ಚಿಕ್ಕಮಗಳೂರುಮಳೆ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಲ್ಲಿ ತುರ್ತು ನೀರು ಪೂರೈಕೆಗೆ ಕೊರೆದಿರುವ ಕೊಳವೆಬಾವಿಗಳಿಗೆ ಕೂಡಲೇ ವಿದ್ಯುತ್‌ ಸಂಪರ್ಕ ಕಲ್ಪಿಸಲು ಟಾಸ್ಕ್‌ಫೋರ್ಸ್‌ ಅನುದಾನ ಬಳಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಜಾರ್ಜ್‌ ಅಧಿಕಾರಿಗಳಿಗೆ ಸೂಚನೆ । ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ ಸಭೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮಳೆ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಲ್ಲಿ ತುರ್ತು ನೀರು ಪೂರೈಕೆಗೆ ಕೊರೆದಿರುವ ಕೊಳವೆಬಾವಿಗಳಿಗೆ ಕೂಡಲೇ ವಿದ್ಯುತ್‌ ಸಂಪರ್ಕ ಕಲ್ಪಿಸಲು ಟಾಸ್ಕ್‌ಫೋರ್ಸ್‌ ಅನುದಾನ ಬಳಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸಬೇಕು. ನೀರಿರುವ ಕೊಳವೆ ಬಾವಿಗಳನ್ನು ವಿದ್ಯುತ್‌ ಸಂಪರ್ಕ ಕೊರತೆಯಿಂದ ಬಳಸಲಾಗದ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ತಿಳಿಸಿದರು.

ಮಳೆ ಕೊರತೆಯಿಂದ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಿದೆ. ತುರ್ತು ನೀರು ಪೂರೈಕೆಗೆ ವಿವಿಧ ಯೋಜನೆಗಳ ಅನುದಾನದಲ್ಲಿ ಕೊಳವೆಬಾವಿಗಳನ್ನು ಕೊರೆಯಲಾಗಿದೆ. ಆದರೆ ಕೊಳವೆಬಾವಿಗೆ ಅನುದಾನ ಮೀಸಲಿಟ್ಟಿದ್ದರೂ ವಿದ್ಯುತ್‌ ಸಂಪರ್ಕಕ್ಕೆ ಅಗತ್ಯ ಶುಲ್ಕ ಪಾವತಿಸಲು ಅನುದಾನ ಇಲ್ಲದಿರುವುದರಿಂದ ಸಮಸ್ಯೆ ಎದುರಾಗಿದೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ಗ್ರಾಮ ಪಂಚಾಯಿತಿಗಳಲ್ಲೂ ವಿದ್ಯುತ್‌ ಸಂಪರ್ಕದ ಶುಲ್ಕ ಪಾವತಿಸಲು ಅನುದಾನ ಕೊರತೆಯಿದ್ದು, ಮೆಸ್ಕಾಂನಿಂದ ಉಚಿತ ಸಂಪರ್ಕ ಕಲ್ಪಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಇದಕ್ಕೆ ತಕ್ಷಣ ಸ್ಪಂದಿಸಿದ ಸಚಿವರು, ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಆಔಋೂ ಟಾಸ್ಕ್‌ಫೋರ್ಸ್‌ ಅನುದಾನದಲ್ಲಿ ಅಗತ್ಯ ಹಣ ಒದಗಿಸಿ ಕೊಳವೆಬಾವಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವಂತೆ ಸೂಚಿಸಿದರು. ಯಾವುದೇ ಕಾರಣಕ್ಕೂ ಕುಡಿವ ನೀರು ಪೂರೈಕೆಗೆ ತೊಂದರೆಯಾಗದಂತೆ ಕ್ರಮ ವಹಿಸಲು ನಿರ್ದೇಶನ ನೀಡಿದರು.

ಮೇವಿನ ಸಮಸ್ಯೆ ಆಗಂತೆ ಕ್ರಮ ವಹಿಸಿಬರದ ಹಿನ್ನೆಲೆ ಜಿಲ್ಲೆಯಲ್ಲಿ ಮೇವಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಿ. ಮುಂಬರುವ ಬೇಸಿಗೆ ಅವಧಿಗೆ ಅಗತ್ಯವಿರುವ ಮೇವಿನ ಸಂಗ್ರಹಣೆ ಮಾಡುವುದಕ್ಕೆ ಹಿಂಗಾರು ಅವಧಿಯಲ್ಲಿ ಹೆಚ್ಚಾಗಿ ಜೋಳ ಬಿತ್ತನೆಗೆ ಪ್ರೋತ್ಸಾಹ ನೀಡುವಂತೆ ಕೃಷಿ,ಪಶುಸಂಗೋಪನೆ ಅಧಿಕಾರಿಗಳಿಗೆ ನಿರ್ದೇಶಿಸಿದರು.ತುಂಗಾದಿಂದ ಭದ್ರಾಕ್ಕೆ ನೀರು ಲಿಫ್ಟ್‌ ಮಾಡಿ: ಸರ್ಜಿಭದ್ರಾ ಮೇಲ್ದಂಡೆ ಯೋಜನೆ ಮೂಲಕ ಕಡೂರು, ಅಜ್ಜಂಪುರ, ತರೀಕೆರೆ, ಚಿತ್ರದುರ್ಗಕ್ಕೆ ನೀರು ಹರಿಸುವ ಮೂಲಕ ಹಲವು ಕೆರೆಗಳನ್ನು ತುಂಬಿಸುವ ಕೆಲಸ ಈ ಬಾರಿ ಆಗಿದೆ.ಭದ್ರಾ ಜಲಾಶಯಕ್ಕೆ ತುಂಗಾದಿಂದ 17.4 ಟಿಎಂಸಿ ನೀರು ಲಿಫ್ಟ್‌ ಮಾಡುವ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆ ಕಾರ್ಯ ಆದರೆ, ಇನ್ನಷ್ಟು ಅನುಕೂಲವಾಗಲಿದೆ. ಹಾಗಾಗಿ, ಮುಂಬರುವ ಮಳೆಗಾಲದ ವೇಳೆಗಾದರೂ ನೀರನ್ನು ಲಿಫ್ಟ್‌ ಮಾಡುವ ಕಾರ್ಯಕ್ಕೆ ಕ್ರಮ ಕೈಗೊಳ್ಳಿ ಎಂದು ವಿಧಾನಪರಿಷತ್ತು ಸದಸ್ಯ ಧನಂಜಯ್‌ ಸರ್ಜಿ ಒತ್ತಾಯಿಸಿದರು.ಭದ್ರಾ ಮೇಲ್ದಂಡೆ ₹5,300 ಕೋಟಿ ಬಿಡುಗಡೆ: ಜಟಾಪಟಿ

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ₹5,300 ಕೋಟಿ ಅನುದಾನ ಬಿಡುಗಡೆಗೆ ಘೋಷಿಸಿದರೂ ಬಿಡುಗಡೆ ಮಾಡಿಲ್ಲ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಾನಂದ ಸ್ವಾಮಿ ಹೇಳಿದರು. ಅದಕ್ಕೆ ಪ್ರಕ್ರಿಯಿಸಿದ ಧನಂಜಯ್‌ ಸರ್ಜಿ, ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿದ ಹಿನ್ನಲೆ ಕೇಂದ್ರ ಹಣ ಬಿಡುಗಡೆ ಮಾಡಿಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಸುಮ್ಮನೆ ದೂರುವ ಕೆಲಸ ಮಾಡಬೇಡಿ ಎಂದರು,ಮಧ್ಯಪ್ರವೇಶಿಸಿದ ಸಚಿವ ಕೆ.ಜೆ.ಜಾರ್ಜ್‌ ಹಣ ಬಿಡುಗಡೆ ರಾಜ್ಯ ಸರ್ಕಾರದಿಂದ ಆಗಬೇಕಾಗಿರುವ ಕ್ರಮದ ಬಗ್ಗೆ ಸಹಕಾರ ನೀಡಲಾಗುವುದು. ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ಮಾಡಲಿ ಎಂದರು.

ಜಲಜೀವನ್‌ ಯೋಜನೆ ಪರಿಶೀಲನಾ ವರದಿ:ಜಲಜೀವನ್‌ ಮಿಷನ್‌ ಪೂರ್ಣಗೊಂಡಿದೆ. ಆದರೆ, ನೀರು ಬರುತ್ತಿಲ್ಲ ಎಂದು ವಿಪ ಸದಸ್ಯ ಡಾ.ಸಿ.ಟಿ.ರವಿ ಆರೋಪಿಸಿದರು. ನೀರಿನ ಲಭ್ಯತೆ ಇಲ್ಲದೇ ಜಲಜೀವನ್‌ ಮಿಷನ್‌ನ ಸಿವಿಲ್‌ ಕಾಮಗಾರಿ ಮಾಡಿ ಬಿಲ್‌ ಪಾವತಿಮಾಡಿ ಯೋಜನೆ ಪೂರ್ಣ ಗೊಂಡಿದೆ ಎಂದು ಗ್ರಾಮೀಣ ಮತ್ತು ಕುಡಿವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಸೋಷಿಯಲ್‌ ಆಡಿಟ್‌ ನಡೆಸುವಂತೆ ಆಗ್ರಹಿಸಿದರೂ ಆಡಿಟ್‌ ಆಗಿಲ್ಲ ಎಂದಾಗ ಸಚಿವ ಕೆ.ಜೆ.ಜಾರ್ಜ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಾಮ್‌ ಪ್ರಸಾತ್‌ ಮನೋಹರ್‌ ಗೆ ಪರಿಶೀಲಿಸಿ ವರದಿ ನೀಡಲು ನಿರ್ದೇಶಿಸಿದರು.

-- ಬಾಕ್ಸ್‌--

ಎಲಿಫೆಂಟ್‌ ಸಾಫ್ಟ್‌ ರೀಲೀಸ್‌ಗೆ ತರೀಕೆರೆ ಶಾಸಕ ವಿರೋಧ

ತರೀಕೆರೆ ಪ್ರಾದೇಶಿಕ ವಲಯದ ತ್ಯಾಗದಬಾಗಿ ವ್ಯಾಪ್ತಿಯಲ್ಲಿ 20.08 ಚ.ಕಿ.ಮೀ ವ್ಯಾಪ್ತಿಯಲ್ಲಿ 20 ಆನೆಗಳಿಗೆ ಎಲಿಫೆಂಟ್‌ ಸಾಫ್ಟ್‌ ರೀಲೀಸ್‌ ನಿರ್ಮಾಣಕ್ಕೆ ಅರಣ್ಯ ಇಲಾಖೆ ಸಿದ್ಧತೆ ಮಾಡಿದೆ. ಇದಕ್ಕೆ ತರೀಕೆರೆ ಶಾಸಕ ಶ್ರೀನಿವಾಸ್‌ ತೀವ್ರ ವಿರೋಧ ವ್ಯಕ್ತಪಡಿಸಿ, ಕೇರಳ- ಕರ್ನಾಟಕ ಗಡಿಭಾಗದ ಮೈಸೂರಿನಲ್ಲಿ ಮಾಡುವಂತೆ ಆಗ್ರಹಿಸಿದರು. ಜತೆಗೆ ತೀರ್ಮಾನ ಮರು ಪರಿಶೀಲನೆಗೆ ಒತ್ತಾಯಿಸಿದರು. ಎಲ್ಲರೂ ವಿರೋಧ ವ್ಯಕ್ತಪಡಿಸಿದರೆ ಎಲ್ಲಿ ಮಾಡುವುದು ಎಂದು ಸಚಿವ ಕೆ.ಜೆ.ಜಾರ್ಜ್‌ ಪ್ರಶ್ನಿಸಿದರು.

ಈ ರೀತಿ ವಿರೋಧಿಸಿದರೆ ಮುಂದಿನ ದಿನಗಳಲ್ಲಿ ಆನೆ ದಾಳಿ ತೊಂದರೆ ಬಗ್ಗೆ ಪ್ರಶ್ನಿಸಬಾರದು ಎಂದು ಷರತ್ತು ಹಾಕಿದ ಪ್ರಸಂಗ ನಡೆಯಿತು.

ಕೊಪ್ಪ ಅರಣ್ಯ ವಿಭಾಗದ ಡಿಎಫ್‌ಒ ಶಿವಶಂಕರ್‌ ಮಾತನಾಡಿ ದೇಶದಲ್ಲಿ ಮೊದಲ ಬಾರಿ ಈ ರೀತಿ ಪ್ರಯತ್ನ ಅರಣ್ಯ ಇಲಾಖೆ ಮಾಡುತ್ತಿದೆ. ಎಲಿಫೆಂಟ್‌ ಸಾಫ್ಟ್‌ ರೀಲೀಸ್‌ ಸೆಂಟರ್‌ನ ಆನೆಗಳು ಹೊರಗೆ ಬರದಂತೆ ಮೂರು ಮಾದರಿಯ ಬೇಲಿ ಅಳವಡಿಸಲಾಗುತ್ತದೆ. ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಬಳಿಕ ಜನಪ್ರತಿನಿಧಿಗಳು, ರೈತರು ಸೇರಿದಂತೆ ಎಲ್ಲರನ್ನು ಕರೆದುಕೊಂಡು ಹೋಗಿ ತೋರಿಸುತ್ತೇವೆ. ಒಪ್ಪಿಗೆ ಬಳಿಕ ಆನೆಗಳನ್ನು ತಂದು ಬಿಡಲಾಗುತ್ತದೆ. ಅಲ್ಲಿವರೆಗೆ ಆನೆಗಳನ್ನು ಬಿಡುವುದಿಲ್ಲ ಎಂದು ತಿಳಿಸಿದರು.

ವಸತಿ ಪ್ರದೇಶ ಬಿಟ್ಟು ರೈಲ್ವೆ ಬ್ಯಾರಿಕೇಡ್‌ ಮಾಡಿ: ಟಿ.ಡಿ.ರಾಜೇಗೌಡ

ಕಾಡಂಚಿನ ಪ್ರದೇಶದಲ್ಲಿ ಆನೆಗಳ ಉಪಟಳ ತಡೆಗೆ 7.61 ಕಿ.ಮೀ ರೈಲ್ವೆ ಬ್ಯಾರಿಕೇಡ್‌ ನಿರ್ಮಾಣಕ್ಕೆ ಒಳಭಾಗದಲ್ಲಿ ಕಂದಾಯ ಕೃಷಿ ಭೂಮಿ, ಜನವಸತಿ ಪ್ರದೇಶ ಒಳಗೊಳ್ಳಲಿವೆ. ಹೀಗಾಗಿ, ಆ ಪ್ರದೇಶ ಬಿಟ್ಟು ಅರಣ್ಯಕ್ಕೆ ಮಾತ್ರ ರೈಲ್ವೆ ಬ್ಯಾರಿಕೇಡ್‌ ನಿರ್ಮಾಣಕ್ಕೆ ಶಾಸಕ ಟಿ.ಡಿ.ರಾಜೇಗೌಡ ಆಗ್ರಹಿಸಿದರು. ಅದಕ್ಕೆ ಸಿ.ಟಿ.ರವಿ ಧ್ವನಿಗೂಡಿಸಿದರು.

ಶಾಸಕರಾದ ಟಿ.ಡಿ.ರಾಜೇಗೌಡ, ಕೆ.ಎಸ್.ಆನಂದ್, ಶ್ರೀನಿವಾಸ್, ವಿಧಾನಪರಿಷತ್ತ್‌ ಸದಸ್ಯರಾದ ಗಾಯತ್ರಿ ಶಾಂತೇಗೌಡ, ಆರತಿ ಕೃಷ್ಣ, ಸಿ.ಟಿ.ರವಿ, ಎಸ್.ಎಲ್.ಭೋಜೇಗೌಡ, ಧನಂಜಯ್ ಸರ್ಜಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಾಮ್ ಪ್ರಸಾತ್ ಮನೋಹರ್, ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ, ಜಿಲ್ಲಾ ಎಸ್ಪಿ ಜಿತೇಂದ್ರ ಕುಮಾರ್ ದಯಾಮ, ಸಚಿವರ ಆಪ್ತ ಸಹಾಯಕ ಸತೀಶ್ ಕುಮಾರ್ ಮೊದಲಾದವರಿದ್ದರು.-- ಬಾಕ್ಸ್‌--ಕಾಡುಕೋಣ ಮಾಂಸ ಕೇರಳಕ್ಕೆ ರಫ್ತು: ಆರೋಪ

ಚಿಕ್ಕಮಗಳೂರು ಜಿಲ್ಲೆಯ ಕಾಡುಕೋಣಗಳನ್ನು ಕೊಂದು ಕೇರಳಕ್ಕೆ ರಫ್ತು ಮಾಡುವ ದಂಧೆ ನಡೆಯುತ್ತಿದೆ. ಅದಕ್ಕೆ ಅರಣ್ಯ ಇಲಾಖೆ ಕೆಳಮಟ್ಟದ ಅಧಿಕಾರಿಗಳು ಶಾಮಿಲಾಗಿದ್ದಾರೆ ಎಂದು ವಿಪ ಸದಸ್ಯ ಎಸ್‌.ಎಲ್‌.ಭೋಜೇಗೌಡ ಗಂಭೀರ ಆರೋಪ ಮಾಡಿದರು.

ಕಾಡುಕೋಣದ ಮಾಂಸಕ್ಕೆ ಭಾರೀ ಬೇಡಿಕೆ ಇದ್ದು, ₹5 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿದೆ. ಬಾಳೆಹೊನ್ನೂರು ಭಾಗದ ಅರಣ್ಯದಲ್ಲಿ ಕಾಡುಕೋಣಗಳನ್ನು ಕೊಂದು ಕೇರಳ ಸೇರಿದಂತೆ ಬೇರೆಡೆ ಸಾಗಿಸಲಾಗುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕೆಂದರು.

ಕೆ.ಜೆ.ಜಾರ್ಜ್‌ ಪ್ರಕ್ರಿಯಿಸಿ ಶಾಮಿಲಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳ ಪತ್ತೆ ಮಾಡಿ ಅವರ ವಿರುದ್ಧ ಕಠಿಣ ಕ್ರಮ ಕೈ ಗೊಳ್ಳಲು ಜಿಲ್ಲಾ ಎಸ್ಪಿ ಜಿತೇಂದ್ರ ಕುಮಾರ್‌ ದಯಮಾ ಸೇರಿದಂತೆ ಅರಣ್ಯಾಧಿಕಾರಿಗಳಿಗೆ ನಿರ್ದೇಶಿಸಿದರು.

-- ಬಾಕ್ಸ್‌---

ಜಿಲ್ಲಾಸ್ಪತ್ರೆ: ವೈದ್ಯಕೀಯ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಸಭೆ

ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಹಾಗೂ ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನಲ್ಲಿ ಅಕ್ರಮ ನಡೆದಿದೆ ಎಂಬ ವಿಷಯವಾಗಿ ಮಂಗಳವಾರವೇ ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಜಿಲ್ಲೆ ಶಾಸಕರು ವಿಧಾನ ಪರಿಷತ್ ಸದಸ್ಯರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸುವುದಾಗಿ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಎಬಿಆರ್ ಕೆ ಅನುದಾನ ಪೀಠೋಪಕರಣ ಖರೀದಿಗೆ ವ್ಯಯಿಸಲಾಗಿದೆ. ಅಧಿಕಾರಿಗಳು ನೀಡಿದ ಮಾಹಿತಿಯಂತೆ ಎ ಬಿ ಆರ್ ಕೆ ಅನುದಾನದಲ್ಲಿ ಪೀಠೋಪಕರಣ ಖರೀದಿಸುವಂತಿಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.

--- ಬಾಕ್ಸ್‌---

ನಿದ್ದೆಗೆ ಜಾರಿದ ಹಲವು ಅಧಿಕಾರಿಗಳು (ಫೋಟೋ ಇದೆ)

ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಕೆಡಿಪಿ ಸಭೆಯಲ್ಲಿ ಬರ, ಕುಡಿವ ನೀರು, ಮಾನವ ಪ್ರಾಣಿ ಸಂಘರ್ಷ ಸೇರಿದಂತೆ ಹಲವು ಗಂಭೀರ ವಿಷಯದ ಬಗ್ಗೆ ಒಂದು ಕಡೆ ಚರ್ಚೆ ನಡೆಸುತ್ತಿದ್ದರೆ ಮತ್ತೊಂದು ಕಡೆ ಹಲವು ಅಧಿಕಾರಿಗಳು ನಿದ್ದೆಗೆ ಜಾರಿದ್ದರು. ಮತ್ತೆ ಕೆಲವರು ಮೊಬೈಲ್‌ನಲ್ಲಿ ಮುಳುಗಿದ್ದ ದೃಶ್ಯ ಕಂಡು ಬಂದವು.

--- ಬಾಕ್ಸ್‌--

ಬಿಟ್ಟಿ ಬಂದು ಕುಳಿತಿಲ್ಲ: ಶಾಸಕ ಕೆ.ಎಸ್‌.ಆನಂದ್‌ಸಭೆಯಲ್ಲಿ ಕಡೂರು ತಾಲೂಕಿನ ವಿಚಾರಕ್ಕೆ ಶಾಸಕ ಆನಂದ್‌ ಕೆಲವು ಮಾಹಿತಿ ಪಡೆಯುವುದಕ್ಕೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ವೇಳೆ ಶಾಸಕ ಆನಂದ್‌ ವಿರುದ್ಧ ಕೆ.ಜೆ,ಜಾರ್ಜ್‌ ಗರಂ ಆಗಿ, ತಾಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಮಾಹಿತಿ ಪಡೆಯಬೇಕು. ಇದು ಜಿಲ್ಲಾ ಮಟ್ಟದ ಕೆಡಿಪಿ ಸಭೆ ಎಂದರು.

ಈ ವೇಳೆ ಮಾತಿಗೆ ಮಾತು ಬೆಳೆದು ಶಾಸಕ ಆನಂದ್‌ ಬಿಟ್ಟಿ ಬಂದು ಕುಳಿತುಕೊಂಡಿಲ್ಲ. ಕ್ಷೇತ್ರದ ಜನರು ಅಧಿಕಾರ ನೀಡಿದ್ದು, ಅವರ ಪರವಾಗಿ ಬಂದಿದ್ದೇನೆ. ಕುಡಿವ ನೀರು ವಿಚಾರ ಸರ್ ಇದು ನಿಮಗೆ ಅರ್ಥವಾಗಲ್ಲ ಎಂದು ನೇರವಾಗಿ ಸಚಿವ ಜಾರ್ಜ್‌ ಅವರಿಗೆ ಹೇಳಿದ ಪ್ರಸಂಗ ನಡೆಯಿತು. ಸಭೆಯುದ್ದಕ್ಕೂ ಶಾಸಕ ಆನಂದ್‌ ಹಾಗೂ ಸಚಿವ ಕೆ.ಜೆ,ಜಾರ್ಜ್‌ ಅವರ ನಡುವೆ ಮಾತಿನ ಚಕಮಕಿ ಮುಂದುವರಿದಿತ್ತು. ಒಂದು ಹಂತದಲ್ಲಿ ಹಿರಿಯ ಶಾಸಕ ಟಿ.ಡಿ.ರಾಜೇಗೌಡರು ಶಾಸಕ ಆನಂದ್‌ರನ್ನು ಸಮಾಧಾನ ಪಡಿಸಿದರು.

---ಬಾಕ್ಸ್‌---ಪ್ರವಾಸಿ ತಾಣಗಳಲ್ಲಿ ಡೆಪಾಸಿಟ್‌ ಸಿಸ್ಟಂ: ಕೆ.ಜೆ.ಜಾರ್ಜ್‌ ಜಿಲ್ಲೆ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್‌, ನೀರಿನ ಬಾಟಲ್‌ಗಳಿಂದ ಉಂಟಾಗುವ ಮಾಲಿನ್ಯ ನಿಯಂತ್ರಣಕ್ಕೆ ಮೊದಲ ಹಂತದಲ್ಲಿ ಪ್ರವಾಸಿ ತಾಣಗಳ ಚೆಕ್‌ಪೋಸ್ಟ್‌ನಲ್ಲಿ ಡೆಪಾಸಿಟ್‌ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಸಚಿವ ಕೆ.ಜೆ.ಜಾರ್ಜ್‌ ಹೇಳಿದರು.ವಿಧಾನಪರಿಷತ್‌ ಸದಸ್ಯ ಧನಂಜಯ್‌ ಸರ್ಜಿ, ಕೇರಳ ಮಾದರಿಯಲ್ಲಿ ಪ್ರವಾಸಿ ತಾಣಗಳಲ್ಲಿ 500 ಎಂಎಲ್‌ ಹಾಗೂ ಒಂದು ಲೀಟರ್‌ ನೀರಿನ ಬಾಟಲ್‌ ಬಳಕೆಗೆ ನಿಯಂತ್ರಣ ಹೇರಬೇಕು ಎಂದು ಆಗ್ರಹಿಸಿದರು. ಅದಕ್ಕೆ ಸಚಿವರು, ಏಕಾಏಕಿ ನೀರಿನ ಬಾಟಲ್‌ ಹಾಗೂ ಪ್ಲಾಸ್ಟಿಕ್‌ ಉತ್ಪನ್ನ ನಿಷೇಧಿಸಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಅನಧಿಕೃತ ಬಳಕೆ ಹೆಚ್ಚಾಗುವ ಸಾಧ್ಯತೆಯಿದೆ. ಹಂತ ಹಂತವಾಗಿ ಕ್ರಮ ಕೈಗೊಳ್ಳುವುದು ಸೂಕ್ತ ಎಂದರು.ಏಕ ಬಳಕೆ ಪ್ಲಾಸ್ಟಿಕ್‌ ಉತ್ಪನ್ನವನ್ನು ಸರ್ಕಾರ ಈಗಾಗಲೇ ನಿಷೇಧಿಸಿದೆ. ಆದರೂ ಬಳಕೆ ಮುಂದುವರಿದಿದೆ. ಹೀಗಾಗಿ 500 ಎಂಎಲ್‌ ನೀರಿನ ಬಾಟಲ್‌ ತಕ್ಷಣ ನಿಷೇಧಿಸುವುದು ಸಾಧ್ಯವಿಲ್ಲ. ಪ್ರವಾಸಿಗರು ಚೆಕ್‌ಪೋಸ್ಟ್‌ನಲ್ಲಿ ಡೆಪಾಸಿಟ್‌ ನೀಡಿ ಬಾಟಲ್‌ ಗಳನ್ನು ತೆಗೆದುಕೊಂಡು ಹೋಗಿ, ವಾಪಸ್‌ ತಂದು ಡೆಪಾಸಿಟ್‌ ಪಡೆವ ವ್ಯವಸ್ಥೆ ಜಾರಿಗೆ ತರಬಹುದು ಎಂದರು.

-- ಬಾಕ್ಸ್‌---

ಬರ ವಿಚಾರಕ್ಕೆ ಕೈ-ಕಮಲ ಫೈಟ್‌ಜಿಲ್ಲೆಯ 7 ತಾಲೂಕು ಬರ ಪೀಡಿತ ತಾಲೂಕು ಘೋಷಣೆ ಬಗ್ಗೆ ಸರ್ಕಾರಕ್ಕೆ ಅಭಿನಂದಿಸಲು ಶಾಸಕ ಟಿ.ಡಿ.ರಾಜೇಗೌಡರು ಮುಂದಾದರು. ಈ ವೇಳೆ ಕೋಪಗೊಂಡ ಭೋಜೇಗೌಡ ಹಾಗೂ ಸಿ.ಟಿ.ರವಿ ಬರ ಘೋಷಣೆಯಿಂದ ಪ್ರಯೋಜವಿಲ್ಲ. ರೈತರಿಗೆ ಸೂಕ್ತ ಪರಿಹಾರ ಕೊಡಿ, ಕುಡಿವ ನೀರಿನ ಸಮಸ್ಯೆ ಇದೆ. ಬೆಳೆ ಒಣಗುತ್ತಿವೆ. ಬರ ಘೋಷಣೆಯೇ ಸಾಧನೆಯೇ ಎಂದು ಪ್ರಶ್ನಿಸಿದರು. ಇದು ಪರಸ್ಪರ ವಾಗ್ದಾದಕ್ಕೆ ಕಾರಣವಾಯಿತು.