ಸಾರಾಂಶ
ಹೆಬ್ಬಳ್ಳ ಗ್ರಾಮದ ಬಳಿ ಮತ್ತು ಟೈಗರ್ ಬ್ಲಾಕ್ ಬಳಿ ಹುಲಿ ಇರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆ ಎರಡು ಕಡೆ ಒಂದೊಂದು ದಸರಾ ಆನೆಗಳ ಸಹಾಯದಿಂದ ಕಾರ್ಯಾಚಣೆ ಆರಂಭಿಸಿದರು
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಪಟ್ಟಣದ ಹೆಬ್ಬಳ್ಳ ಸ್ಟೇಡಿಯಂ ಬಡಾವಣೆಯ ಹಿಂಭಾಗ ಹುಲಿ ಕಾಣಿಸಿಕೊಂಡ ಹಿನ್ನೆಲೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದ್ದಾರೆ.ನಾಗಮ್ಮ ಬಸವರಾಜು ಅವರಿಗೆ ಸೇರಿದ ಜಮೀನಿನಲ್ಲಿ ಜಮೀನನ್ನು ನೋಡಿಕೊಳ್ಳುವ ಚಂದ್ರು ಅವರಿಗೆ ಹುಲಿ ದಾಳಿ ಮಾಡಲು ಮುಂದಾಗಿದೆ.
ತಂತಿಬೇಲಿ ಇದ್ದ ಹಿನ್ನೆಲೆ ಆತ ಹುಲಿ ದಾಳಿಯಿಂದ ಬಚಾವಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎರಡು ಆನೆಗಳ ಮೂಲಕ ಕಾರ್ಯಾಚರಣೆ ಆರಂಭಿಸಿದ್ದಾರೆ. ದಸರಾ ಆನೆಗಳಾದ ಬಳ್ಳೆ ಆನೆ ಶಿಬಿರಕ್ಕೆ ನೂತನವಾಗಿ ಬಂದಿರುವ ಮಹೇಂದ್ರ ಮತ್ತು ಭೀಮ ಆನೆಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. 50 ಕ್ಕೂ ಹೆಚ್ಚಿನ ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.ಎರಡು ಕಡೆ ಕಾರ್ಯಾಚರಣೆ ಆರಂಭ:
ಪಟ್ಟಣದ ಹೆಬ್ಬಳ್ಳ ಗ್ರಾಮದ ಬಳಿ ಮತ್ತು ಟೈಗರ್ ಬ್ಲಾಕ್ ಬಳಿ ಹುಲಿ ಇರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆ ಎರಡು ಕಡೆ ಒಂದೊಂದು ದಸರಾ ಆನೆಗಳ ಸಹಾಯದಿಂದ ಕಾರ್ಯಾಚಣೆ ಆರಂಭಿಸಿದರು. ನಂತರ ಹೆಬ್ಬಳ್ಳ ಸಮೀಪದ ದಯಾನಂದ ಎಂಬ ರೈತರ ಜಮೀನಿನ ಸಮೀಪ ಹುಲಿ ಕಂಡು ತಕ್ಷಣ ವಿಡಿಯೋವನ್ನು ಮಾಡಿ ಅರಣ್ಯ ಇಲಾಖೆಗೆ ಕಳುಹಿಸಿದರು. ನಂತರ ಟೈಗರ್ ಬ್ಲಾಕ್ ನಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ ಆನೆಯನ್ನು ಹೆಬ್ಬಳ್ಳಕ್ಕೆ ಕರೆಸಿಕೊಂಡು ಎರಡು ಆನೆಗಳು, ನುರಿತ ವೈದ್ಯರು ಹಾಗೂ ನುರಿತ ಅರವಳಿಕೆ ತಜ್ಞರ ಮೂಲಕ ಕಾರ್ಯಾಚರಣೆ ಆರಂಭಿಸಿದರು.ಆನೆಗಳ ಮೂಲಕ ಕಾರ್ಯಾಚರಣೆ ಆರಂಭವಾದ ಒಂದು ಗಂಟೆಯ ಬಳಿಕ ಹುಲಿ ಕಾಣಿಸಿಕೊಂಡಿದೆ. ಈ ವೇಳೆ ಅರವಳಿಕೆ ನೀಡಲು ಹುಲಿ ದೂರವಿದ್ದ ಕಾರಣ ಅರವಳಿಕೆ ನೀಡಲು ಸಾಧ್ಯವಾಗಿಲಿಲ್ಲ.
ಹುಲಿಯ ಹೆಜ್ಜೆಯ ಜಾಡನ್ನಿಡಿದು ಕಾರ್ಯಾಚರಣೆ ಮುಂದುವರಿದಿದೆ.ಬೆಳೆ ಹಾನಿ:
ಹುಲಿ ಕಾಣಿಸಿಕೊಂಡು ಕಾರ್ಯಾಚರಣೆ ಆರಂಭಿಸಿದ ಸುದ್ದಿ ಹರಡುತ್ತಿದ್ದಂತೆ, ಸ್ಥಳಕ್ಕೆ ಸಾವಿರಾರು ಮಂದಿ ಜಮಾಯಿಸಿದ್ದರು. ಇದರಿಂದ ಜಮೀನುಗಳಲ್ಲಿ ಹಿಂಗಾರು ಬೆಳೆಗೆ ಬಿತ್ತನೆ ಮಾಡಿದ್ದ ರಾಗಿ, ಜೋಳ ಮತ್ತು ಭತ್ತದ ಫಸಲು ಹಾನಿಯಾಗಿದೆ.ಮರಿಯೊಂದಿಗಿವೆ ಹುಲಿ:
ಹುಲಿಯು ಎರಡು ಮರಿಗಳೊಂದಿಗೆ ಸಂಚರಿಸುವುದನ್ನು ಹೆಬ್ಬಳ್ಳ, ಶಾಂತಿಪುರ, ಎಚ್.ಡಿ. ಕೋಟೆ ಪಟ್ಟಣ ಸೇರಿದಂತೆ ಹಲವು ಮಂದಿ ನೋಡಿದ್ದು, ಕಾರ್ಯಾಚರಣೆಯ ವೇಳೆಯಲ್ಲಿಯೂ ಸಹ ಮರಿಗಳು ಮತ್ತು ಹುಲಿ ಚೆಲ್ಲಾಪಿಲ್ಲಿಯಾಗಿ ಚಲಿಸುವುದನ್ನು ಅರಣ್ಯ ಸಿಬ್ಬಂದಿ ಮತ್ತು ಸಾರ್ವಜನಿಕರು ವೀಕ್ಷಿಸಿದ್ದು, ತಮ್ಮ ತಮ್ಮ ಮೊಬೈಲುಗಳಲ್ಲಿ ಸೆರೆ ಹಿಡಿದಿದ್ದಾರೆ.