ನಕ್ಷೆ ಉಲ್ಲಂಘಿಸಿ ನಿರ್ಮಾಣಗೊಂಡ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡುವಂತಿಲ್ಲ ಎಂಬ ಸುಪ್ರೀಂಕೋರ್ಟ್ ಆದೇಶಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರವು 1200 ಚದರಡಿಗಿಂತ ಕಡಿಮೆ ಇರುವವರಿಗೆ ಸಂಪರ್ಕ ನೀಡಬಹುದೆನ್ನುವ ನಿರ್ಧಾರವನ್ನು ಕೆಲವು ಗುತ್ತಿಗೆದಾರರು ನಕಲಿ ದಾಖಲೆಗಳ ಮೂಲಕ ಹೆಚ್ಚುವರಿ ಹಣ ಪಡೆಯುವ ಮೂಲಕ ಸಂಪರ್ಕ ಕಲ್ಪಿಸಿಕೊಟ್ಟ ಕೋಟ್ಯಂತರ ರು. ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ.
ಗೋಪಾಲ್ ಯಡಗೆರೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗನಕ್ಷೆ ಉಲ್ಲಂಘಿಸಿ ನಿರ್ಮಾಣಗೊಂಡ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡುವಂತಿಲ್ಲ ಎಂಬ ಸುಪ್ರೀಂಕೋರ್ಟ್ ಆದೇಶಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರವು 1200 ಚದರಡಿಗಿಂತ ಕಡಿಮೆ ಇರುವವರಿಗೆ ಸಂಪರ್ಕ ನೀಡಬಹುದೆನ್ನುವ ನಿರ್ಧಾರವನ್ನು ಕೆಲವು ಗುತ್ತಿಗೆದಾರರು ನಕಲಿ ದಾಖಲೆಗಳ ಮೂಲಕ ಹೆಚ್ಚುವರಿ ಹಣ ಪಡೆಯುವ ಮೂಲಕ ಸಂಪರ್ಕ ಕಲ್ಪಿಸಿಕೊಟ್ಟ ಕೋಟ್ಯಂತರ ರು. ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ.
ಸರ್ಕಾರದ ನಿಯಮವನ್ನು ತಮಗೆ ಬೇಕಾದ ರೀತಿಯಲ್ಲಿ ನಕಲಿ ದಾಖಲೆ ಮೂಲಕ ಮೆಸ್ಕಾಂ ಅಧಿಕಾರಿಗಳಿಗೇ ಚಳ್ಳೆಹಣ್ಣು ತಿನಿಸಿ ಹೆಚ್ಚುವರಿ ಹಣ ನೀಡಿದ ಗ್ರಾಹಕರಿಗೆ ಈ ಕೆಲ ಗುತ್ತಿಗೆದಾರರು ವಿದ್ಯುತ್ ಸಂಪರ್ಕ ನೀಡಿದ್ದಾರೆ. ಇದು ಬೆಳಕಿಗೆ ಬರುತ್ತಿದ್ದಂತೆ ಮೆಸ್ಕಾಂನ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ನಕಲಿ ದಾಖಲೆ ನೀಡಿ, ನಿಯಮ ಮೀರಿ ವಿದ್ಯುತ್ ಪಡೆದ ಗ್ರಾಹಕರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.ಶಿವಮೊಗ್ಗ ಉಪ ವಿಭಾಗವೊಂದರಲ್ಲಿಯೇ ಸುಮಾರು 300 ಸಂಪರ್ಕಗಳನ್ನು ಈ ರೀತಿ ನಿಯಮ ಬಾಹಿರವಾಗಿ ದಾಖಲೆ ಸೃಷ್ಟಿಸಿ ಸಂಪರ್ಕ ಕೊಡಲಾಗಿದೆ.
ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಯಾವುದೇ ಕಟ್ಟಡಗಳ ನಿರ್ಮಾಣದ ಸಂದರ್ಭದಲ್ಲಿ ನಿಮಯಗಳನ್ನು ಮೀರಿ ಕಟ್ಟಿರುವುದು, ಸೆಟ್ ಬ್ಯಾಕ್ ಗಳ ವ್ಯಾಪಕ ಉಲ್ಲಂಘನೆಗಳ ಪ್ರಕರಣಗಳು ವರದಿಯಾಗುತ್ತಿದ್ದಂತೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಿಯಮ ಉಲ್ಲಂಘಿಸಿದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಬಾರದೆಂದು ಆದೇಶಿಸಿತ್ತು. ಈ ಆದೇಶದ ಅನ್ವಯ ರಾಜ್ಯ ಸರ್ಕಾರ, ವಿದ್ಯುತ್ ಪರಿವೀಕ್ಷಣಾ ಇಲಾಖೆ ಮತ್ತು ಪೌರಾಡಳಿತ ಇಲಾಖೆಗಳು ತಮ್ಮ ತಮ್ಮ ಅಧೀನ ಅಧಿಕಾರಿಗಳಿಗೆ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದವು.ಇದರಿಂದಾಗಿ ಸಾಮಾನ್ಯ ಜನರು ತೀವ್ರ ಸಮಸ್ಯೆಗೆ ಈಡಾದರು. ಹೇಗೆ ಕಟ್ಟಿದರೂ ಸೆಟ್ ಬ್ಯಾಕ್ ಉಲ್ಲಂಘನೆ ಇದ್ದೇ ಇರುತ್ತಿತ್ತು. ಮುಖ್ಯವಾಗಿ ಮಧ್ಯಮ, ಕೆಳ ಮಧ್ಯಮ ಮತ್ತು ಬಡ ವರ್ಗದವರು ತಾವು ಮನೆ ನಿರ್ಮಿಸಿಕೊಂಡರೂ ವಿದ್ಯುತ್ ಸಂಪರ್ಕ ಇಲ್ಲದೆ ಒದ್ದಾಡುವಂತಾಯಿತು. ಇದನ್ನು ಅರಿತುಕೊಂಡ ರಾಜ್ಯ ಸರ್ಕಾರವು 1200 ಚದರಡಿ ಮತ್ತು ಇದಕ್ಕಿಂತ ಕಡಿಮೆ ಅಳತೆಯಲ್ಲಿ ನಿರ್ಮಾಣಗೊಂಡ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವ ತಿದ್ದುಪಡಿ ಆದೇಶವನ್ನು ಹೊರಡಿಸಿತು.
ಇದರಿಂದ ಸಾಮಾನ್ಯ ಜನರು ಸ್ವಲ್ಪ ನಿಟ್ಟುಸಿರು ಬಿಟ್ಟರೂ, ಅಧಿಕಾರಿಗಳ ಕಿರಿ ಕಿರಿ ಇದ್ದೇ ಇರುತ್ತಿತ್ತು. ಆದರೆ ದೊಡ್ಡ ನಿವೇಶನಗಳಲ್ಲಿ ಮನೆ ಕಟ್ಟುವವರು ಸಮಸ್ಯೆ ಎದುರಿಸುತ್ತಲೇ ಇದ್ದರು.ದಾಖಲೆ ತಿದ್ದುವುದು ಹೇಗೆ?: ಇದಕ್ಕೆ ಪರ್ಯಾಯ ಮಾರ್ಗ ಹುಡುಕುತ್ತಿರುವ ಹೊತ್ತಿನಲ್ಲಿ ಕೆಲವು ಗುತ್ತಿಗೆದಾರರು ಅಧಿಕಾರಿಗಳ ದಾರಿ ತಪ್ಪಿಸುವ ಮಾರ್ಗ ಕಂಡು ಹಿಡಿದರು.
ಮನೆ ನಿರ್ಮಾಣದ ಬಳಿಕ ಸ್ಥಳೀಯ ಸಂಸ್ಥೆಗಳಿಂದ ವಾಸಯೋಗ್ಯ ಪ್ರಮಾಣ ಪತ್ರ ಪಡೆಯಬೇಕಿತ್ತು. ಇದಕ್ಕೆ ಅನುಮೋದಿತ ನಕ್ಷೆಯಂತೆ ಮನೆ ನಿರ್ಮಾಣಗೊಂಡಿರಬೇಕಿತ್ತು. ಈ ನಕ್ಷೆಯನ್ನು ದಾಖಲೆಗಳಲ್ಲಿ ಇಡಬೇಕು. ಇಲ್ಲಿಯೇ ಗುತ್ತಿಗೆದಾರರು ತಮ್ಮ ಕೈಚಳಕ ತೋರಿಸಿದ್ದು. 1200 ಚದರಡಿಗಿಂತ ಹೆಚ್ಚಿನ ಅಳತೆಯಲ್ಲಿ ನಿರ್ಮಾಣಗೊಂಡ ನಿವೇಶನಗಳ ದಾಖಲೆ ಸಿದ್ಧಗೊಳಿಸುವಾಗ ಯಾವುದೇ ಅಳತೆ ಇದ್ದರೂ ಇದರ ಮೇಲೆ 1200 ಚದರಡಿಯ ಅಳತೆ ಕೂರಿಸಿ ಹೊಸ ದಾಖಲೆ ಸೃಷ್ಟಿಸುತ್ತಿದ್ದರು. ಡಿಜಿಟಲ್ ನಲ್ಲಿಯೂ ಇದೇ ರೀತಿಯ ದಾಖಲೆ ಇರುವಂತೆ ನೋಡಿಕೊಳ್ಳುತ್ತಿದ್ದರು.ಸ್ಥಳ ಪರೀಕ್ಷಿಸಿ ಇದಕ್ಕೆ ಒಪ್ಪಿಗೆ ಸೂಚಿಸಬೇಕಾದ ಅಧಿಕಾರಿಗಳೂ ಈ ‘ಕೆಲ’ ಗುತ್ತಿಗೆದಾರರಿಂದ ಪ್ರಭಾವಕ್ಕೆ ಒಳಗಾಗಿ ಯಾವುದೇ ರೀತಿಯ ಸ್ಥಳ ವೀಕ್ಷಣೆ ನಡೆಯದೆ ಒಪ್ಪಿಗೆ ನೀಡುತ್ತಿದ್ದರು. ಈ ರೀತಿ ಫೈಲುಗಳು ಒಂದೊಂದೇ ಟೇಬಲ್ ಗಳನ್ನು ಯಶಸ್ವಿಯಾಗಿ ದಾಟಿ ಅಂತಿಮವಾಗಿ ಅನುಮೋದನೆಗೊಂಡು ವಿದ್ಯುತ್ ಸಂಪರ್ಕ ನೀಡುವ ಕೊನೆ ಹಂತಕ್ಕೆ ತಲುಪುತ್ತಿದ್ದವು.
ಈ ರೀತಿಯ ಸಂಪರ್ಕ ಪಡೆಯುವ ಗ್ರಾಹಕರಿಗೆ ಪ್ರತಿ ಸಂಪರ್ಕಕ್ಕೆ ಸರಿ ಸುಮಾರು 60 ಸಾವಿರ ರು.ಗಳನ್ನು ಹೆಚ್ಚುವರಿಯಾಗಿ ಈ ಗುತ್ತಿಗೆದಾರರು ಪಡೆಯುತ್ತಿದ್ದರು.ಪತ್ತೆಯಾಗಿದ್ದು ಹೇಗೆ?: ನ್ಯಾಯಾಲಯ ಮತ್ತು ಸರ್ಕಾರದ ನಿರ್ಧಾರದಿಂದ ಕೆಲಸವಿಲ್ಲದೆ ಗುತ್ತಿಗೆದಾರರು ಒದ್ಡಾಡುತ್ತಿದ್ದರು. ಈ ಸಂದರ್ಭದಲ್ಲಿ ಕೆಲವೇ ಗುತ್ತಿಗೆದಾರರು ಮಾತ್ರ ವಿದ್ಯುತ್ ಸಂಪರ್ಕ ನೀಡುವ ಕೆಲಸ ಪಡೆಯುತ್ತಿದ್ದುದು ಉಳಿದ ಗುತ್ತಿಗೆದಾರರಲ್ಲಿ ಆಶ್ಚರ್ಯ ಮೂಡಿಸಿತ್ತು. ಇದರ ಬೆನ್ನು ಹತ್ತಿ ಹೋದಾಗ ಈ ನಕಲಿ ದಾಖಲೆ ಸೃಷ್ಟಿ ಪ್ರಕರಣ ಬೆಳಕಿಗೆ ಬಂದಿತ್ತು.
ವಿಷಯ ಹೊರ ಹೋಗುತ್ತಿದ್ದಂತೆ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮುಂದಾದ ಅಧಿಕಾರಿಗಳು ಗ್ರಾಹಕರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.ಮುಂದೇನು ಎಂಬುದನ್ನು ಇಲಾಖೆಯವರೇ ಹೇಳಬೇಕು. ಆದರೆ ಈ ಬಗ್ಗೆ ಮಾಹಿತಿ ನೀಡಲು ಯಾರೂ ಸಿದ್ಧರಿಲ್ಲ.
----ನಮಗೆ ಸಂಪರ್ಕ ನೀಡುವುದಾಗಿಯೂ, ಇದಕ್ಕಾಗಿ ಸ್ವಲ್ಪ ಹೆಚ್ಚಿನ ಹಣ ಖರ್ಚು ಮಾಡಬೇಕು ಎಂಬುದಾಗಿಯೂ ಗುತ್ತಿಗೆದಾರರು ತಿಳಿಸಿದ್ದರು. ಮನೆ ನಿರ್ಮಿಸಿ ವಿದ್ಯುತ್ ಸಂಪರ್ಕ ಸಿಗದೆ ಒದ್ದಾಡುತ್ತಿದ್ದ ನಾವು ಇದರ ಹಿಂದೆ ಏನೇನು ಇದೆ ಎಂಬುದನ್ನು ಅರಿಯದೆ ಹಣ ನೀಡಿ ಸಂಪರ್ಕ ಪಡೆದೆವು. ಆದರೆ ಈಗ ನಮಗೆ ನೋಟೀಸ್ ಜಾರಿಗೊಳಿಸಲಾಗಿದೆ. ಇದು ಯಾವ ನ್ಯಾಯ?
-ಹೆಸರು ಹೇಳಲು ಇಚ್ಚಿಸದ ಗ್ರಾಹಕರು.