ತೊಡಕು ನಿವಾರಿಸಿ ಗಾಣಿಗ ಸಮಾಜಕ್ಕೆ ಮೀಸಲು ಸೌಲಭ್ಯ ಕಲ್ಪಿಸಿ: ಶ್ರೀ

| Published : Feb 12 2024, 01:35 AM IST

ತೊಡಕು ನಿವಾರಿಸಿ ಗಾಣಿಗ ಸಮಾಜಕ್ಕೆ ಮೀಸಲು ಸೌಲಭ್ಯ ಕಲ್ಪಿಸಿ: ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗದ ನೀಲಕಂಠೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಗಾಣಿಗ ಸಮಾಜದ ಸಾಧಕರ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ತೊಡಕುಗಳ ನಿವಾರಿಸಿ ಗಾಣಿಕ ಸಮಾಜಕ್ಕೆ ಮೀಸಲಾತಿ ಸೌಲಭ್ಯ ಕಲ್ಪಿಸಬೇಕಿದೆ ಎಂದು ವಿಜಯಪುರ ವನಶ್ರೀ ಗಾಣಿಗ ಸಂಸ್ಥಾನ ಮಠದ ಜಯಬಸವಕುಮಾರ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಅಖಿಲ ಭಾರತ ಗಾಣಿಗ ಸಮಾಜ, ಚಿತ್ರದುರ್ಗ ತಾಲೂಕು ಗಾಣಿಗ ಸಮಾಜ ಹಾಗೂ ಗಾಣಿಗ ಮಹಿಳಾ ಸಮಾಜ ಸಂಯುಕ್ತಾಶ್ರಯದಲ್ಲಿ ಚಿತ್ರದುರ್ಗ ನಗರದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸಾಧಕರ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ಲಿಂಗಾಯತ ಸಮಾಜದಲ್ಲಿ ವಿವಿಧ ರೀತಿಯ ಉಪ ಸಮಾಜಗಳಿವೆ. ಇದರಲ್ಲೂ ಬಡವರಿದ್ದು ಅವರ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಶೈಕ್ಷಣಿಕವಾಗಿಯೂ ಹಿಂದುಳಿದಿದ್ದಾರೆ. ಎಲ್ಲರಂತೆ ಮುಖ್ಯವಾಹಿನಿಗೆ ಬರಬೇಕಾದ ಅಗತ್ಯವಿದ್ದು ಮೀಸಲು ಸೌಲಭ್ಯ ನಿರೀಕ್ಷಿಸುತ್ತಿದ್ದಾರೆ. ಚರಿತ್ರೆಯನ್ನು ಬೇರೆಯವರಿಂದ ಬರೆಸಬಹುದು ಆದರೆ ಚಾರಿತ್ರ್ಯವನ್ನು ನಾವೇ ಬರೆಯಬೇಕಿದೆ. ಗಾಣಿಗ ಸಮಾಜಕ್ಕೆ ಚರಿತ್ರೆ ಹಾಗೂ ಚಾರಿತ್ರ್ಯ ಎರಡು ಇದೆ. ನಮ್ಮದು ಕಾಯಕ ಸಮಾಜ. ಅನುಭವ ಮಂಟಪದಲ್ಲಿ ಎಲ್ಲಾ ಶರಣರು ತಮ್ಮ ಪಾಲಿನ ಕಾಯಕ ಮುಗಿಸಿ ತದ ನಂತರ ಆದ ಅನುಭವನ್ನು ಹಂಚಿಕೊಳ್ಳುತ್ತಿದ್ದರು ಎಂದರು.

ಹಿಂದಿನ ಕಾಲದಲ್ಲಿ ವೃತ್ತಿಗಳಿದ್ದವು. ಅದರ ಮೂಲಕ ಜನತೆಯನ್ನು ಗುರುತಿಸಲಾಗುತ್ತಿತು. ಆದರೆ ಈಗ ಅದೇ ವೃತ್ತಿಗಳು ಜಾತಿಗಳಾಗಿವೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವುದು ಅನಿವಾರ್ಯವಾಗಿದೆ. ಎಲ್ಲಿಯೂ ನಮ್ಮ ಜಾತಿ ಹೇಳಿಕೊಂಡು ವ್ಯವಹಾರ ಮಾಡಿಲ್ಲ ಸಂಬಂಧ ಬೆಳಸಿಲ್ಲ. ಇದರ ಬದಲಾಗಿ ಗಾಣದ ಎತ್ತಿನಂತೆ ತಿರುಗಾಡಿ ದೇವರ ಮನೆ ದೀಪಕ್ಕೂ ಊಟಕ್ಕೂ ಸಹಾ ಎಣ್ಣೆ ನೀಡಲಾಗುತ್ತಿದೆ. ನಮ್ಮ ಸಮಾಜದವರ ತಾವು ಬೆಳೆಯುವುದಕ್ಕಿಂತ ಬೇರೆಯವರನ್ನು ಹೆಚ್ಚಾಗಿ ಬೆಳೆಸುತ್ತಾರೆ. ಗಾಣಿಗ ಸಮಾಜಕ್ಕೆ ಮೀಸಲಾತಿ ನೀಡಲು ಇರುವ ತಾತ್ವಿಕ ತೊಡಕನ್ನು ಸರ್ಕಾರ ನಿವಾರಣೆ ಮಾಡಬೇಕು. ಈಗ ಜಾತಿ ಸಮೀಕ್ಷೆ ನಡೆದಿದ್ದು ವರದಿ ತರಿಸಿಕೊಂಡು ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕೆದು ಶ್ರೀಗಳು ವಿನಂತಿಸಿದರು.

ವೀರಶೈವ ಸಮಾಜದ ಉಪಾಧ್ಯಕ್ಷ ಕೆ.ಸಿ.ನಾಗರಾಜ್ ಮಾತನಾಡಿ, ಸಮಾಜದ ಏಳ್ಗೆಗಾಗಿ ಎಲ್ಲರು ಒಗ್ಗಟ್ಟಾಗಬೇಕಿದೆ. ಸಮಾಜಕ್ಕೆ ಅಗತ್ಯವಾಗಿ ಕಟ್ಟಡವಾಗಬೇಕಿದೆ. ನಮ್ಮ ಸಮಾಜಕ್ಕೆ ರಾಜ್ಯದ ಬೇರೆ ಕಡೆಯಲ್ಲಿ 2ಎ ಪ್ರಮಾಣ ಪತ್ರ ನೀಡುತ್ತಿದ್ದು ಚಿತ್ರದುರ್ಗದಲ್ಲಿ ಪರಿಗಣಿಸಲಾಗುತ್ತಿಲ್ಲ. ಈ ಬಗ್ಗೆ ಸರ್ಕಾರದ ಬಳಿ ಚರ್ಚೆ ಮಾಡಬೇಕಿದೆ. ಪ್ರಮಾಣಪತ್ರ ಸಿಕ್ಕರೆ ಸಮಾಜದವರಿಗೆ ಅನುಕೂಲವಾಗುತ್ತದೆ. ಸಮಾಜದ್ದೇ ಆದ ಬ್ಯಾಂಕ್ ನಿರ್ಮಾಣಕ್ಕೆ ಎಲ್ಲರು ಮುಂದಾಗಬೇಕಿದೆ. ಇದಕ್ಕೆ ನಾನು ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಡಿ.ಎಸ್ ಸುರೇಶಬಾಬು ಮಾತನಾಡಿ, ಹೊಳಲ್ಕೆರೆ ರಸ್ತೆಯಲ್ಲಿ ಸಮಾಜದ ಜಾಗ ಇದ್ದು ಅಲ್ಲಿಯೇ ಸಮುದಾಯಭವನ ನಿರ್ಮಾಣ ಮಾಡಲು ಸಮಾಜದ ಬಾಂಧವರು ಮುಂದಾಗಬೇಕಿದೆ. ಒಗ್ಗಟಾಗಿ ಇದ್ದರೆ ಮಾತ್ರ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಿದೆ. ಶ್ರೀಗಳು ಶಿಕ್ಷಣ ಸಂಸ್ಥೆ ಪ್ರಾರಂಭಿಸುವುದರ ಮೂಲಕ ಜ್ಞಾನ ದಾಸೋಹ ಮಾಡುತ್ತಿದ್ದಾರೆ. ಇದೇ ರೀತಿ ಚಿತ್ರದುರ್ಗದಲ್ಲಿಯೂ ಶಾಲೆಗಳ ಆರಂಭಿಸಬೇಕು ಎಂದು ಮನವಿ ಮಾಡಿದರು.

ವೀರಶೈವ ಸಮಾಜದ ಕಾರ್ಯದರ್ಶಿ ಪಿ.ವಿರೇಂದ್ರಕುಮಾರ್, ನಿರ್ದೇಶಕರಾದ ಕೆ.ಸಿ.ವೀಣಾಸುರೇಶ್, ತ್ರಿವೇಣಿ ಪ್ರಸನ್ನ ಕುಮಾರ್, ಸರ್ಕಾರಿ ವಿಜ್ಞಾನ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯ ಸಿ.ಬಿ.ಶೈಲಾವಿಜಯಕುಮಾರ್, ಎಸ್.ಸಿ. ವರದಶಂಕರ್ ಹಾಗೂ ಸಾವಿತ್ರಿ ಬಾಯಿ ಪುಲೆ ಪ್ರಶಸ್ತ್ರಿ ಪುರಸ್ಕೃತ ಶಿಕ್ಷಕಿ ಲತಾರವರನ್ನು ಸಮಾಜದವತಿಯಿಂದ ಸನ್ಮಾನಿಸಲಾಯಿತು. ಗಾಣಿಗ ಮಹಿಳಾ ಸಮಾಜ ಚಿತ್ರದುರ್ಗ ತಾಲೂಕು ಅಧ್ಯಕ್ಷ ಪುಷ್ಟ ಸುರೇಶಬಾಬು ಉಪಸ್ಥಿತರಿದ್ದರು, ಶೋಭಾ ಮಂಜುನಾಥ್ ಪ್ರಾರ್ಥಿಸಿದರೆ, ಎ.ಆರ್.ತಿಪ್ಪೇಸ್ವಾಮಿ ಸ್ವಾಗತಿಸಿದರು, ಜಯಲಕ್ಷ್ಮೀ ವಂದಿಸಿದರು. ಜ್ಞಾನಮೂರ್ತಿ ಕಾರ್ಯಕ್ರಮ ನಿರೂಪಿಸಿದರು.