ಸಾರಾಂಶ
ಮಯೂರ್ ಹೆಗಡೆ
ಬೆಂಗಳೂರು : ಬೈಯಪ್ಪನಹಳ್ಳಿ - ಚಿಕ್ಕಬಾಣಾವರ ಸಂಪರ್ಕಿಸುವ ಬೆಂಗಳೂರು ಉಪನಗರ ರೈಲ್ವೇ ಯೋಜನೆ (ಬಿಎಸ್‌ಆರ್‌ಪಿ) ‘ಮಲ್ಲಿಗೆ’ ಮಾರ್ಗದ ಕಾಮಗಾರಿ ವಿಳಂಬದಿಂದ ಸಾಗಿದ್ದು, ಮುಂದಿನ ವರ್ಷಾಂತ್ಯಕ್ಕೆ ಯೋಜನೆಯ ಮೊದಲ ಹಂತ ಪೂರ್ಣಗೊಳ್ಳುವುದು ಬಹುತೇಕ ಅನುಮಾನವಾಗಿದೆ.
25.01 ಕಿಮೀ ಉದ್ದದ ಈ ಯೋಜನೆಯಲ್ಲಿ ಮೊದಲ ಹಂತವಾಗಿ ಚಿಕ್ಕಬಾಣಾವರ - ಯಶವಂತಪುರ (7.4 ಕಿಮೀ) ಪೂರ್ಣಗೊಳಿಸಲು ಮಧ್ಯಂತರ ಗುರಿ ಹೊಂದಲಾಗಿದೆ. ಆದರೆ, ಈಗ ನಡೆಯುತ್ತಿರುವ ಕಾಮಗಾರಿ ನಿಧಾನಗತಿ ಗಮನಿಸಿದರೆ ಈ ಗುರಿ ಸಾಧನೆ ಅಸಾಧ್ಯ ಎಂದು ನಗರ ರೈಲ್ವೆ ಸಾರಿಗೆ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮಲ್ಲಿಗೆ ಮಾರ್ಗದ ಕಾಮಗಾರಿಯ ₹ 859.97 ಕೋಟಿ ಮೊತ್ತದ ಗುತ್ತಿಗೆಯನ್ನು 2022ರ ಆಗಸ್ಟ್ 26ರಂದು ಎಲ್ ಆ್ಯಂಡ್ ಟಿ ಕಂಪನಿಗೆ ವಹಿಸಲಾಗಿದೆ. ಯೋಜನೆಗಾಗಿ ನೈಋತ್ಯ ರೈಲ್ವೆಯಿಂದ 98.34ಎಕರೆ ಪ್ರದೇಶವನ್ನು ಲೀಸ್‌ಗೆ, ರಕ್ಷಣಾ ಇಲಾಖೆ, ಸರ್ಕಾರಿ ಹಾಗೂ ಖಾಸಗಿ ಒಡೆತನದಲ್ಲಿದ್ದ 120.44 ಎಕರೆಯನ್ನು ಭೂಸ್ವಾಧೀನ ಮಾಡಿಕೊಳ್ಳಲಾಗಿದೆ.
ಸದ್ಯ ಮಾರ್ಗ ನಿರ್ಮಾಣ ಕಾಮಗಾರಿ ಮಾತ್ರ ನಡೆಯುತ್ತಿದೆ. ಕಳೆದ ತಿಂಗಳು ನಿಲ್ದಾಣಗಳ ನಿರ್ಮಾಣಕ್ಕೆ 2 ಹಂತದ ಟೆಂಡರ್ ಕರೆಯಲಾಗಿದೆ. ಆದರೆ, ರೋಲಿಂಗ್ ಸ್ಟಾಕ್ ( ರೈಲು), ಸಿಗ್ನಲಿಂಗ್ ಆ್ಯಂಡ್ ಕಮ್ಯೂನಿಕೇಶನ್ ಸೇರಿ ಇತರೆ ಕಾಮಗಾರಿಗಳಿಗೆ ಗುತ್ತಿಗೆ ಅಂತಿಮವಾಗಿಲ್ಲ. ಜೊತೆಗೆ ಕೆ-ರೈಡ್‌ನಿಂದ ನಿರ್ವಹಿಸಲ್ಪಡುವ ಈ ರೈಲ್ವೇ ವ್ಯವಸ್ಥೆಗೆ ನುರಿತ ಸಿಬ್ಬಂದಿ ಬೇಕಾಗುತ್ತಾರೆ. ಅದಕ್ಕೂ ಸಮಯ ಬೇಕಾಗುತ್ತದೆ ಎಂದು ಸಾರಿಗೆ ತಜ್ಞರು ಹೇಳಿದ್ದಾರೆ.
ವಿಳಂಬಕ್ಕೆ ಕಾರಣ
ಆರಂಭದಲ್ಲಿ ನೈಋತ್ಯ ರೈಲ್ವೆ ಅಗತ್ಯ ಸಹಕಾರ ನೀಡಿಲ್ಲ, ಹಸ್ತಾಂತರವಾದ ಭೂಮಿ ಅತಿಕ್ರಮಣ ತೆರವು ಗೋಜಲುಗಳು ಯೋಜನೆ ವಿಳಂಬಕ್ಕೆ ಕಾರಣ ಎಂದು ಕೆ-ರೈಡ್ ಹೇಳುತ್ತಿದೆ. ಗುತ್ತಿಗೆ ಕಂಪನಿಯಿಂದಲೂ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದು ಸಾರಿಗೆ ತಜ್ಞರು ಆರೋಪಿಸುತ್ತಿದ್ದಾರೆ.
ಆಗಿರುವ ಪ್ರಗತಿ
ಶೇ. 30ರಷ್ಟು ಕಾಮಗಾರಿ ಮುಗಿದಿದೆ ಎಂದು ಕರ್ನಾಟಕ ರೈಲ್ವೇ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ( ಕೆ-ರೈಡ್ ) ತಿಳಿಸುತ್ತಿದೆ. ಎತ್ತರಿಸಿದ ಮಾರ್ಗಕ್ಕೆ ಸಂಬಂಧಿಸಿ ಜೋಡಣಾ ಸ್ಥಳದಲ್ಲಿ ಹೆಬ್ಬಾಳ 104, ಯಶವಂತಪುರ 83 ಹಾಗು ಬೆನ್ನಿಗಾನಹಳ್ಳಿಯ 33 ಸಂಖ್ಯೆಯ ಒಟ್ಟೂ 220 ಪೈಲ್ಸ್‌ಗಳು ಪೂರ್ಣಗೊಂಡಿವೆ. ಯಶವಂತಪುರದಿಂದ ಹೆಬ್ಬಾಳದವರೆಗಿನ 4 ಪೈಲ್ಸ್‌ಗಳ ಲೋಡ್ ಪರೀಕ್ಷೆ ಮುಗಿಸಲಾಗಿದೆ. ಪೈಲ್ ಕ್ಯಾಪ್‌ಗಳ ಕಾಮಗಾರಿ ನಡೆಯುತ್ತಿದೆ ಎಂದು ಕೆ-ರೈಡ್ ತಿಳಿಸಿದೆ.
ನಿರ್ಮಾಣ ಆಗಬೇಕಾದ 54 ಕಿರು ಸೇತುವೆಗಳ ಪೈಕಿ 4 ಪೂರ್ಣಗೊಂಡಿದೆ. ಬೆನ್ನಿಗಾನಹಳ್ಳಿಯಿಂದ ಹೆಬ್ಬಾಳದವರೆಗೆ 13, ಯಶವಂತಪುರದಿಂದ ಚಿಕ್ಕಬಾಣಾವರದವರೆಗೆ 4 ಸೇತುವೆ ಕೆಲಸ ಭಾಗಶಃ ಮುಗಿದಿದೆ. ಬಾಣಸವಾಡಿಯಿಂದ ಹೆಬ್ಬಾಳದವರೆಗಿನ 20 ರೈಲ್ವೇ ಕೆಳಸೇತುವೆಗಳ ನಿರ್ಮಾಣ ಆಗುತ್ತಿದ್ದು, 4 ಭಾಗಶಃ ಮುಗಿದಿದೆ. ಈ ಮಾರ್ಗದಲ್ಲಿ ತೆರವು ಮಾಡಬೇಕಾದ ಶೇ.65ರಷ್ಟು ಮರಗಳನ್ನು ಕಡಿಯಲಾಗಿದ್ದು, ಸ್ಥಳಾಂತರ ಶೇ. 45ರಷ್ಟು ಮುಗಿದಿದೆ. ವಿವಿಧೆಡೆ ವಿದ್ಯುತ್ ಸಲಕರಣೆ, ಒಳಚರಂಡಿ, ಅನಿಲ ಮಾರ್ಗದ ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿದೆ. ಬಾಣಸವಾಡಿಯಲ್ಲಿನ ರಕ್ಷಣಾ ಭೂಮಿಯಲ್ಲಿರುವ ಸ್ವತ್ತುಗಳ ಸ್ಥಳಾಂತರ, ಯೋಜನಾ ವಿನ್ಯಾಸ ಅನುಮೋದನೆಗೆ ರಕ್ಷಣಾ ಇಲಾಖೆಗೆ ಪ್ರಸ್ತಾವನೆ ಕಳಿಸಿದ್ದೇವೆ ಎಂದು ಕೆ-ರೈಡ್ ತಿಳಿಸಿದೆ.
‘ಮಲ್ಲಿಗೆ’ ಮಾರ್ಗದ ಕಾಮಗಾರಿ ವಿಳಂಬವಾಗುತ್ತಿದೆ. ಎಲ್ ಆ್ಯಂಡ್ ಟಿ ಕಂಪನಿ ಕೆಲಸವನ್ನು ಚುರುಕುಗೊಳಿಸುವ ಅಗತ್ಯವಿದೆ. ಹೀಗೆ ಸಾಗಿದರೆ ಮಧ್ಯಂತರ ಗುರಿ ತಲುಪುವುದು ಅಸಾಧ್ಯ.
-ರಾಜ್‌ಕುಮಾರ್ ದುಗರ್, ನಗರ ಸಾರಿಗೆ ತಜ್ಞ
ಬೆಂಗಳೂರು ಉಪನಗರ ರೈಲ್ವೇ ಯೋಜನೆ ಮಂದಗತಿಯಲ್ಲಿದೆ. ಈ ತಿಂಗಳಲ್ಲಿ ಸಚಿವ ಅಶ್ವಿನಿ ವೈಷ್ಣವ್ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಚುರುಕಿಗೆ ಕ್ರಮ ವಹಿಸಲಾಗುವುದು.
-ವಿ.ಸೋಮಣ್ಣ, ರೈಲ್ವೇ ರಾಜ್ಯ ಖಾತೆ ಸಚಿವ