ಹೇಮರೆಡ್ಡಿ ಮಲ್ಲಮ್ಮನ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಿ

| Published : May 25 2025, 01:29 AM IST

ಹೇಮರೆಡ್ಡಿ ಮಲ್ಲಮ್ಮನ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಮೊಳಕಾಲ್ಮುರು: ಹೇಮರೆಡ್ಡಿ ಮಲ್ಲಮ್ಮ ಕೇವಲ ಒಂದು ವರ್ಗಕ್ಕೆ ಸೀಮಿತರಾಗದೆ ತಮ್ಮ ಸಾತ್ವಿಕ ವಿಚಾರಗಳ ಮೂಲಕ ಮಾನವೀಯ ಸಂದೇಶಗಳನ್ನು ಜಗತ್ತಿಗೆ ಸಾರಿದ್ದಾರೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಬಾಳಬೇಕು ಎಂದು ರಾಂಪುರ ಮಹಾ ನಂದೀಶ್ವರ ಮಠದ ಶ್ರೀ ರೇಣುಕಾ ಸ್ವಾಮಿ ಕರೆ ನೀಡಿದರು.

ಮೊಳಕಾಲ್ಮುರು: ಹೇಮರೆಡ್ಡಿ ಮಲ್ಲಮ್ಮ ಕೇವಲ ಒಂದು ವರ್ಗಕ್ಕೆ ಸೀಮಿತರಾಗದೆ ತಮ್ಮ ಸಾತ್ವಿಕ ವಿಚಾರಗಳ ಮೂಲಕ ಮಾನವೀಯ ಸಂದೇಶಗಳನ್ನು ಜಗತ್ತಿಗೆ ಸಾರಿದ್ದಾರೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಬಾಳಬೇಕು ಎಂದು ರಾಂಪುರ ಮಹಾ ನಂದೀಶ್ವರ ಮಠದ ಶ್ರೀ ರೇಣುಕಾ ಸ್ವಾಮಿ ಕರೆ ನೀಡಿದರು.

ತಾಲೂಕಿನ ರಾಂಪುರ ಗ್ರಾಮದಲ್ಲಿ ಶನಿವಾರ ತಾಲೂಕು ವೀರಶೈವ ಲಿಂಗಾಯಿತ ಸಮಾಜದಿಂದ ಆಯೋಜಿಸಲಾಗಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೇಮರೆಡ್ಡಿ ಮಲ್ಲಮ್ಮ ಒಬ್ಬ ಗೃಹಿಣಿಯಾಗಿ ಮನೆಯ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಲ್ಲದೇ ಸಮಾಜಕ್ಕೂ ಮಾದರಿಯಾಗಬಲ್ಲ ಕೆಲಸ ಮಾಡಿದ್ದಾರೆ. ತಮ್ಮ ಸಾತ್ವಿಕ ವಿಚಾರಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡಿದರು. ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಿದೆ ಸರ್ವರೂ ಆರಾಧಿಸುವಂತಾಗಬೇಕು. ಸಮುದಾಯದ ಪ್ರತಿಯೊಬ್ಬರೂ ಒಗ್ಗಟ್ಟಾಗಿ ಜಯಂತಿಗಳನ್ನು ಆಚರಿಸಬೇಕು ಎಂದು ಹೇಳಿದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಟಿ.ನಾಗರೆಡ್ಡಿ ಮಾತನಾಡಿ, ಲಿಂಗಾಯತ ಸಮಾಜ ಹೇಮರೆಡ್ಡಿ ಮಲ್ಲಮ್ಮ, ಬಸವಣ್ಣ, ಕಿತ್ತೂರು ರಾಣಿ ಚೆನ್ನಮ್ಮಜಯಂತಿಗಳನ್ನು ಪ್ರತ್ಯೇಕ ಆಚರಣೆ ಮಾಡದೆ ಮೂವರ ಮಹನೀಯರ ಜಯಂತಿಗಳನ್ನು ಒಟ್ಟಿಗೆ ಆಚರಣೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಒಗ್ಗಟ್ಟು ಮೂಡಲಿದೆ. ಸಮಾಜಕ್ಕೆ ಸಮುದಾಯದ ಶಕ್ತಿಯೂ ಗೊತ್ತಾಗಲಿದೆ. ಹಾಗಾಗಿ ವೀರಶೈವ ಲಿಂಗಾಯಿತರು ಪ್ರತ್ಯೇಕಗೊಳ್ಳದೆ ಪ್ರತಿಯೊಬ್ಬರೂ ಸಂಘಟಿತರಾಗಿ ಸೌಹಾರ್ದತೆ ಕಾಪಾಡಿಕೊಳ್ಳಬೇಕು ಎಂದರು.

ಭರ್ಜರಿ ಮೆರವಣಿಗೆ:

ಕಾರ್ಯಕ್ರಮಕ್ಕೂ ಮುನ್ನಾ ಕೆರೆ ಕೊಂಡಾಪುರ ವೀರಶೈವ ಕಲ್ಯಾಣ ಮಂಟಪದಿಂದ ವಿವಿಧ ಜನಪದ ವಾದ್ಯಗಳೊಂದಿಗೆ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರವನ್ನು ಭರ್ಜರಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕೆರೆ ಕೊಂಡಾಪುರ ಸೇರಿದಂತೆ ರಾಂಪುರ ಮುಖ್ಯ ರಸ್ತೆಯಿಂದ ಪ್ರಮುಖ ಬೀದಿಗಳಲ್ಲಿ ಭರ್ಜರಿ ಮೆರವಣಿಗೆ ನಡೆಸಿದರು. ಸಮಾಜದ ಮುಖಂಡರು ಕುಣಿದು ಕುಪ್ಪಳಿಸಿದರು.

ಈ ಸಂದರ್ಭದಲ್ಲಿ ರಾಂಪುರ ಗ್ರಾಮದ ರುದ್ರಾಕ್ಷಿ ಮಠದ ಡಾ.ವೀರ ಭದ್ರಯ್ಯ ಸ್ವಾಮಿ, ಬ್ರಹ್ಮಗಿರಿ ಬೆಟ್ಟದ ಸೋಮಣ್ಣ ತಾತಾ, ತಪೋವನ ಚಂದ್ರ ಶೇಖರಯ್ಯ ಸ್ವಾಮೀಜಿ, ವೀರ ಶೈವ ಲಿಂಗಾಯಿತ ಮಹಾ ಸಭಾದ ತಾಲೂಕು ಅಧ್ಯಕ್ಷ ಎಂ.ಡಿ.ಮಂಜುನಾಥ, ವಕೀಲರಾದ ಎಂ.ಎನ್.ವಿಜಯಲಕ್ಷ್ಮಿ, ಮುಖಂಡರಾದ ಎಚ್.ಎ.ರಾಜು, ನೀಲಕಂಠ ರೆಡ್ಡಿ, ಜಿಂಕುಲು ಬಸವರಾಜ, ಲಕ್ಷ್ಮಣ ರೆಡ್ಡಿ, ಆರ್.ಜಿ.ಜಯಕುಮಾರ್, ಬಳೆ ಗಂಗಾಧರ, ಎಂ.ಡಿ.ಚೆನ್ನರೆಡ್ಡಿ, ಎರಿಸ್ವಾಮಿ, ರಮೇಶ್ ಹೂಗಾರ್, ಗಂಗಾಧರಪ್ಪ, ಚನ್ನಬಸಪ್ಪ, ಶಿವಕುಮಾರ್, ಸಿದ್ಬಸಪ್ಪ, ಜಡೆಯರ್, ನಾಗರಾಜ, ಜಿ.ಸಿ.ನಾಗರಾಜ್ ಭಾಗವಹಿಸಿದ್ದರು.