ತಾಲೂಕಿನ ಹಿರೇಅಣಜಿ ಬಳಿಯಲ್ಲಿ ಶನಿವಾರ ಸಂಜೆ ಕಾಡಾನೆ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದ್ದು, ಭಾನುವಾರ ಬೆಳಗ್ಗೆ ಬ್ಯಾಡಗಿ ಪಟ್ಟಣದ ಹೊರವಲಯ ಮೋಟೆಬೆನ್ನೂರ ಗ್ರಾಮದ ಹೊಲಗಳಲ್ಲಿ ಹೆಜ್ಜೆ ಗುರುತು ಕಾಣಿಸಿಕೊಂಡಿದೆ. ಇದರಿಂದ ತಾಲೂಕಿನ ರೈತರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ.
ಬ್ಯಾಡಗಿ: ತಾಲೂಕಿನ ಹಿರೇಅಣಜಿ ಬಳಿಯಲ್ಲಿ ಶನಿವಾರ ಸಂಜೆ ಕಾಡಾನೆ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದ್ದು, ಭಾನುವಾರ ಬೆಳಗ್ಗೆ ಬ್ಯಾಡಗಿ ಪಟ್ಟಣದ ಹೊರವಲಯ ಮೋಟೆಬೆನ್ನೂರ ಗ್ರಾಮದ ಹೊಲಗಳಲ್ಲಿ ಹೆಜ್ಜೆ ಗುರುತು ಕಾಣಿಸಿಕೊಂಡಿದೆ. ಇದರಿಂದ ತಾಲೂಕಿನ ರೈತರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ. ನಿನ್ನೆಯಷ್ಟೇ ಶನಿವಾರ ತಾಲೂಕಿನ ಹಿರೇಅಣಜಿ ಗ್ರಾಮದ ಬಳಿಯಲ್ಲಿನ ಹೊಲದಲ್ಲಿ ಕಂಡು ಬಂದಿದ್ದು, ಆನೆಯು ಅಲ್ಲಿನ ನಿವಾಸಿಗಳ ಪಾಲಿಗೆ ಅಕ್ಷರಶಃ ದೊಡ್ಡ ಆತಂಕ ತಂದೊಡ್ಡಿ ಗ್ರಾಮಸ್ಥರು ಮನೆಯಿಂದ ಹೊರ ಬರದೇ ಉಳಿ ಯುವಂತೆ ಮಾಡಿತ್ತು, ಇದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಆನೆಯನ್ನು ಗ್ರಾಮದಲ್ಲಿನ ನೀಲಗಿರಿ ತೋಪಿನಲ್ಲಿ ಪತ್ತೆ ಹಚ್ಚಿದ್ದರು. ಶಿಕಾರಿಪುರ ಹಾಗೂ ಶಿರಾಳಕೊಪ್ಪ ಕಡೆಯಿಂದ ಆನೆ ಬಂದಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದರು. ಆನೆ ಗ್ರಾಮಕ್ಕೆ ಬಂದಿರುವ ಸುದ್ದಿ ಗ್ರಾಮದ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಗ್ರಾಪಂ.ವತಿಯಿಂದ ಗ್ರಾಮದಲ್ಲಿ ಡಂಗೂರ ಸಾರಿಸಿ ರಾತ್ರಿ ವೇಳೆ ಯಾರು ಹೊರಗೆ ಬಾರದಂತೆ ಮನವಿ ಮಾಡಲಾಗಿತ್ತು. ಮತ್ತಷ್ಟು ಕಡೆಗಳಲ್ಲಿ ಹೆಜ್ಜೆ ಗುರುತು: ಆದರೆ ಆನೆಯು ಒಂದೇ ಕಡೆ ನಿಲ್ಲದೇ ರಾತ್ರಿಯೇ ಅಲ್ಲಿಂದ ಸಾಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಾದು ಬಂದಿದ್ದು, ಹೊಲಗಳಲ್ಲಿ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರದಿಂದ ಆನೆ ಪತ್ತೆ ಕಾರ‍್ಯದಲ್ಲಿ ತೊಡಗಿದ್ದು, ರಾತ್ರಿ ಸಮಯವಾದ್ದರಿಂದ ಯಾವಾಗ ಅಲ್ಲಿಂದ ಕಾಲ್ಕಿತ್ತಿದೆ ಎಂಬುದು ತಿಳಿದಿಲ್ಲ. ಭಾನುವಾರ ಬೆಳಗ್ಗೆ ಮಾತ್ರ ಮೋಟೆಬೆನ್ನೂರ ಗ್ರಾಮಕ್ಕೆ ಹೊಂದಿಕೊಂಡಿರುವ ರೈಲ್ವೆ ಹಳಿಗಳ ಪಕ್ಕದ ಹೊಲಗಳಲ್ಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು ರೈತರು ಕೂಡಲೇ ಗ್ರಾಮದಲ್ಲಿ ವಿಷಯ ಮುಟ್ಟಿಸಿದ್ದಾರೆ ಅಲ್ಲದೇ ಗ್ರಾಮಸ್ಥರು ಸೂಕ್ತ ಮುಂಜಾಗ್ರತೆ ವಹಿಸಲು ಎಚ್ಚರಿಕೆ ನೀಡಿದ್ದಾರೆ. ಗಜರಕ್ಷಣಾ ಪಡೆ ಭೇಟಿ: ವಿಷಯ ತಿಳಿಯುತ್ತಿದ್ದಂತೆ ಬ್ಯಾಡಗಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಮಂಗಳೂರು ನಿಂದ ಗಜರಕ್ಷಣಾ ಪಡೆಯನ್ನು ಕರೆಸಿ ಸ್ಥಳ ಪರಿಶೀಲನೆ ನಡೆಸಿದರಲ್ಲದೇ ಆನೆಯ ಹೆಜ್ಜೆ ಗುರುತನ್ನು ಖಾತ್ರಿ ಪಡಿಸಿದ್ದಾರೆ. ಹೆಜ್ಜೆ ಗುರ್ತನ್ನು ಬೆನ್ನು ಹತ್ತಿರುವ ಅಧಿಕಾರಿಗಳ ತಂಡ ಆನೆ ಇಲ್ಲೇ ಎಲ್ಲೋ ಇರುವ ಮಾಹಿತಿ ನೀಡಿದ್ದು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.ದಾಳಿ ನಡೆಸಿದರೇ ಹಾರು ಹೊಣೆ:ಮೋಟೆಬೆನ್ನೂರ ಬಳಿಯ ನಮ್ಮ ಹೊಲದಲ್ಲಿ ಆನೆ ಬಂದು ಹೋಗಿರುವ ಬಗ್ಗೆ ಬೆಳಗ್ಗೆ ಹೆಜ್ಜೆ ಗುರುತು ಪತ್ತೆಯಾಗಿದೆ. ರೈತರು ಹೊಲಗಳಲ್ಲಿ ಕೆಲಸ ಮಾಡಲು ಬಂದ ಸಂದರ್ಭದಲ್ಲಿ ಏನಾದರೂ ದಾಳಿ ನಡೆದರೆ ಯಾರು ಹೊಣೆ? ಕೂಡಲೇ ಅರಣ್ಯ ಇಲಾಖೆಯು ಆನೆಯನ್ನು ಬಂಧಿಸಿ ಬೇರೆಡೆಗೆ ಸಾಗಿಸಿ ಹಾನಿಯಾಗಿ ರುವ ಕುರಿತು ಬೆಳೆಗೆ ಪರಿಹಾರ ಕೊಡಲಿ ಎಂದು ರೈತ ಹಸನಸಾಬ ಮೈದೂರ ಹೇಳಿದರು.