ಸಾರಾಂಶ
ಕಾಫಿ ತೋಟದ ಕೆರೆಗೆ ಬಿದ್ದು ಕಾಡಾನೆ ಮೃತಪಟ್ಟಿರುವ ಘಟನೆ ನಡೆದಿದೆ. ಅಮ್ಮತ್ತಿ ಸಮೀಪದ ಒಂಟಿಯಂಗಡಿಯ ಪಚ್ಚಾಟ್ ಎಂಬಲ್ಲಿ ಘಟನೆ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಕಾಫಿ ತೋಟ ಕೆರೆಗೆ ಬಿದ್ದು ಕಾಡಾನೆ ಮೃತಪಟ್ಟಿರುವ ಘಟನೆ ಅಮ್ಮತ್ತಿ ಸಮೀಪದ ಒಂಟಿಯಂಗಡಿಯ ಪಚ್ಚಾಟ್ ಎಂಬಲ್ಲಿ ನಡೆದಿದೆ.ಇಲ್ಲಿನ ಮುಕ್ಕಾಟೀರ ನಂದ ಎಂಬವರಿಗೆ ಸೇರಿದ ಕೆರೆಯಲ್ಲಿ ಅಂದಾಜು 15 ವರ್ಷ ಪ್ರಾಯದ ಗಂಡಾನೆಯ ಕಳೇಬರ ಪತ್ತೆಯಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಳೇಬರವನ್ನು ಜೆಸಿಬಿ ಮೂಲಕ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಕಾಡಾನೆ ನೀರು ಕುಡಿಯಲು ಬಂದು ಕಾಲು ಜಾರಿಬಿದ್ದು ಕೆಸರಿನಲ್ಲಿ ಸಿಲುಕಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಪ್ರಾಣಿ ಪ್ರಿಯರಲ್ಲಿ ಬೇಸರ ಮೂಡಿಸಿದೆ. ಸಂಬಂಧ ಪಟ್ಟ ಇಲಾಖೆ ಈ ಬಗ್ಗೆ ಕ್ರಮ ವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.---------------------
ಅಗ್ನಿ ದುರಂತ: ಹೊತ್ತಿ ಉರಿದ ಮನೆಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಆಕಸ್ಮಿಕ ಬೆಂಕಿಯಿಂದ ಮನೆ ಹೊತ್ತಿ ಉರಿದಿರುವ ಘಟನೆ ಶುಕ್ರವಾರ ಹಾನಗಲ್ಲು ಬಾಣೆಯಲ್ಲಿ ಸಂಭವಿಸಿದೆ.ಮನೆ ಲೀಲಾವತಿ ಎಂಬವರಿಗೆ ಸೇರಿದ್ದಾಗಿದ್ದು, ಸೊಸೆಯೊಂದಿಗೆ ವಾಸವಾಗಿದ್ದರು. ಸೊಸೆ ಪಟ್ಟಣಕ್ಕೆ ತೆರಳಿದ್ದ ಸಂದರ್ಭ, ಲೀಲಾವತಿ ಮನೆಯ ಹೊರಗೆ ಕೆಲಸ ಮಾಡುತ್ತಿದ್ದ ಸಂದರ್ಭ ಇದ್ದಕ್ಕಿದ್ದಂತೆ ಮನೆಗೆ ಬೆಂಕಿ ಹತ್ತಿಕೊಂಡಿದೆ. ಟಿ.ವಿ. ಫ್ರಿಡ್ಜ್, ಬಟ್ಟೆ ಇತರ ಸಾಮಾಗ್ರಿಗಳು ಸುಟ್ಟ ಹೋಗಿವೆ.
ತುಂಬ ಹಳೆಯದಾದ ಹೆಂಚಿನ ಮನೆಯಾಗಿದ್ದು, ಮರಮುಟ್ಟುಗಳು ಗೆದ್ದಲು ಹಿಡಿದಿದ್ದ ಪರಿಣಾಮ, ಬೇಗನೆ ಬೆಂಕಿ ಹತ್ತಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.ಸ್ಥಳಕ್ಕೆ ಆಗ್ನಿಶಾಮಕ ದಳದ ಸಿಬ್ಬಂದಿ ತೆರಳಿ ಬೆಂಕಿಯನ್ನು ಆರಿಸಿದ್ದಾರೆ. ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ. ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಾಗಿದೆ.