ಹೊಲಿಗೆ ಯಂತ್ರಕ್ಕಾಗಿ ಅರ್ಹ ಫಲಾನುಭವಿಗಳ ಅಲೆದಾಟ

| Published : Oct 06 2025, 01:01 AM IST

ಸಾರಾಂಶ

ಜಾರಿಗೊಂಡು ಎರಡು ವರ್ಷ ಕಳೆದರೂ ತರಬೇತಿ ಪಡೆದ ಅರ್ಹ ಮಹಿಳಾ ಫಲಾನುಭವಿಗಳಿಗೆ ಹೊಲಿಗೆಯಂತ್ರ ವಿತರಣೆಯಾಗಿಲ್ಲ

ಪಾಲಾಕ್ಷ ಬಿ. ತಿಪ್ಪಳ್ಳಿ ಯಲಬುರ್ಗಾ

ಗ್ರಾಮೀಣ ಪ್ರದೇಶದ ಬಡ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಅನುಕೂಲ ಕಲ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಪಿಎಂ ವಿಶ್ವಕರ್ಮ ಯೋಜನೆಯಡಿ ಟೈಲರಿಂಗ್ ತರಬೇತಿ ಪಡೆದ ಅರ್ಹ ಮಹಿಳಾ ಫಲಾನುಭವಿಗಳಿಗೆ ಎರಡು ವರ್ಷ ಕಳೆದರೂ ಸೌಲಭ್ಯ ವಿತರಣೆಯಾಗಿಲ್ಲ.

ಕೇಂದ್ರ ಸರ್ಕಾರದ ಮಹತ್ವಪೂರ್ಣ ಯೋಜನೆಗಳಲ್ಲಿ ಒಂದಾದ ಪಿಎಂ ವಿಶ್ವಕರ್ಮ ಯೋಜನೆಯು ನಾನಾ ವೃತ್ತಿ ಆಧಾರಿತ ಕುಶಲಕರ್ಮಿಗಳಿಗೆ ತರಬೇತಿಯೊಂದಿಗೆ ಆರ್ಥಿಕ ನೆರವು ನೀಡುವ ಯೋಜನೆಯಾಗಿದೆ. ಇದು ಜಾರಿಗೊಂಡು ಎರಡು ವರ್ಷ ಕಳೆದರೂ ತರಬೇತಿ ಪಡೆದ ಅರ್ಹ ಮಹಿಳಾ ಫಲಾನುಭವಿಗಳಿಗೆ ಹೊಲಿಗೆಯಂತ್ರ ವಿತರಣೆಯಾಗಿಲ್ಲ. ಇದು ಭಾರತ ಸರ್ಕಾರದ ಕೇಂದ್ರ ವಲಯದ ಯೋಜನೆಯಾಗಿದ್ದು, ಕುಶಲಕರ್ಮಿಗಳು ಮತ್ತು ಕರಕುಶಲಕರ್ಮಿಗಳಿಗೆ ಸಮಗ್ರ ಬೆಂಬಲ ನೀಡಲು, ಹಣಕಾಸು ನೆರವು, ಕೌಶಲ್ಯ ತರಬೇತಿ, ಆಧುನಿಕ ಉಪಕರಣಗಳು ಮತ್ತು ಡಿಜಿಟಲ್ ವಹಿವಾಟುಗಳಿಗೆ ಪ್ರೋತ್ಸಾಹ ಹಾಗೂ ಮಾರುಕಟ್ಟೆ ಸಂಪರ್ಕ ಒದಗಿಸುವ ಉದ್ದೇಶ ರೂಪಿಸಲಾಗಿದ್ದರೂ ಪರಿಣಾಮಕಾರಿ ಅನುಷ್ಠಾನಕ್ಕೆ ತೀವ್ರ ಹಿನ್ನಡೆಯಾಗಿದೆ.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಸೇರಿದಂತೆ ಕೇಂದ್ರದ ಇತರ ಹಣಕಾಸು ಸಚಿವಾಲಯಗಳು ಪಿಎಂ ವಿಶ್ವಕರ್ಮ ಯೋಜನೆ ಅನುಷ್ಠಾನದ ಜವಾಬ್ದಾರಿ ಹೊತ್ತಿವೆ. ತರಬೇತಿ ನೀಡುವ ಹೊಣೆಗಾರಿಕೆ ಸರ್ಕಾರಿ ಸಂಸ್ಥೆಗಳ ಜತೆಯಲ್ಲಿ ಖಾಸಗಿ ಸಂಸ್ಥೆಗಳಿಗೂ ವಹಿಸಲಾಗಿತ್ತು. ಕೇಂದ್ರ ಸರ್ಕಾರದಿಂದ ಅನುಮತಿ ಪಡೆದ ಸಂಸ್ಥೆಗಳು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಅರ್ಹ ಮಹಿಳಾ ಫಲಾನಭವಿಗಳಿಗೆ ಹೊಲಿಗೆಯಂತ್ರ ತರಬೇತಿ ನೀಡಿವೆ. ತರಬೇತಿ ಪಡೆದ ಮಹಿಳೆಯರಿಗೆ ಇದುವರೆಗೂ ಹೊಲಿಗೆ ಯಂತ್ರ ನೀಡಿಲ್ಲ. ಕಾರಣ ಫಲಾನುಭವಿಗಳು ಯಾವ ಇಲಾಖೆಯನ್ನು ಸಂಪರ್ಕಿಸಬೇಕು ಎನ್ನುವುದರ ಸೂಕ್ತ ಮಾಹಿತಿ ಇಲ್ಲದ ಕಾರಣ ನಿತ್ಯ ತಾಲೂಕಿನ ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.

ತಾಲೂಕಿನ ಹಲವಾರು ಮಹಿಳೆಯರು ಪಿಎಂ ವಿಶ್ವಕರ್ಮ ಯೋಜನೆಯಡಿ ಹೊಲಿಗೆಯಂತ್ರದ ತರಬೇತಿ ಪಡೆದಿದ್ದಾರೆ. ಈ ಯೋಜನೆಯ ತರಬೇತಿ ಮುಗಿದ ಬಳಿಕ ಪ್ರಮಾಣ ಪತ್ರ, ಗುರುತಿನ ಕಾರ್ಡ್ ನೀಡಿದ್ದು ಬಿಟ್ಟರೆ, ಬೇರೆ ಯಾವುದೇ ಸೌಲಭ್ಯ ಇದುವರೆಗೂ ಕೈತಲುಪಿಲ್ಲ. ಹೀಗಾಗಿ ಮಹಿಳಾ ಫಲಾನುಭವಿಗಳು ಭರವಸೆಯಲ್ಲಿ ಕಾಲ ಕಳೆಯುವಂತಾಗಿದೆ. ಸೌಲಭ್ಯಕ್ಕಾಗಿ ಕಚೇರಿಗೆ ಅಲೆದರೂ ಯಾರಿಂದಲೂ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಅಲ್ಲದೆ ಹೊಲಿಗೆ ಯಂತ್ರದ ಬದಲಾಗಿ ಫಲಾನುಭವಿಗಳೆ ಹೊಲಿಗೆಯಂತ್ರ ಕೊಂಡುಕೊಳ್ಳಲು ಖಾತೆಗೆ ₹೧೫ ಸಾವಿರ ಹಾಕುತ್ತೇವೆ ಎಂದು ಹೇಳಿದ್ದರು. ಪ್ರಮಾಣ ಪತ್ರಕ್ಕೆ ತಲಾ ಒಬ್ಬರಿಂದ ₹೩೦೦ ಪಡೆದಿದ್ದಾರೆ ಎಂದು ಫಲಾನುಭವಿಗಳಾದ ಮಾಯವ್ವ, ರೋಣಮ್ಮ, ಕೆಂಚಮ್ಮ, ರೈನವ್ವ, ಕನಕವ್ವ, ಸಿದ್ದವ್ವ, ಲಕ್ಷ್ಮವ್ವ, ಮಂಜಮ್ಮ ತಿಳಿಸಿದ್ದಾರೆ.