ಸಾರಾಂಶ
ಶಿರಸಿ:
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ವಾಹನಗಳ ಡ್ಯಾಶ್ ಬೋರ್ಡ್ ತಯಾರಿಸುತ್ತಿದ್ದ ಫ್ಯಾಕ್ಟರಿ ಸುಟ್ಟು ಭಸ್ಮವಾದ ಘಟನೆ ತಾಲೂಕಿನ ಕೊಳಗಿಬೀಸ್‌ನಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.ತಾಲೂಕಿನ ಕಾನಗೋಡ ಮಶಿಗದ್ದೆಯ ರಾಘವ ವಿಶ್ವೇಶ್ವರ ಹೆಗಡೆ ಅವರಿಗೆ ಸೇರಿದ ಮಾನ್ಯ ಇಂಡಸ್ಟ್ರೀಸ್‌ನಲ್ಲಿ ಈ ದುರ್ಘಟನೆ ನಡೆದಿದೆ. ಫ್ಯಾಕ್ಟರಿಯ ಸಮೀಪವೇ ಇರುವ ವಿದ್ಯುತ್ ಪರಿವರ್ತಕದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಸಮೀಪದಲ್ಲಿಯೇ ಇದ್ದ ತ್ಯಾಜ್ಯ ವಸ್ತುಗಳಿಗೆ ಬೆಂಕಿ ತಗುಲಿ ನೋಡು ನೋಡುತ್ತಿರುವಂತೆಯ ಫ್ಯಾಕ್ಟರಿ ಸಮೀಪದಲ್ಲಿ ಇಡಲಾಗಿದ್ದ ಫೈಬರ್‌ನ ಸಿದ್ಧಗೊಂಡ ಡ್ಯಾಶ್ ಬೋರ್ಡ್‌ಗಳಿಗೆ ಬೆಂಕಿ ತಗುಲಿ ಬಳಿಕ ಫ್ಯಾಕ್ಟರಿಯ ಒಳಗಿದ್ದ ಫೈಬರ್ ವಸ್ತುಗಳಿಗೂ ಆವರಿಸಿದೆ.ಸಿಬ್ಬಂದಿ ಶ್ರಮ ವ್ಯರ್ಥ:ಅಗ್ನಿಶ್ಯಾಮಕ ದಳದ ವಾಹನ ಸ್ಥಳಕ್ಕೆ ಆಗಮಿಸಿ ನೀರು ಸಿಂಪಡಿಸಿದೆಯಾದರೂ ಫೈಬರ್ ವಸ್ತುಗಳೇ ಜಾಸ್ತಿ ಇದ್ದ ಕಾರಣ ತ್ವರಿತವಾಗಿ ಆರಲಿಲ್ಲ. ವಾಹನದಲ್ಲಿದ್ದ ನೀರು ಸಂಪೂರ್ಣ ಖಾಲಿಯಾದರೂ ಬೆಂಕಿಯ ಪ್ರಮಾಣ ಕ್ಷೀಣಿಸಿರಲಿಲ್ಲ. ಸ್ಥಳಕ್ಕೆ ಸಿದ್ದಾಪುರದ ಅಗ್ನಿಶ್ಯಾಮಕ ವಾಹನ ತರಿಸಿ ಬೆಂಕಿ ಆರಿಸುವ ಯತ್ನ ನಡೆದರೂ ಅದು ಸಾಧ್ಯವಾಗಲಿಲ್ಲ. ಅಗ್ನಿಶ್ಯಾಮಕ ವಾಹನಕ್ಕೆ ನೀರು ತುಂಬಿಕೊಂಡು ವಾಪಸಾಗುವ ವೇಳೆ ಬೆಂಕಿಯ ಪ್ರಮಾಣ ಇನ್ನಷ್ಟು ಜಾಸ್ತಿಯಾಗಿರುತ್ತಿತ್ತು. ಇದರಿಂದಾಗಿ ಅಗ್ನಿಶ್ಯಾಮಕ ದಳದ ಶ್ರಮ ವಿಫಲವಾಗಿ ಸಂಪೂರ್ಣ ಫ್ಯಾಕ್ಟರಿಯೇ ಸುಟ್ಟು ಹೋಗಿದೆ. ಫೈಬರ್ ಉತ್ಪನ್ನಗಳಿಗೆ ಬೆಂಕಿ ಬಿದ್ದಿದ್ದರಿಂದ ದಟ್ಟನೆಯ ಕಪ್ಪು ಹೊಗೆ ಎಲ್ಲೆಡೆ ಆವರಿಸಿಕೊಂಡು ದೂರದವರೆಗೂ ಗೋಚರವಾಗುತ್ತಿತ್ತು. ಘಟನೆಯಿಂದಾಗಿ ಸುಮಾರು ₹ 3 ಕೋಟಿ ಹಾನಿ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.