ಹಗರೆ ಮಾದೀಹಳ್ಳಿ ವ್ಯಾಪ್ತಿಯಲ್ಲಿ 40 ಕೋಟಿ ರು. ವೆಚ್ಚದಲ್ಲಿ ವಿದ್ಯುತ್ ವಿತರಣಾ ಉಪಕೇಂದ್ರ: ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಬಿ.ಶಿವರಾಂ

| Published : Nov 10 2025, 12:45 AM IST

ಹಗರೆ ಮಾದೀಹಳ್ಳಿ ವ್ಯಾಪ್ತಿಯಲ್ಲಿ 40 ಕೋಟಿ ರು. ವೆಚ್ಚದಲ್ಲಿ ವಿದ್ಯುತ್ ವಿತರಣಾ ಉಪಕೇಂದ್ರ: ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಬಿ.ಶಿವರಾಂ
Share this Article
  • FB
  • TW
  • Linkdin
  • Email

ಸಾರಾಂಶ

ಬೇಲೂರು ತಾಲೂಕಿನಲ್ಲೇ ಅತೀ ಹೆಚ್ಚು ಕೊಳವೆ ಬಾವಿ ಹೊಂದಿರುವುದು ಮಾದೀಹಳ್ಳಿ, ಹಳೇಬೀಡು, ಜಾವಗಲ್ ಹೋಬಳಿ ಭಾಗದಲ್ಲಿ. ಆದರೆ ತಾಲೂಕಿನ ಜನಪ್ರತಿನಿಧಿಗಳಿಗೆ ಬೇಸಿಗೆ ಬಂತೆಂದರೆ ರೈತರ ಸ್ಥಿತಿ ಏನೆಂಬುದು ಮನವರಿಕೆ ಇಲ್ಲದಂತಾಗಿದೆ. ವಿದ್ಯುತ್ ಅಭಾವ ತಲೆದೂರಿದಾಗ ಸಮಸ್ಯೆ ಕೇಳಿದರೆ ಪರಿಹಾರವಾಗುವುದಿಲ್ಲ.

ಕನ್ನಡಪ್ರಭ ವಾರ್ತೆ ಹಳೇಬೀಡು

ಬೇಸಿಗೆ ಪ್ರಾರಂಭವಾಗುವ ಮುಂದಿನ ದಿನಗಳಲ್ಲಿ ವಿದ್ಯುತ್ ಅಭಾವ ಹೆಚ್ಚಾಗುತ್ತದೆ. ಇದರಿಂದ ರೈತರಿಗೆ ಹೆಚ್ಚು ಅನಾನುಕೂಲವಾಗುತ್ತಿದ್ದು ಸಮಸ್ಯೆ ಮನಗಂಡು ಹಗರೆ ಮಾದೀಹಳ್ಳಿ ವ್ಯಾಪ್ತಿಯಲ್ಲಿ ೪೦ ಕೋಟಿ ರು. ವೆಚ್ಚದಲ್ಲಿ ವಿದ್ಯುತ್ ವಿತರಣಾ ಉಪಕೇಂದ್ರ ಉನ್ನತೀಕರಣಕ್ಕೆ ಶ್ರಮವಹಿಸಿದ್ದೇನೆ ಎಂದು ಮಾಜಿ ಸಚಿವ, ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಬಿ.ಶಿವರಾಂ ತಿಳಿಸಿದರು.

ಹಳೇಬೀಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಯಲ್ಲಿ ಕಾಂಗ್ರೆಸ್‌ ಸರ್ಕಾರ ಅನುದಾನ ಇಲ್ಲದ ಸರ್ಕಾರ ಎಂದು ಎಲ್ಲಾ ಕಡೆ ಹೇಳುತ್ತ ಇದ್ದಾರೆ. ಬೇಲೂರು ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ವಿದ್ಯುತ್ ಸಮಸ್ಯೆ ಬಗ್ಗೆ ಗಮನ ನೀಡದೆ ಸರ್ಕಾರದ ಬಗ್ಗೆ ಮಾತನಾಡುವುದು ತಪ್ಪು. ನಾನು ಯಾರ ವಿರುದ್ಧವೂ ವಾಗ್ದಾಳಿ ಮಾಡುತ್ತಿಲ್ಲ. ಬೇಲೂರು ತಾಲೂಕಿನಲ್ಲೇ ಅತೀ ಹೆಚ್ಚು ಕೊಳವೆ ಬಾವಿ ಹೊಂದಿರುವುದು ಮಾದೀಹಳ್ಳಿ, ಹಳೇಬೀಡು, ಜಾವಗಲ್ ಹೋಬಳಿ ಭಾಗದಲ್ಲಿ. ಆದರೆ ತಾಲೂಕಿನ ಜನಪ್ರತಿನಿಧಿಗಳಿಗೆ ಬೇಸಿಗೆ ಬಂತೆಂದರೆ ರೈತರ ಸ್ಥಿತಿ ಏನೆಂಬುದು ಮನವರಿಕೆ ಇಲ್ಲದಂತಾಗಿದೆ. ವಿದ್ಯುತ್ ಅಭಾವ ತಲೆದೂರಿದಾಗ ಸಮಸ್ಯೆ ಕೇಳಿದರೆ ಪರಿಹಾರವಾಗುವುದಿಲ್ಲ. ಮುಂದಾಲೋಚನೆ ಮುಖ್ಯ ಎಂದು ಪರೋಕ್ಷವಾಗಿ ಶಾಸಕರನ್ನು ಟೀಕಿಸಿ, ಸರ್ಕಾರದಿಂದ ೪೦ ಕೋಟಿ ರು.ಗೂ ಅಧಿಕ ವೆಚ್ಚದ ಕಾಮಗಾರಿಗಳಿಗೆ ಅನುಮತಿ ದೊರಕಿಸುವ ಪ್ರಯತ್ನ ಮಾಡಿದ್ದೇನೆ ಎಂದರು.

ಅಂಕಿ ಅಂಶಗಳನ್ನು ಹಂಚಿಕೊಂಡ ಅವರು ಹಳೇಬೀಡಿನಲ್ಲಿರುವ ೧೮ ಎಂವಿಎ ವಿದ್ಯುತ್ ಪರಿವರ್ತಕ ಘಟಕವನ್ನು ಹೆಚ್ಚುವರಿಯಾಗಿ ೨೨.೫ ಎಂವಿಎಗೆ ೮.೫ ಕೋಟಿ ರು. ವೆಚ್ಚದಲ್ಲಿ, ಹಗರೆಯಲ್ಲಿನ ೧೮ಎಂವಿಎ ಘಟಕವನ್ನು ೮.೮೬ ಕೋಟಿ ರು. ವೆಚ್ಚದಲ್ಲಿ ೨೮ಎಂವಿಎಗೆ ಬದಲಾಯಿಸಿ, ಗಂಗೂರಿನ ೧೬.೩ಎಂವಿಎ ವಿದ್ಯುತ್ ಘಟಕಕ್ಕೆ ಹೆಚ್ಚುವರಿಯಾಗಿ ೧೨೦ ಎಂವಿಎ ಘಟಕ ೮.೩ ಕೋಟಿ ರು. ವೆಚ್ಚದಲ್ಲಿ ವಿದ್ಯುತ್ ಘಟಕ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಅರೇಹಳ್ಳಿಯಿಂದ ಗೆಂಡೇಹಳ್ಳಿವರೆಗೆ ದ್ವಿಗೋಪುರದ ಮೇಲೆ ೧೬ ಕಿಮೀ ಉದ್ದದ ೬೬ ಕೆವಿ ವಿದ್ಯುತ್ ಮಾರ್ಗ ೭ ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ಆಗಬೇಕಿದೆ. ರೈತರಿಂದ ಭೂಮಿ ಬಿಡಿಸಿಕೊಳ್ಳಬೇಕಿದೆ. ಬಿಕ್ಕೋಡಿನಲ್ಲಿ ಒಂದು ವಿದ್ಯುತ್ ಪರಿವರ್ತಕ ಘಟಕವೇ ಇಲ್ಲ. ಹಗರೆ ಹಾಗೂ ಗೆಂಡೇಹಳ್ಳಿ ಕಾಮಗಾರಿಗೆ ಟೆಂಡರ್ ನಲ್ಲಿ ಭಾಗವಹಿಸಲು ಯಾರೂ ಮುಂದೆ ಬಂದಿಲ್ಲ. ಕಾರಣ ಜನಪ್ರತಿನಿಧಿಗಳ ಸಹಕಾರ ಇಲ್ಲ. ಇದುವರೆಗೂ ಜನಪ್ರತಿನಿಧಿ ಎನಿಸಿಕೊಂಡವರು ಇದರ ಬಗ್ಗೆ ಯೋಚನೆಯನ್ನೇ ಮಾಡಿಲ್ಲ ಎನ್ನಿಸುತ್ತಿದೆ ಎಂದು ಪರೋಕ್ಷವಾಗಿ ಶಾಸಕ ಸುರೇಶ್‌ ರಿಗೆ ಟೀಕಿಸಿದರು. ಒಟ್ಟು ಈ ಭಾಗಕ್ಕೆ ೪೦ ಕೋಟಿ ರು. ಕಾಮಗಾರಿಯಲ್ಲಿ ವಿದ್ಯುತ್ ಉಪಕೇಂದ್ರಗಳ ಉನ್ನತೀಕರಣಕ್ಕೆ ಕಾಂಗ್ರೆಸ್ ಪಕ್ಷ ಮತ್ತು ನನ್ನ ಶ್ರಮ ಇದೆ ಹಾಗೂ ಈ ಕಾಮಗಾರಿ ಕೆಲಸ ೧೨ ತಿಂಗಳಲ್ಲಿ ಪೂರ್ಣಗೊಂಡು ಈ ಭಾಗದ ರೈತರ ಮತ್ತು ವ್ಯಾಪಾರಸ್ಥರ, ನಾಗರಿಕರ ಸಮಸ್ಯೆ ಬಗೆಹರಿಸಿದ್ದೇನೆ ಎಂದು ಶಿವರಾಂ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಬೇಲೂರು ಅಧ್ಯಕ್ಷ ದೇಶಾಣಿ ಆನಂದ್, ತಾಲೂಕಿನ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎನ್.ಶರತ್, ವೀರಣ್ಣ, ಯತೀಶ್‌ ಹಾಗೂ ಪಕ್ಷದ ಮುಖಂಡರು ಹಾಜರಿದ್ದರು.