ಅರ್ಜಿಯನ್ನು ವೇಳಾಪಟ್ಟಿ ದಿನಾಂಕದಲ್ಲಿ ಪಡೆದುಕೊಳ್ಳಲಾಗುತ್ತದೆ. ಮತದಾರರ ಗುರುತಿನ ಚೀಟಿಯಲ್ಲಿನ ನಮೂದುಗಳು ತಪ್ಪಾಗಿದ್ದಲ್ಲಿ ತಿದ್ದು ಪಡಿ ಮಾಡಲು ಹಾಗೂ ವಿಧಾನಸಭಾ ಕ್ಷೇತ್ರದ 1 ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆ ಮಾಡಲು ಅರ್ಜಿ ಸ್ವೀಕರಿಸಲಾಗುತ್ತದೆ ಎಂದ ಅವರು, ನಾಗರಿಕರು ಇದರ ಸದುಪಯೋಗ ಪಡೆಯುವಂತೆ ಮನವಿ ಮಾಡಿದರು.ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಜರಿದ್ದರು.
3 ಕೆಸಿಕೆಎಂ 2ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರ ಅಧ್ಯಕ್ಷತೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಯಿತು.