ಸಾರಾಂಶ
- ಚನ್ನಗಿರಿ ತಾಲೂಕು ಆಡಳಿತದಿಂದ ಕನ್ನಡ ರಾಜ್ಯೋತ್ಸವ - - - ಚನ್ನಗಿರಿ: ಕನ್ನಡನಾಡಿನ ಸಾಹಿತ್ಯ, ಸಂಸ್ಕೃತಿಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಮುನ್ನಡೆಯಬೇಕು. ಆಗ ರಾಜ್ಯ ಬಲಿಷ್ಠವಾಗಲಿದೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ತಾಲೂಕು ಆಡಳಿತ ವತಿಯಿಂದ ಅದ್ಧೂರಿಯಾಗಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನ್ನಡ ಭಾಷೆ ಅತ್ಯಂತ ಶ್ರೀಮಂತವಾಗಿದೆ. ಓದುವುದಕ್ಕಾಗಲಿ, ಬರೆಯುವುದಕ್ಕಾಗಲಿ ಚಂದವಾಗಿರುವ ಭಾಷೆಯಾಗಿದೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತುಗೆ ಕನ್ನಡ ಭವನ ನಿರ್ಮಾಣಕ್ಕಾಗಿ ಬೇಕಾದ ಅನುದಾನ ಸರ್ಕಾರದಿಂದ ಮಂಜೂರು ಮಾಡಿಸಿದ್ದೇನೆ ಎಂದರು.ಚನ್ನಗಿರಿ ತಾಲೂಕು ಕ.ಸಾ.ಪ. ಅಧ್ಯಕ್ಷ ಎಲ್.ಜಿ. ಮಧುಕುಮಾರ್ ಸಾಧನೆಗೆ ಗುರುತಿಸಿ, ಅವರಿಗೆ ಜಿಲ್ಲಾಡಳಿತದಿಂದ ಸನ್ಮಾನಿಸುತ್ತಿರುವುದು ತಾಲೂಕಿಗೆ ಸಂದ ಗೌರವವಾಗಿದೆ ಎಂದರು.
ತಹಸೀಲ್ದಾರ್ ಜಿ.ಎಸ್.ಶಂಕರಪ್ಪ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಂದೇಶ ವಾಚಿಸಿದರು. 10ನೇ ತರಗತಿಯ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕಗಳ ಪಡೆದ ವಿದ್ಯಾರ್ಥಿಗಳಾದ ವಿದ್ಯಾ, ಕವಿತಾ, ದೀಪಿಕಾ ಪಾಟೀಲ್, ತೇಜಸ್ವಿನಿ, ವಿನುತಾ, ಎಂ.ಡಿ.ವಿದ್ಯಾ, ನಿವೇದಿತ, ನಂದಿತಾ, ಪಲ್ಲವಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಎಂ.ನಾಗರಾಜ್, ಪೋಸ್ಟ್ ಕೃಷ್ಣೋಜಿರಾವ್, ಇಂತಿಯಾಜ್ ಅಹಮದ್, ಎಂ.ಜಿ. ರಾಜಶೇಖರಪ್ಪ, ಮುರಳೀಧರ ಅವರನ್ನು ತಾಲೂಕು ಆಡಳಿತ ವತಿಯಿಂದ ಶಾಸಕ ಬಸವರಾಜು ಸನ್ಮಾನಿಸಿದರು.ಮುಖ್ಯ ಅತಿಥಿಗಳಾಗಿ ತಾಪಂ ಇಒ ಬಿ.ಕೆ.ಉತ್ತಮ, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ, ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ, ಲೋಕೋಪಯೋಗಿ ಇಲಾಖೆ ಅಭಿಯಂತರ ರವಿಕುಮಾರ್, ಬಿಸಿಎಂ ಇಲಾಖೆ ಅಧಿಕಾರಿ ರವೀಂದ್ರಕುಮಾರ್ ಅಥರ್ಗ, ಕ್ಷೇತ್ರ ಸಮನ್ವಯಾಧಿಕಾರಿ ಡಾ. ಎಸ್.ಶಂಕರಪ್ಪ, ಪುರಸಭಾ ಸದಸ್ಯರು, ತಾಲೂಕುಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಸಮಾರಂಭದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
- - - -1ಕೆಸಿಎನ್‌ಜಿ2:ರಾಜ್ಯೋತ್ಸವದಲ್ಲಿ ಚನ್ನಗಿರಿ ಶಾಸಕ ಬಸವರಾಜ ಮಾತನಾಡಿದರು.