ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಜೂನ್ ಮಾಹೆಯವರೆಗೆ ಜಿಲ್ಲೆಯಲ್ಲಿ 64 ಪ್ರಕರಣಗಳು ದಾಖಲಾಗಿ ಕೇವಲ 1 ಪ್ರಕರಣಕ್ಕೆ ಮಾತ್ರ ಶಿಕ್ಷೆಯಾಗಿರುವುದರಿಂದ ಪೋಕ್ಸೋ ಕಾಯ್ದೆ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಬಾಲನ್ಯಾಯ ಮಂಡಳಿ, ಮಕ್ಕಳ ಸಹಾಯವಾಣಿ ಸಲಹಾ ಮಂಡಳಿ-1098 ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಪಾಲಕರು, ಸಮುದಾಯದವರು ಪರಸ್ಪರ ರಾಜಿ ಸಂಧಾನದಲ್ಲೇ ಮುಗಿಸಿಕೊಳ್ಳುತ್ತಿರುವುದು ವಿಷಾದನೀಯ. ಪೋಕ್ಸೋ ಕಾಯ್ದೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದಾಗ ಮಕ್ಕಳ ಮೇಲೆ ಆಗುವ ಲೈಂಗಿಕ ದೌರ್ಜನ್ಯಗಳನ್ನು ಕಡಿಮೆಗೊಳಿಸಬಹುದಾಗಿರುತ್ತದೆ ಮತ್ತು ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಹಕಾರಿಯಾಗುವುದರಿಂದ ಗ್ರಾಮೀಣ ಸಮುದಾಯಗಳಲ್ಲಿ ರೈಲು, ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಮಟ್ಟದ ಜನ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದರು.
ದತ್ತು ತೆಗೆದುಕೊಂಡಂತಹ ದಂಪತಿಗಳು ಕೆಲವು ವರ್ಷ ಮಗುವನ್ನು ತಮ್ಮ ಹತ್ತಿರ ಇಟ್ಟುಕೊಂಡು ನಂತರ ನಮಗೆ ಈ ಮಗು ಬೇಡ ಎಂದು ಹೇಳಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಮಗುವಿನ ಭವಿಷ್ಯದ ಹಿತದೃಷ್ಟಿಯಿಂದ ದತ್ತು ಪಡೆದಂತಹ ದಂಪತಿ, ಪೋಷಕರ ಹೆಸರಿಗೆ ಇರುವ ಆಸ್ತಿಯಲ್ಲಿ ಒಂದು ಭಾಗ ಆ ಮಗುವಿನ ಹೆಸರಿಗೆ ಬರುವಂತಹ ಕ್ರಮಗಳನ್ನು ಕೈಗೊಂಡಲ್ಲಿ ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸುವುದಿಲ್ಲ ಮತ್ತು ಸಮಸ್ಯೆಗಳು ಕೂಡ ಉದ್ಬವಿಸುವುದಿಲ್ಲ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಬಾಲ್ಯವಿವಾಹಗಳನ್ನು ತಡೆಗಟ್ಟುವುದು ಕೂಡಾ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಶಾಲಾ ಮುಖ್ಯೋಪಾಧ್ಯಾಯರಿಗೆ, ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಿ. ಮಕ್ಕಳ ಪಾಲಕರು, ಪೋಷಕರು ಮತ್ತು ಗ್ರಾಮೀಣ ಸಮುದಾಯಗಳಲ್ಲಿ ಹೆಚ್ಚಿನ ಮಟದ್ಟ ಜಾಗೃತಿ ಮೂಡಿಸುವುದು, 18 ವರ್ಷದೊಳಗಿನ ಮಗುವಿಗೆ ಮದುವೆ ಮಾಡಿದಲ್ಲಿ ಅದಕ್ಕಿರುವ ಶಿಕ್ಷೆ ಮತ್ತು ಪರಿಣಾಮಗಳ ಬಗ್ಗೆ ಪ್ರಚಾರಪಡಿಸಿದಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.
ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ. ವೀಣಾ ಕುಂಬಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರೋಗ್ರಾಂ ಆಫೀಸರ್ ಅಮರೇಶ ಹಿರೇಮಠ ಹಾಗೂ ಇತರರು ಇದ್ದರು.