ಮಕ್ಕಳಿಗೆ ಶಿಕ್ಷಣ ಸರ್ಕಾರಗಳ ಕರ್ತವ್ಯ: ಡಾ.ಪರಮೇಶ್ವರ

| Published : Jul 29 2024, 12:47 AM IST

ಸಾರಾಂಶ

ದೇಶದಲ್ಲಿ 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬುದು ಸಂವಿಧಾನ ಬದ್ಧತೆಯ ಆಶಯವಾಗಿದೆ. ಅದನ್ನು ಕಾರ್ಯರೂಪಕ್ಕೆ ತರಬೇಕಾದುದು ಆಳುವವರ ಜವಾಬ್ದಾರಿಯೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಆದಿಕರ್ನಾಟಕ ವಿದ್ಯಾಭಿವೃದ್ಧಿ ಸಂಘ ವಿದ್ಯಾರ್ಥಿಗಳಿಗೆ ಸಾಮಗ್ರಿ ವಿತರಣೆ

- - - - ಡಾ. ಜಿಎಂಟಿ ಪಿಯು ಕಾಲೇಜಿನ ಸಮಸ್ಯೆ ಪರಿಹರಿಸಲು ಸಚಿವರಿಗೆ ಸಂಘ ಮನವಿ- ಸಂಘದ ಎಲ್.ಎಂ. ಹನುಮಂತಪ್ಪ, ಬಿ.ಎಚ್‌.ವೀರಭದ್ರಪ್ಪ, ಪೇಪರ್‌ ಚಂದ್ರಣ್ಣ ಆಗ್ರಹ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದೇಶದಲ್ಲಿ 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬುದು ಸಂವಿಧಾನ ಬದ್ಧತೆಯ ಆಶಯವಾಗಿದೆ. ಅದನ್ನು ಕಾರ್ಯರೂಪಕ್ಕೆ ತರಬೇಕಾದುದು ಆಳುವವರ ಜವಾಬ್ದಾರಿಯೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.

ನಗರದ ಆದಿಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂಸ್‌, ರಗ್ಗು, ಹೊದಿಗೆ ಇತರೆ ಸಾಮಗ್ರಿ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಇಂದು ಅಭೂತಪೂರ್ವ ಬದಲಾವಣೆ ತಂದಿದೆ. ಶಿಕ್ಷಣದಿಂದ ದೂರವಿದ್ದಂತಹ ಪರಿಶಿಷ್ಟ ಮಕ್ಕಳೂ ಈಗ ಶೈಕ್ಷಣಿಕ ಸಾಧನೆ ಮಾಡುತ್ತಿರುವುದು ಗಮನಾರ್ಹ ಎಂದರು.

ಮಕ್ಕಳಿಗೆ ಶಿಕ್ಷಣ ನೀಡಬೇಕಾದುದು ಯಾವುದೇ ರಾಜ್ಯ, ದೇಶದ ಜವಾಬ್ದಾರಿಯಾಗಿದೆ. ಆದಿಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಮೂಲಕ ಆತ್ಮೀಯರಾದ ಬಿ.ಎಚ್. ವೀರಭದ್ರಪ್ಪ, ಎಲ್.ಎಂ.ಹನುಮಂತಪ್ಪ ಸೇರಿದಂತೆ ಸಮಿತಿ, ಸಮಾಜದ ಮುಖಂಡರು ಮಕ್ಕಳಿಗೆ ಶಿಕ್ಷಣ ನೀಡಲು, ಮಕ್ಕಳಿಗೆ ಅಗತ್ಯ ಶೈಕ್ಷಣಿಕ ಇತರೆ ಪರಿಕರ ನೀಡುವ ಮೂಲಕ ಮಾದರಿ ಕೆಲಸ ಮಾಡುತ್ತಿದ್ದಾರೆ. ಇಂತಹ ಸರಳ, ಶೈಕ್ಷಣಿಕ, ಮಕ್ಕಳಿಗೆ ಪೂರಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ತಮಗೆ ಖುಷಿ ತಂದಿದೆ ಎಂದ ಅವರು, ವಿದ್ಯಾರ್ಥಿಗಳು ಉನ್ನತ ಸಾಧನೆ ಮೆರೆಯಬೇಕು ಎಂದು ತಿಳಿಸಿದರು.

ಸಂಘದ ಕಾರ್ಯದರ್ಶಿ, ಸಮಾಜದ ಹಿರಿಯ ಮುಖಂಡ ಬಿ.ಎಚ್. ವೀರಭದ್ರಪ್ಪ ಮಾತನಾಡಿ, ಹರಿಜನ ಸಮಾಜದ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಸಂಕಲ್ಪದೊಂದಿಗೆ ಇಲ್ಲಿನ ಹಿರಿಯರಿಗೆ ಷರತ್ತು ವಿಧಿಸಿ, ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1934ರಲ್ಲಿ ದಾವಣಗೆರೆಗೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಬಂದಿದ್ದರು. ಅಂದು ಗಾಂಧೀಜಿ ಚೌಕಾಕಾರದಲ್ಲಿ ಸಾಗಿದ ಜಾಗವೇ ಇಂದು ಸಂಸ್ಥೆಯ ಕಾಂಪೌಂಡ್ ಇರುವ ಜಾಗ. ಅಷ್ಟೂ ಜಾಗವನ್ನು ಹರಿಜನರ ಮಕ್ಕಳ ಶೈಕ್ಷಣಿಕ ಕಾರ್ಯಕ್ಕಾಗಿ ಕೊಡಿಸಿದ ಮಹಾತ್ಮ ಗಾಂಧೀಜಿ ಸಂಕಲ್ಪ ಸಾಕಾರಗೊಳ್ಳುತ್ತಿದೆ ಎಂದರು.

ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಡಾ.ಬಿ.ಎಂ.ತಿಪ್ಪೇಸ್ವಾಮಿ ಸಂಯುಕ್ತ ಪಿಯು ಕಾಲೇಜು ಸೇರಿದಂತೆ ಒಂದಿಷ್ಟು ಸಮಸ್ಯೆಗಳಿವೆ. ಅದು ಸರ್ಕಾರದ ಮಟ್ಟದಲ್ಲೇ ಪರಿಹಾರ ಸಿಗಬೇಕಿದೆ. ಈ ಹಿನ್ನೆಲೆ ಸಂಸ್ಥೆ, ಸಮಾಜದ ಮುಖಂಡರ ನಿಯೋಗವು ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ನಿಯೋಗ ಬರಲಿದ್ದೇವೆ. ಆಗ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಸಂಸ್ಥೆಗೆ ಕಾಲೇಜು ಮಂಜೂರು ಮಾಡಿಸಿಕೊಡಬೇಕು. ಕಾಲೇಜನ್ನೇ ಅವಲಂಭಿಸಿದ 14-15 ಬೋಧಕರ ಜೀವ, ಬದುಕಿನ ಪ್ರಶ್ನೆಯೂ ಆಗಿದೆ. ಯಾರೇ ಕೈಬಿಟ್ಟರೂ ಡಾ.ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರವರು ನಮ್ಮ ಕೈಬಿಡಬಾರದು ಎಂದು ಮನವಿ ಮಾಡಿದರು.

ಕೆಪಿಸಿಸಿ ಉಪಾಧ್ಯಕ್ಷ ಎಸ್.ವಿಜಯಕುಮಾರ, ಸಂಘದ ಅಧ್ಯಕ್ಷ ಎಲ್.ಎಂ. ಹನುಮಂತಪ್ಪ, ಉಪಾಧ್ಯಕ್ಷ ಬಿ.ಎಂ. ರಾಮಸ್ವಾಮಿ, ಜಂಟಿ ಕಾರ್ಯದರ್ಶಿ, ಹಿರಿಯ ಪತ್ರಕರ್ತ ಪೇಪರ್ ಕೆ.ಚಂದ್ರಣ್ಣ, ಸದಸ್ಯರಾದ ಗಂಗಾಧರಪ್ಪ, ಬಿ.ಎಂ. ಈಶ್ವರಪ್ಪ ಗಾಂಧಿ ನಗರ, ಎಲ್.ಎಂ.ಎಚ್.ಸಾಗರ್‌, ಹಿರಿಯ ವಕೀಲ ಮಂಜಪ್ಪ ಹಲಗೇರಿ, ನಾಗರಾಜಪ್ಪ ಆದಾಪುರ, ಜಿ.ಎನ್.ಸಂತೋಷ, ಯುವ ಮುಖಂಡ ರಾಕೇಶ ಇತರರು ಇದ್ದರು. ಶಾಲೆಯ ಹಳೆಯ ವಿದ್ಯಾರ್ಥಿ, ವರದಿಗಾರರ ಕೂಟದ ನೂತನ ಅಧ್ಯಕ್ಷ, ಕನ್ನಡಪ್ರಭ ಹಿರಿಯ ವರದಿಗಾರ ನಾಗರಾಜ ಎಸ್. ಬಡದಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತರನ್ನು ಸಂಸ್ಥೆ ಪರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಸನ್ಮಾನಿಸಿದರು.

ಇದೇ ವೇಳೆ 85 ಮಕ್ಕಳಿಗೆ ಸಮವಸ್ತ್ರ ಇತರೆ ಪರಿಕರ ವಿತರಿಸಲಾಯಿತು.

- - - -28ಕೆಡಿವಿಜಿ9:

ದಾವಣಗೆರೆ ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ಇತರೇ ಪರಿಕರ ವಿತರಣೆ ಸಮಾರಂಭವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ಉದ್ಘಾಟಿಸಿದರು.