ಸಾರಾಂಶ
ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಅವಘಡಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪ್ರಸಕ್ತ ವರ್ಷ ಕಳೆದ 8 ತಿಂಗಳಲ್ಲೇ 71 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪ್ರತಿ ವರ್ಷವೂ ವಿದ್ಯುತ್ ಅವಘಡಗಳಿಂದ ಮನುಷ್ಯ ಹಾಗೂ ಪ್ರಾಣಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.
2019-20 ರಲ್ಲಿ 149 ಮಂದಿ ಸಾವನ್ನಪ್ಪಿದ್ದರೆ 2023-24ರಲ್ಲಿ 193 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಅವಘಡಗಳನ್ನು ತಡೆಯಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಸುರಕ್ಷತಾ ಲೋಪಗಳನ್ನು ಸರಿಪಡಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
2019-20ರಲ್ಲಿ 149 ಮಂದಿ ಮನುಷ್ಯರು, 45 ಪ್ರಾಣಿಗಳು ಸಾವನ್ನಪ್ಪಿವೆ. 2020-21ರಲ್ಲಿ 110 ಮಂದಿ, 2021-22ರಲ್ಲಿ 181 ಮಂದಿ, 2022-23ರಲ್ಲಿ 193 ಮಂದಿ ಹಾಗೂ 2023-24ರಲ್ಲೂ 193 ಮಂದಿ ಸಾವನ್ನಪ್ಪಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಈಗಾಗಲೇ 71 ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಗಣೇಶೋತ್ಸವ ಕಾರ್ಯಕ್ರಮಗಳು ನಡೆಯುತ್ತಿದ್ದು, ಅನಧಿಕೃತವಾಗಿ ಸಂಪರ್ಕ ಪಡೆದಿರುವುದು ಹಾಗೂ ಗಣೇಶ ಮೆರವಣಿಗೆ ನಡೆಸುತ್ತಿರುವ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು. ಆದರೆ ಬಹುತೇಕ ಬೆಸ್ಕಾಂ ಅಧಿಕಾರಿಗಳು ನಿಯಮಗಳ ಪಾಲನೆ ಆಗುತ್ತಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳುವುದಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.