ಸಾರಾಂಶ
ಭಟ್ಕಳ: ತಾಲೂಕಿನ ಹಾಡವಳ್ಳಿಯ ಹಿರೇಬೀಳು ಮಜಿರೆಯಲ್ಲಿ ಭಾರೀ ಗಾಳಿ, ಮಳೆಗೆ ಮನೆ, ಅಡಕೆ ತೋಟ ಹಾನಿಯಾದ ಪ್ರದೇಶಕ್ಕೆ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ಎಸ್. ವೈದ್ಯ ಅವರು ಭೇಟಿ ನೀಡಿ ಹಾನಿ ಪರಿಶೀಲಿಸಿ ಹಾನಿಯಾದವರ ಅಹವಾಲು ಆಲಿಸಿದರು.
ಸಚಿವರು ಹಲ್ಯಾಣಿಯ ತಿಮ್ಮಯ್ಯ ನಾರಾಯಣ ನಾಯ್ಕ, ಬುಡ್ಡ ಮಂಗಳ ಗೊಂಡ, ಅಣ್ಣಪ್ಪ ನಾರಾಯಣ ನಾಯ್ಕ, ಗಣಪತಿ ನಾರಾಯಣ ನಾಯ್ಕ ಮತ್ತು ನಾಗೇಶ ನಾರಾಯಣ ನಾಯ್ಕ, ದೇವರಾಜ ಗೊಂಡ ಅವರ ಮನೆಗೆ ಖುದ್ದಾಗಿ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿ ಮನೆಯವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮನೆ, ತೋಟಕ್ಕೆ ಹಾನಿಯಾದವರು ಸಚಿವರಲ್ಲಿ, ಕಷ್ಟಪಟ್ಟು ಬೆಳೆದ ತೋಟ ಬಿರುಗಾಳಿಯಿಂದ ನಾಶವಾಗಿದೆ. ಕೃಷಿಯನ್ನೇ ನಂಬಿ ಬದುಕುತ್ತಿದ್ದ ನಮ್ಮ ಬದುಕು ಬೀದಿಗೆ ಬಂದಿದೆ ಎಂದು ಕಣ್ಣೀರು ಹಾಕಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಹಾಡವಳ್ಳಿಯಲ್ಲಿ ಬಿರುಗಾಳಿಗೆ ರೈತರ ಮನೆ, ಅಡಕೆ ತೋಟ ಹಾನಿಯಾಗಿರುವುದು ಬೇಸರ ತರಿಸಿದೆ. ಈ ಭಾಗದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಬಿರುಗಾಳಿ ಬೀಸುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಮನೆ ಹಾನಿಯಾದವರಿಗೆ ₹1 ಲಕ್ಷ ಪರಿಹಾರವನ್ನು ಸೋಮವಾರವೇ ಖಾತೆಗೆ ಜಮಾ ಮಾಡಲಾಗುತ್ತದೆ. ಮನೆ ಹಾನಿಯಾದವರಿಗೆ ಸರ್ಕಾರದಿಂದ ಹೊಸ ಮನೆ ಕೂಡ ಮಂಜೂರಿಸಲಾಗುತ್ತದೆ. ಅಡಕೆ ತೋಟ ಹಾನಿಯಾದ ಬಗ್ಗೆ ತೋಟಗಾರಿಕೆ, ಕೃಷಿ ಮತ್ತು ಕಂದಾಯ ಇಲಾಖೆಯವರು ಜಂಟಿ ಸರ್ವೆ ನಡೆಸಿ ಹಾನಿಯ ಬಗ್ಗೆ ನಿಖರ ಮಾಹಿತಿ ವರದಿ ನೀಡಿದ ಬಳಿಕ ಪರಿಹಾರ ವಿತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೆಲವರು ಘಟನೆ ಬಗ್ಗೆ ಮಾಹಿತಿ ನೀಡಿದ್ದರೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಲ್ಲ. ಇವತ್ತು ನಿಮ್ಮ ಜತೆಗೆ ಬಂದಿದ್ದಾರೆ ಎಂದು ಸಚಿವರ ಬಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಮನೆ, ತೋಟ ಕಳೆದುಕೊಂಡಿರುವ ನಮಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಮನವಿ ಮಾಡಿದರು. ಸಚಿವರು ಕುಂಟವಾಣಿಯಲ್ಲಿ ಗುಡ್ಡದಿಂದ ಜಾರಿ ಬಂದ ಬೃಹತ್ ಗಾತ್ರದ ಬಂಡೆಯನ್ನು ವೀಕ್ಷಿಸಿದರು.ನಂತರ ಸಚಿವರು ಹಾಡವಳ್ಳಿ, ಕೋಣಾರ, ಬೆಳಕೆ, ಯಲ್ವಡಿಕವೂರು, ಮಾವಿನಕುರ್ವೆಯ ಕರಿಕಲ್‌ಗೆ ಭೇಟಿ ನೀಡಿ ಈ ಭಾಗದಲ್ಲಿ ಮಳೆಯಿಂದ ಮನೆ ಹಾನಿಯಾದವರಿಗೆ ಪರಿಹಾರದ ಚೆಕ್ ವಿತರಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಮನೆ ಪೂರ್ಣ ಪ್ರಮಾಣದಲ್ಲಿ ಹಾನಿಯಾದವರಿಗೆ ₹1.20 ಲಕ್ಷ ಪರಿಹಾರ ನೀಡುವುದರ ಜತೆಗೆ ಒಂದು ಮನೆಯನ್ನೂ ಮಂಜೂರು ಮಾಡಲಾಗುತ್ತದೆ. ಈ ಮನೆಗೆ ಎಷ್ಟು ಹಣ ನೀಡಬೇಕು ಎನ್ನುವುದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಇನ್ನಷ್ಟೇ ನಿರ್ಧಾರ ಆಗುತ್ತದೆ. ಕೆಲವರು ಮನೆ ಹಾನಿಯಾದವರಿಗೆ ₹5 ಲಕ್ಷ ಕೊಡಲಾಗುತ್ತಿತ್ತು ಎಂದು ಹೇಳಿದ್ದಾರೆ. ಆದರೆ ಮನೆ ಕಳೆದುಕೊಂಡವರಿಗೆ ಎಲ್ಲಿಯೂ ₹5 ಲಕ್ಷ ಕೊಟ್ಟಿಲ್ಲ. ಮನೆ ಹಾನಿಯಾದವರಿಗೆ ಕೊಟ್ಟಿದ್ದು ₹1 ಲಕ್ಷ ಮಾತ್ರ. ಆದರೆ ನಾವು ಮನೆ ಹಾನಿಯಾದವರಿಗೆ ₹1.20 ಲಕ್ಷ ಪರಿಹಾರ ವಿತರಣೆ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತೆ ಡಾ. ನಯನಾ, ತಾಪಂ. ಪ್ರಭಾರೆ ಕಾರ್ಯನಿರ್ವಹಣಾಧಿಕಾರಿ ಮತ್ತು ಬಿಇಒ ವಿ.ಡಿ. ಮೊಗೇರ, ತಹಸೀಲ್ದಾರ್ ನಾಗರಾಜ ನಾಯ್ಕಡ, ತೋಟಗಾರಿಕಾ ಸಹಾಯಕ ನಿರ್ದೇಶಕ ಬೀಳಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಮಾರುಕೇರಿ ಗ್ರಾಪಂ ಅಧ್ಯಕ್ಷೆ ನಾಗವೇಣಿ ಗೊಂಡ, ಹಾಡವಳ್ಳಿ ಗ್ರಾಪಂ ಅಧ್ಯಕ್ಷ ಶ್ರೀಧರ ಶೆಟ್ಟಿ, ಗ್ರಾಪಂ ಪಿಡಿಒ ಸೇರಿದಂತೆ ಊರಿನ ಪ್ರಮುಖರು ಮುಂತಾದವರಿದ್ದರು.