ಬೆಳೆ ವಿಮೆ ಪರಿಹಾರದಲ್ಲಿ ಆಗಿರುವ ತಾರತಮ್ಯ ನಿವಾರಿಸಿ: ರೈತ ಸಂಘ ಮನವಿ

| Published : May 21 2024, 12:32 AM IST / Updated: May 21 2024, 12:33 AM IST

ಸಾರಾಂಶ

ಬೆಳೆ ವಿಮೆ ಪರಿಹಾರ ಹಾಗೂ ಇನ್ ಪುಟ್ ಸಬ್ಸಿಡಿ ನೀಡಿಕೆಯಲ್ಲಿ ಆಗಿರುವ ತಾರತಮ್ಯ ನಿವಾರಿಸುವಂತೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಬೆಳೆ ವಿಮೆ ಮತ್ತು ಬೆಳೆ ನಷ್ಟ ಪರಿಹಾರದಲ್ಲಿ ಆಗಿರುವ ತಾರತಮ್ಯ ನಿವಾರಣೆ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲೆಯ ರೈತರಿಗೆ ಈಗಾಗಲೇ ಬೆಳೆ ವಿಮೆ ಹಾಗೂ ಇನ್ ಪುಟ್ ಸಬ್ಸಿಡಿ ವಿತರಿಸಲಾಗಿದೆ. ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು ಶೇ.30ರಷ್ಟು ಬೆಳೆ ವಿಮೆ ರೈತರ ಖಾತೆ ಜಮಾ ಆಗಿಲ್ಲ ಮತ್ತು ಇನ್‌ಪುಟ್ ಸಬ್ಸಿಡಿ ವಿತರಣೆಯಲ್ಲಿಯೂ ಅನ್ಯಾಯವಾಗಿದೆ. ಬೆಳೆ ವಿಮೆಯನ್ನು ಕೂಡಲೇ ಬಿಡುಗಡೆ ಮಾಡಿ ರೈತ ಖಾತೆಗೆ ಹಣ ವರ್ಗಾವಣೆ ಮಾಡಬೇಕು. ಬೆಳೆ ನಷ್ಟ ಪರಿಹಾರವು ಮಳೆಯಾಶ್ರಿತ ಬೆಳೆಗಳಾದ ಶೇಂಗಾ ಮತ್ತು ಮೆಕ್ಕೆಜೋಳಕ್ಕೆ ಮಾತ್ರ ನೀಡಿರುತ್ತಾರೆ. ಇನ್ನುಳಿದ ಇತರೆ ಬೆಳೆ ಗಳಿಗೆ ಬೆಳೆ ನಷ್ಟ ಪರಿಹಾರ ನೀಡಿಲ್ಲ.

ಪಹಣಿಯಲ್ಲಿ ಕೊಳವೆ ಬಾವಿಯೆಂದು ನಮೂದಾಗಿದ್ದಾರೆ ಅಂತಹ ರೈತರನ್ನು ಬೆಳೆ ನಷ್ಟ ಪರಿಹಾರ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಸರ್ಕಾರವು ಮಳೆಯಾಶ್ರಿತ ಬೆಳೆಗೆ ಹೆಕ್ಟೇರ್ ಗೆ 8500 ರು. ಮತ್ತು ನೀರಾವರಿಗೆ ರು. 17000, ದೀರ್ಘಾವಧಿ ಬೆಳೆಗೆ ರು.22000 ಎಂದು ಘೋಷಣೆ ಮಾಡಿ ನೀರಾವರಿ ಹಾಗೂ ದೀರ್ಘಾವಧಿ ಬೆಳೆ ಹೊಂದಿದ ರೈತರಿಗೆ ಪರಿಹಾರದ ಹಣವನ್ನು ಬಿಡುಗಡೆ ಮಾಡಿಲ್ಲ. ಕೂಡಲೇ ಪರಿಹಾರ ಬಿಡುಗಡೆ ಮಾಡಿ ರೈತರ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

2023-24 ರಲ್ಲಿ ರೈತರು ತೀವ್ರ ಬರಗಾಲ ಅನುಭವಿಸಿದ್ದು, 2024ರ ಮಂಗಾರು ಮಳೆ ಪ್ರಾರಂಭವಾಗಿದೆ. ರೈತರಿಗೆ ಬಿತ್ತನೆ ಮಾಡಲು ಉಚಿತವಾಗಿ ರಸಗೊಬ್ಬರ ಹಾಗೂ ಬಿತ್ತನೆ ಬೀಜ ವಿತರಿಸಬೇಕು. ಬೆಳೆ ವಿಮೆ ಹಾಗೂ ಬೆಳೆ ನಷ್ಟ ಪರಿಹಾರ ಹಣ ಹಾಗೂ ಇತರೆ ವೃದ್ಯಾಪ್ಯ ವೇತನ, ವಿಧವಾ ವೇತನಗಳನ್ನು ಸಾಲಕ್ಕೆ ಜಮಾ ಮಾಡಬಾರದೆಂದು ಆದೇಶವಿದ್ದರೂ ಕೂಡ, ಬ್ಯಾಂಕ್ ಮ್ಯಾನೇಜರ್‌ಗಳು ಸರ್ಕಾರದಿಂದ ಬಂದ ಎಲ್ಲಾ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಕೂಡಲೇ ಲೀಡ್ ಬ್ಯಾಂಕ್ ಮ್ಯಾನೇಜರ್‌ಗೆ ಸೂಚನೆ ನೀಡಿ ಸಹಾಯಧನವನ್ನು ರೈತರ ಸಾಲಕ್ಕೆ ಜಮಾ ಮಾಡಿಕೊಳ್ಳಬಾರದೆಂದು ಜಿಲ್ಲಾಧಿ ಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ತಾಲೂಕು ಅಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ, ಚೇತನ ಯಳನಾಡು, ಉಪಾಧ್ಯಕ್ಷರಾದ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ, ರಂಗಸ್ವಾಮಿ, ಪ್ರಭು ಇಸಾಮುದ್ರ, ಕಾಂತರಾಜ್ ಉಪಸ್ಥಿತರಿದ್ದರು.