ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಅರೇಹಳ್ಳಿ ಹೋಬಳಿಯ ಸುತ್ತಮುತ್ತ ಕಳೆದ ಐದಾರು ತಿಂಗಳಿಂದ ಕಣ್ಮರೆಯಾಗಿದ್ದ ಕಾಡಾನೆಗಳ ಹಿಂಡು ಮತ್ತೆ ಪ್ರತ್ಯಕ್ಷವಾಗಿದ್ದು, ರೈತರು ಹಾಗೂ ಕೂಲಿ ಕಾರ್ಮಿಕರು ಹಾಗೂ ಗ್ರಾಮಸ್ಥರಲ್ಲಿ ಮತ್ತೆ ಆತಂಕ ಶುರುವಾಗಿದೆ.ತಾಲೂಕಿನ ಅರೇಹಳ್ಳಿ ಹೋಬಳಿಯ ಲಿಂಗಾಪುರ, ಉದೇವಾರ, ಹುಲ್ಲೇಮಕ್ಕಿ, ಕಡೆಗರ್ಜೆ, ಗುಡ್‌ಪೇಟೆ ಎಸ್ಟೇಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಐದಾರು ತಿಂಗಳಿಂದ ಕಾಣೆಯಾಗಿದ್ದ ಕಾಡಾನೆಗಳ ಹಿಂಡು ಮತ್ತೆ ಪ್ರತ್ಯಕ್ಷವಾಗಿದ್ದು, ರೈತರು ಹಾಗೂ ಕೂಲಿ ಕಾರ್ಮಿಕರಲ್ಲಿ ಆತಂಕ ಮೂಡಿಸಿದೆ.

ಹಿಂದೆ ಕಾಡಾನೆಗಳ ಹಾವಳಿಯಿಂದ ಬೇಸತ್ತ ರೈತರು ತಮ್ಮ ತೋಟಗಳಿಗೆ ಸೋಲಾರ್‌ ವಿದ್ಯುತ್ ಬೇಲಿಗಳನ್ನು ಅಳವಡಿಸಿಕೊಂಡ ಬಳಿಕ ಆನೆಗಳು ಬಿಕ್ಕೋಡು, ಚೀಕನಹಳ್ಳಿ ಹಾಗೂ ಮೂಡಿಗೆರೆ ಭಾಗಗಳತ್ತ ತೆರಳಿದ್ದವು. ಆದರೆ ಕಳೆದ ಒಂದು ವಾರದಿಂದ ಸುಮಾರು 20ಕ್ಕೂ ಹೆಚ್ಚು ಕಾಡಾನೆಗಳ ಗುಂಪು ಮತ್ತೆ ಈ ಭಾಗದಲ್ಲಿ ಕಾಣಿಸಿಕೊಂಡಿದ್ದು, ಮತ್ತೆ ಇನ್ನೇನು ಸಮಸ್ಯೆ ಕಾಡಲಿದೆ ಎಂಬ ಚಿಂತೆ ಎದುರಾಗಿದೆ.

ಆರಂಭದಲ್ಲಿ ಸೋಲಾರ್ ಬೇಲಿಯನ್ನು ದಾಟಲು ಹಿಂದೇಟು ಹಾಕುತ್ತಿದ್ದ ಆನೆಗಳು ಈಗ ಹೊಸ ತಂತ್ರಗಳನ್ನು ಅನುಸರಿಸುತ್ತಿವೆ. ತಂತಿಗಳ ಮೇಲೆ ಒಣಗಿದ ಮರಗಳು ಅಥವಾ ಕಾಫಿ ಗಿಡಗಳನ್ನು ಕೆಡವಿ ವಿದ್ಯುತ್ ಬೇಲಿಯನ್ನು ದಾಟುತ್ತಿರುವ ದೃಶ್ಯಗಳು ಸ್ಥಳೀಯರ ಮೊಬೈಲ್‌ಗಳಲ್ಲಿ ಸೆರೆಯಾಗಿವೆ. ಕೆಲವು ಆನೆಗಳು ಮೊದಲು ತಂತಿಯಲ್ಲಿ ವಿದ್ಯುತ್ ಹರಿಯುತ್ತಿದೆಯೇ ಎಂದು ಪರಿಶೀಲಿಸಿ ಬಳಿಕ ಬೇಲಿಯನ್ನು ದಾಟುತ್ತಿರುವುದು ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.ಇತ್ತೀಚಿನ ದಿನಗಳಲ್ಲಿ ಆನೆಗಳು ತಮಗೆದುರಾಗುವ ಸವಾಲುಗಳನ್ನು ಹೇಗೆ ಮೆಟ್ಟಿ ನಿಲ್ಲುತ್ತಿವೆ ಎಂಬುದಕ್ಕೆ ಕೆಲ ಘಟನೆಯೇ ಸಾಕ್ಷಿಯಾಗಿವೆ. ವಿದ್ಯುತ್ ಬೇಲಿಯನ್ನು ದಾಟಲು ಕಾಡಾನೆಗಳು ಕಂಡುಕೊಳ್ಳುವ ಕೆಲವು ರೋಮಾಂಚಕ ಮತ್ತು ಚಾಣಾಕ್ಷತನ ಬಳಸಿ ನಾಡಿಗೆ ಬರುತ್ತವೆ. ಇದು ಅಂತಿಮವಾಗಿ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷಕ್ಕೆ ಕಾರಣವಾಗುತ್ತದೆ.

ಕಷ್ಟಪಟ್ಟು ಬೆಳೆದ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ದಿನದಿಂದ ದಿನಕ್ಕೆ ಕಷ್ಟವಾಗುತ್ತಿದ್ದು, ಅರಣ್ಯ ಇಲಾಖೆ ಶೀಘ್ರ ಕ್ರಮ ಕೈಗೊಂಡು ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕೆಂದು ರೈತರು ಒತ್ತಾಯಿಸಿದ್ದಾರೆ.