ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರನಗರದ ೧೪ ಕೇಂದ್ರಗಳಲ್ಲಿ ಜೂ.೩೦ ರಂದು ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಯಲಿದ್ದು, ಯಾವುದೇ ಅವ್ಯವಹಾರ,ಗೊಂದಲಗಳಿಗೆ ಅವಕಾಶವಿಲ್ಲದಂತೆ ಎಲ್ಲಾ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಟಿಇಟಿ ಪರೀಕ್ಷಾ ಪೂರ್ವಸಿದ್ದತಾ ಸಭೆಯಲ್ಲಿ ಮಾತನಾಡಿದರು. ಕೋಲಾರದ ಒಟ್ಟು ೧೪ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಬೆಳಗಿನ ಅಧಿವೇಶನ ೯.೩೦ರಿಂದ ೧೨ರವರೆಗೂ ಪತ್ರಿಕೆ-೧ರ ಪರೀಕ್ಷೆ ೯ ಕೇಂದ್ರಗಳಲ್ಲಿ ಹಾಗೂ ಮಧ್ಯಾಹ್ನ ೨ ರಿಂದ ೪.೩೦ ರವರೆಗೂ ಪತ್ರಿಕೆ-೨ರ ಪರೀಕ್ಷೆ ೧೪ ಕೇಂದ್ರಗಳಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕೆ-೧ ಬೆಳಗ್ಗೆ ೯-೩೦ ರಿಂದ ೧೨ ಗಂಟೆವರೆಗೂ ೯ ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆ ನಡೆಯಲಿದ್ದು, ಒಟ್ಟು ೨೧೪೨ ಅಭ್ಯರ್ಥಿಗಳು ನೋಂದಣಿ ಮಾಡಿಸಿದ್ದಾರೆ. ಪತ್ರಿಕೆ-೨ರ ಪರೀಕ್ಷೆ ಮಧ್ಯಾಹ್ನ ೨ ರಿಂದ ೪-೩೦ರವರೆಗೂ ನಡೆಯಲಿದ್ದು, ೩೩೯೪ ಮಂದಿ ನೋಂದಣಿ ಮಾಡಿಸಿದ್ದಾರೆ ಎಂದು ತಿಳಿಸಿದರು.೧೪೪ನೇ ಸೆಕ್ಷನ್ ನಿಷೇದಾಜ್ಞೆ ಜಾರಿ:ಯಾವುದೇ ಸಮಸ್ಯೆ ಎದುರಾಗದಂತೆ ಪರೀಕ್ಷಾ ಕೇಂದ್ರಗಳ ಸುತ್ತ ೨೦೦ ಮೀಟರ್ ವ್ಯಾಪ್ತಿಯಲ್ಲಿ ೧೪೪ನೇ ಸೆಕ್ಷನ್ ಅನ್ವಯ ನಿಷೇದಾಜ್ಞೆ ಜಾರಿ ಮಾಡಿದ್ದು, ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಈ ೨೦೦ ಮೀ ವ್ಯಾಪ್ತಿಯಲ್ಲಿನ ಎಲ್ಲಾ ಜೆರಾಕ್ಸ್ ಅಂಗಡಿಗಳನ್ನು ಬೆಳಗ್ಗೆ ೮.೩೦ ರಿಂದ ಸಂಜೆ ೪.೩೦ ರವರೆಗೂ ಮುಚ್ಚಲು ಸೂಚಿಸಲಾಗಿದೆ ಎಂದು ತಿಳಿಸಿದರು.ನಗರದಲ್ಲೇ ೧೪ ಕೇಂದ್ರಗಳುಡಿಡಿಪಿಐ ಕೃಷ್ಣಮೂರ್ತಿ ಸಭೆಗೆ ಮಾಹಿತಿ ನೀಡಿ, ಕಚೇರಿಯಲ್ಲಿ ಸಿಸಿ ಕ್ಯಾಮರಾ ವೀಡಿಯೋ ಕವರೇಜ್‌ಅನ್ನು ಪ್ರತಿ ಕೇಂದ್ರದಲ್ಲೂ ಮಾಡಲಾಗುತ್ತಿದೆ. ನಗರದಲ್ಲೇ ಎಲ್ಲಾ ೧೪ ಕೇಂದ್ರಗಳಿದ್ದು, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ೨ ಕೇಂದ್ರಗಳು, ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ ೨ ಕೇಂದ್ರಗಳು, ಚಿನ್ಮಯ ವಿದ್ಯಾಲಯದಲ್ಲಿ ೨ ಕೇಂದ್ರ, ಮಹಿಳಾ ಸಮಾಜದಲ್ಲಿ ೨ ಹಾಗೂ ಸುಭಾಷ್ ಶಾಲೆಯಲ್ಲಿ ೨ ಕೇಂದ್ರಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಪರೀಕ್ಷಾರ್ಥಿಗಳಿಗೆ ಹಲವು ಸೂಚನೆಪರೀಕ್ಷೆಗೆ ಬರುವ ಅಭ್ಯರ್ಥಿಗಳು ಕಡ್ಡಾಯವಾಗಿ ೩ ಇತ್ತೀಚಿನ ಭಾವಚಿತ್ರ ಹಾಗೂ ಪ್ರವೇಶ ಪತ್ರದೊಂದಿಗೆ ಒಂದು ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು, ಪರಿಕ್ಷಾ ಕೇಂದ್ರದಲ್ಲಿ ಡಿಜಿಟಲ್ ವಾಚ್, ಮೊಬೈಲ್ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಟಿಇಟಿ ಪರೀಕ್ಷಾ ನೋಡಲ್ ಅಧಿಕಾರಿ ಕೃಷ್ಣಪ್ಪ, ನಿಕಟಪೂರ್ವ ಎಡಿಸಿ ಡಾ.ಶಂಕರ್ ವಾಣಿಕ್ಯಾಳ್, ಜಿಲ್ಲಾ ಖಜಾನಾಧಿಕಾರಿ ಮಹೇಂದ್ರ, ಡಿಹೆಚ್‌ಒ ಡಾ.ಜಗದೀಶ್, ಬಿಇಒಗಳಾದ ಕನ್ನಯ್ಯ,ಮತ್ತಿತರರು ಇದ್ದರು.