ಸಾರಾಂಶ
ದಾಂಡೇಲಿ: ಎಮ್ಮೆ ಮೇಯಿಸಲು ಕಾಡಿಗೆ ಹೋಗಿದ್ದ ವ್ಯಕ್ತಿಯ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ್ದು, ಗಾಯಗೊಂಡ ವ್ಯಕ್ತಿ ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ನಾನಾಕೆಸರೋಡಾದ ಅರಣ್ಯ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.ನಾನಾಕೆಸರೋಡಾದ ನಿವಾಸಿ ಮಹೇಶ ಜಾನು ಪಾಟೀಲ(56) ಎಂಬವರೇ ಆನೆ ದಾಳಿಯಿಂದ ಗಾಯಗೊಂಡ ವ್ಯಕ್ತಿ. ಇವರು ಪತ್ನಿ ಸಮೇತರಾಗಿ ಬೆಳಗ್ಗೆ ಎಮ್ಮೆಗಳನ್ನು ಮೇಯಿಸಲೆಂದು ಮನೆ ಹತ್ತಿರದ ಅರಣ್ಯ ಪ್ರದೇಶಕ್ಕೆ ಹೋಗಿದ್ದರು. ಆಗ ಕಾಡಾನೆಯೊಂದು ಇವರ ಮೇಲೆ ದಾಳಿ ಮಾಡಿದೆ. ಆನೆ ದಾಳಿಯಿಂದ ಕೈಗೆ ಬಲವಾದ ಗಾಯವಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಆನೆ ದಾಳಿಯಿಂದ ಗಾಯಗೊಂಡಿದ್ದ ಇವರನ್ನು ಸ್ಥಳೀಯರು ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಿದ್ದಾರೆ. ಸಾರ್ವಜನಿಕ ಆಸ್ಪತ್ರೆಗೆ ಬರ್ಚಿ ಅರಣ್ಯ ಇಲಾಖೆಯ ವಲಯಾರಣ್ಯಾಧಿಕಾರಿ ಆಶೋಕ್ ಶೆಳ್ಳೆನ್ನವರ, ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಆಲೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಲಕ್ಷ್ಮಣ ಜಾಧವ್ ಭೇಟಿ ನೀಡಿದ್ದಾರೆ. ಸಾರ್ವಜನಿಕ ಆಸ್ಪತ್ರೆಗೆ ದಾಂಡೇಲಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಮಹಿಳೆ ಕೊಲೆ ಮಾಡಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ
ಶಿರಸಿ: ಒಂಟಿ ಮನೆಯಲ್ಲಿದ್ದ ಮಹಿಳೆಯನ್ನು ಕೊಂದು ಬಂಗಾರದ ಆಭರಣ ದೋಚಿದ್ದ ಅಪರಾಧಿಗೆ ನಗರದ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.ಸಿದ್ದಾಪುರದ ರಾಜು ತಿಮ್ಮಾ ಗೌಡ ಅಪರಾಧಿ. ಈತ ೨೦೨೦ರ ಜು. ೧೮ರಂದು ಸಿದ್ದಾಪುರ ತಾಲೂಕಿನ ಬಿಳಿಗೋಡ ಗ್ರಾಮದಲ್ಲಿ ಗೌರಿ ಈಶ್ವರ ನಾಯ್ಕ ಎಂಬವರನ್ನು ಹತ್ಯೆ ಮಾಡಿ ದರೋಡೆ ಮಾಡಿದ್ದ. ಮದ್ಯ ಕುಡಿಯುವ ಚಟ ಅಂಟಿಸಿಕೊಂಡಿದ್ದ ಈತ ಈ ಚಟಕ್ಕಾಗಿ ಕಾಡಿನ ಒಂಟಿ ಮನೆಯಲ್ಲಿ ವಾಸವಾಗಿದ್ದ ಗೌರಿಯನ್ನು ಹಣ ನೀಡುವಂತೆ ಬೆದರಿಸಿದ್ದ. ಆಕೆ ಒಪ್ಪದಿದ್ದಾಗ ಕಬ್ಬಿಣದ ಹಾರೆಯಿಂದ ಆಕೆಯ ತಲೆಗೆ ಹೊಡೆದು ಕಿವಿಯಲ್ಲಿದ್ದ ₹೯ ಸಾವಿರ ಬೆಲೆಯ ಬಂಗಾರದ ಆಭರಣ ಕಿತ್ತುಕೊಂಡು ಪರಾರಿಯಾಗಿದ್ದ ಎಂದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕಿರಣ ಕಿಣಿ, ಅಪರಾಧಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿ, ₹೩೦ ಸಾವಿರ ದಂಡ ಮತ್ತು ಮೃತಳ ಮಗಳು ಮತ್ತು ಮಗನಿಗೆ ಒಟ್ಟು ₹೫೦ ಸಾವಿರ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕ ರಾಜೇಶ ಎಂ. ಮಳಗೀಕರ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದಾರೆ,