ಸಾರಾಂಶ
ಕಾಜೂರು ಗ್ರಾಮದಲ್ಲಿ ಕಾಡಾನೆ ಹಾವಳಿಯಿಂದ ನಷ್ಟ ಸಂಭವಿಸಿದೆ. ಯಾವಾಗ ಎಲ್ಲಿ ಆನೆಗಳು ಬಂದು ದಾಳಿ ನಡೆಸುತ್ತವೆ ಎಂಬುದು ತಿಳಿಯುವುದಿಲ್ಲ.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಇಲ್ಲಿಗೆ ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಗ್ರಾಮದಲ್ಲಿ ಸಂಜೆ ವೇಳೆ ಕಾಡಾನೆ ಹಾವಳಿಯಿಂದ ನಷ್ಟವಾಗಿದೆ.ಕಾಜೂರು ಗ್ರಾಮದ ವಿಶ್ವನಾಥ್ ಎಂಬುವವರ ಮನೆ ಹಾಗೂ ಶೆಡ್ ಮೇಲೆ ದಾಳಿ ನಡೆಸಿರುವ ಆನೆ, ಮನೆ ಮೇಲ್ಛಾವಣಿ, ಶೆಡ್ ಧ್ವಂಸಗೊಳಿಸಿ, ಅದರಲ್ಲಿ ನಿಲ್ಲಿಸಿದ್ದ ಎರಡು ಬೈಕ್ ಪುಡಿಗಟ್ಟಿದೆ.
ಈ ಭಾಗದಲ್ಲಿ ಹಗಲಿನಲ್ಲಿಯೇ ಕಾಡಾನೆಗಳು ದಾಳಿ ನಡೆಸುತ್ತಿದ್ದು, ಜನರು ಭಯ ಭೀತರಾಗಿದ್ದಾರೆ. ಯಾವಾಗ ಎಲ್ಲಿ ಆನೆಗಳು ಬಂದು ದಾಳಿ ನಡೆಸುತ್ತವೆ ಎಂಬುವುದೇ ತಿಳಿಯುವುದಿಲ್ಲ. ಇದರಿಂದಾಗಿ ಕೃಷಿ ಕೆಲಸಗಳಿಗೂ ಹಿನ್ನೆಡೆಯಾಗಿದೆ. ಜನರು ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಇದ್ದು, ಕೂಡಲೇ ಆನೆಗಳನ್ನು ಕಾಡಿಗಟ್ಟುವ ಕೆಲಸವನ್ನು ಅರಣ್ಯ ಇಲಾಖೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.