ಗದಗ: ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಕಳೆದ 20 ದಿನಗಳಿಂದ ಕ್ರಿಕೆಟ್‌ ಅಭಿಮಾನಿಗಳನ್ನು ರಂಜಿಸಿದ್ದ ಕೆ.ಎಚ್. ಪಾಟೀಲ ಕ್ರಿಕೆಟ್ ಲೀಗ್‌ ಸೀಜನ್‌- 2ರ ಪಂದ್ಯಾವಳಿಯಲ್ಲಿ ಶನಿವಾರ ರಾತ್ರಿ ಎಲೈಟ್‌ ಇಲೆವೆನ್‌ 7 ವಿಕೆಟ್‌ ಅಂತರದಲ್ಲಿ ಗೆಲುವು ದಾಖಲಿಸುವ ಮೂಲಕ ಚಾಂಪಿಯನ್‌ ತಂಡವಾಗಿ ಹೊರಹೊಮ್ಮಿತು. ಎದುರಾಳಿ ಸ್ಟ್ರೈಕರ್ಸ್‌ ತಂಡ ರನ್ನರ ಅಪ್‌ಗೆ ತೃಪ್ತಿಪಟ್ಟಿತು.

ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಸ್ಟ್ರೈಕರ್ಸ್‌ ತಂಡ ಮೊದಲ ವಿಕೆಟ್‌ ನಷ್ಟಕ್ಕೆ 6 ಒವರ್‌ಗಳಲ್ಲಿ 48 ರನ್‌ ಗಳಿಸಿದರೂ ನಿಗದಿತ 10 ಒವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 72 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಸ್ಟ್ರೈಕರ್ಸ್‌ ತಂಡದ ಪರವಾಗಿ ನಾಯಕ ಫಯಾಜ್‌ 18 ಎಸೆತಗಳಲ್ಲಿ 12 ರನ್‌ ಗಳಿಸಿದರೆ, ತಯ್ಯಬ್ 21 ಎಸೆತಗಳಲ್ಲಿ 5 ಫೋರ್‌ 1 ಸಿಕ್ಸರ್‌ ಮೂಲಕ 36 ರನ್‌ ಗಳಿಸಿದರು. ನಂತರ ಬಂದ ಬ್ಯಾಟ್ಸ್‌ಮನ್‌ಗಳಾದ ಅಲ್ತಾಮಾಶ್ 2, ಜಗದೀಶ 1, ಚನ್ನಪ್ಪ 4, ರಿಯಾಜ್‌ 1 ಹಾಗೂ ಆರೀಫ್‌ 2 ರನ್‌ ಗಳಿಸಿದರು.

ಎಲೈಟ್‌ ಇಲೆವೆನ್‌ ತಂಡದ ಪರವಾಗಿ ನಿಹಾಲ್‌ ಆಕಾಶ್ 2 ಒವರ್‌ಗಳ್ಲಿ 13 ರನ್‌ ನೀಡಿ 2 ವಿಕೆಟ್‌, ಶಿವು 2 ಒವರ್‌ಗಳಲ್ಲಿ ಮೇಡನ್‌ ಸಹಿತ 3 ರನ್‌ ನೀಡಿ 2 ವಿಕೆಟ್‌ ಪಡೆದು ಮಿಂಚಿದರು.

ಇದಕ್ಕುತ್ತರವಾಗಿ ಬ್ಯಾಟಿಂಗ್‌ ನಡೆಸದ ಎಲೈಟ್‌ ಇಲೆವೆನ್‌ ಆರಂಭಿಕ ಬ್ಯಾಟ್ಸ್‌ಮನ್‌ ವಿಜಯ ಬಾರಕೇರ್‌ 21 ಎಸೆತಗಳಲ್ಲಿ 3 ಫೋರ್‌ ಸಹಿತ 30 ರನ್‌ ನೀಡಿ ಅತ್ಯುತ್ತಮ ಆರಂಭ ಒದಗಿಸಿದರು. ಪ್ರೇಮ್‌ ಬಿ. ಶೂನ್ಯಕ್ಕೆ ಔಟಾದರೆ, ಬಾಲಿಂಗ್‌ನಲ್ಲಿ ಅದ್ಬುತ ಪ್ರದರ್ಶನ ನೀಡಿದ್ದ ನಿಹಾಲ್‌ ಆಕಾಶ 18 ಎಸೆತಗಳಲ್ಲಿ 3 ಫೋರ್‌, 1 ಸಿಕ್ಸರ್‌ ಸಹಿತ 27 ರನ್‌ ಗಳಿಸಿದರು. ಸಂತೋಷ ನಾಯಕ 5 ಜಗದೀಶರಡ್ಡಿ 8 ರನ್‌ ಗಳಿಸಿ ಗೆಲುವಿನ ನಗೆ ಬೀರಿದರು.


ಸ್ಟ್ರೈಕರ್ಸ್‌ ತಂಡದ ಪರವಾಗಿ ಆರೀಫ್‌ 2 ಒವರ್‌ಗಳಲ್ಲಿ 13 ರನ್‌ ನೀಡಿ 1 ವಿಕೆಟ್‌ ಪಡೆದರು. ಉಳಿದಂತೆ ಅಕ್ಷಯ ಲಮಾಣಿ ಹಾಗೂ ಅಲ್ತಾಮಾಶ ತಲಾ ಒಂದು ವಿಕೆಟ್‌ ಪಡೆದರು.

ಬ್ಯಾಟಿಂಗ್‌ ಹಾಗೂ ಬಾಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಲ್‌ರೌಂಡರ್‌ ನಿಹಾಲ್‌ ಆಕಾಶ ಪಂದ್ಯಶ್ರೇ಼ಷ್ಠ ಪ್ರಶಸ್ತಿಗೆ ಭಾಜನರಾದರು. ಸ್ಟ್ರೈಕರ್ಸ್‌ ತಂಡ ತಯ್ಯಬ್ ಉತ್ತಮ ಬ್ಯಾಟರ್‌ ಎನಿಸಿದರೆ, ಎಲೈಟ್‌ ಇಲೆವೆನ್‌ ತಂಡದ ಶಿವು ಉತ್ತಮ ಬಾಲರ್‌ ಎನಿಸಿದರು.

ನಂತರ ಪಂದ್ಯಾವಳಿ ವೀಕ್ಷಣೆಗೆ ಆಗಮಿಸಿದ್ದ ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ವಿಜೇತ ಹಾಗೂ ರನ್ನರ್‌ ಅಪ್‌ ತಂಡಗಳಿಗೆ ಟ್ರೋಫಿ ವಿತರಿಸಿದರು. ವಿಜೇತ ಎಲೈಟ್‌ ಇಲೆವೆನ್‌ ತಂಡ 1.50 ಲಕ್ಷ ರೂ. ನಗದು ಪ್ರಶಸ್ತಿಯೊಂದಿಗೆ ಟ್ರೋಫಿ ಪಡೆಯಿತು.