ಕೆ.ಆರ್.ಪೇಟೆ ತಾಲೂಕಿನ ರೈತರು ಕೃಷಿ ಜೊತೆಗೆ ಉಪ ಕಸುಬುಗಳಾದ ಹೈನುಗಾರಿಕೆ, ಕೋಳಿಸಾಕಾಣಿಕೆ, ಮೇಕೆ ಸಾಕಾಣಿಕೆ, ಮೀನು ಸಾಕಾಣಿಕೆ, ಅಣಬೆ ಬೇಸಾಯ ಮುಂತಾದುವುಗಳಿಗೆ ಹೆಚ್ಚಿನ ಒತ್ತು ನೀಡಿ ಅವುಗಳನ್ನು ಕೈಗೊಂಡಾಗ ಕುಟುಂಬಗಳ ಆದಾಯ ವೃದ್ಧಿಸುವುದರ ಜೊತೆಗೆ ಆರ್ಥಿಕ ಸಾಕ್ಷರತೆಯ ಅರಿವು ಉಂಟಾಗುತ್ತದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕೃಷಿ ಜೊತೆ ಕೃಷಿಯೇತರ ಉಪ ಕಸುಬುಗಳನ್ನು ಅಳವಡಿಸಿಕೊಳ್ಳುವುದರಿಂದ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು ಎಂದು ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.

ತಾಲೂಕಿನ ಹರಳಹಳ್ಳಿಯಲ್ಲಿ ವನಸಿರಿ ಸಂಜೀವಿನಿ ಗ್ರಾಮ ಪಂಚಾಯ್ತಿ ಮಟ್ಟದ ಒಕ್ಕೂಟದಿಂದ ಸಮುದಾಯ ಬಂಡವಾಳ ನಿಧಿ ಸಾಲ ವಿತರಣೆ ಮತ್ತು ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಜನರ ಬದುಕನ್ನು ಹಸನು ಮಾಡಲು ಬ್ಯಾಂಕ್ ಆಫ್ ಬರೋಡಾ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಅನೇಕ ರೀತಿಯ ಸಾಲಸೌಲಭ್ಯ ನೀಡುತ್ತಿರುವುದು ಸಂತಸದ ವಿಷಯ ಎಂದರು.

ತಾಲೂಕಿನ ರೈತರು ಕೃಷಿ ಜೊತೆಗೆ ಉಪ ಕಸುಬುಗಳಾದ ಹೈನುಗಾರಿಕೆ, ಕೋಳಿಸಾಕಾಣಿಕೆ, ಮೇಕೆ ಸಾಕಾಣಿಕೆ, ಮೀನು ಸಾಕಾಣಿಕೆ, ಅಣಬೆ ಬೇಸಾಯ ಮುಂತಾದುವುಗಳಿಗೆ ಹೆಚ್ಚಿನ ಒತ್ತು ನೀಡಿ ಅವುಗಳನ್ನು ಕೈಗೊಂಡಾಗ ಕುಟುಂಬಗಳ ಆದಾಯ ವೃದ್ಧಿಸುವುದರ ಜೊತೆಗೆ ಆರ್ಥಿಕ ಸಾಕ್ಷರತೆಯ ಅರಿವು ಉಂಟಾಗುತ್ತದೆ ಎಂದರು.

ವರ್ಷಪೂರ್ತಿ ಆದಾಯ ನೀಡುವ ಆಧುನಿಕ ರೀತಿ ಹೈನುಗಾರಿಕೆಯು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರಚಲಿತವಾಗುತ್ತಿದೆ. ಕೃಷಿಯೇತರ ಉಪಕಸುಬುಗಳಾದ ಹಪ್ಪಳ ತಯಾರಿಕೆ, ಮೇಣದಬತ್ತಿ ತಯಾರಿಕೆ, ಹೂವಿನ ಬೇಸಾಯ, ಮಸಾಲೆ ಪದಾರ್ಥಗಳನ್ನು ಸಿದ್ದಪಡಿಸುವಿಕೆ ಸೇರಿದಂತೆ ವಿಭಿನ್ನ ಕಾರ್ಯಕ್ರಮಗಳನ್ನು ಒದಗಿಸಿಕೊಡುವುದು ನನ್ನ ಕರ್ತವ್ಯವಾಗಿದೆ ಎಂದರು.

ಶಾಸಕನಾಗಿ ನಾನು ನನ್ನ ಕರ್ತವ್ಯವನ್ನು ಮಾಡುತ್ತಿದ್ದೇನೆ. ಆದ್ದರಿಂದ ತಾವುಗಳು ಮುಂದೆ ಬಂದರೆ ಮೂಲ ಬಂಡವಾಳ ಹಾಗೂ ಸೌಕರ್ಯಗಳನ್ನು ಒದಗಿಸಿಕೊಡಲು ಸಿದ್ದವಿದ್ದೇವೆ. ಈ ನಿಟ್ಟಿನಲ್ಲಿ ಬ್ಯಾಂಕ್ ಆಫ್ ಬರೋಡ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿ ನಬಾರ್ಡ್ ಅಧಿಕಾರಿಗಳು ಮತ್ತು ಹಲವು ಬ್ಯಾಂಕ್‌ನವರು ಇಂಥಹ ಉತ್ತಮ ಕಾರ್ಯಗಳಿಗೆ ಆರ್ಥಿಕ ನೆರವನ್ನು ನೀಡಲು ಮುಂದೆ ಬಂದಿದ್ದಾರೆ ಎಂದರು.

ರೈತರು ಸಾಲ ಪಡೆದು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಒದಗಿಸಿಕೊಡಲು ಬ್ಯಾಂಕ್ ಅಧಿಕಾರಿಗಳು ಹಾಗೂ ಇತರರೊಂದಿಗೆ ಚರ್ಚಿಸಲು ನಾನು ಸಿದ್ದನಿದ್ದೇನೆ. ಶಾಸಕನಾಗಿ ಸರ್ಕಾರ ಮತ್ತು ಬ್ಯಾಂಕ್‌ಗಳಿಂದ ದೊರೆಯುವ ಎಲ್ಲಾ ರೀತಿಯ ಸವಲತ್ತುಗಳನ್ನು ನಿಮಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಈ ವೇಳೆ ತಾಪಂ ಇಒ ಸತೀಶ್, ಗ್ರಾಪಂ ಅಧ್ಯಕ್ಷ ಆರ್.ಕೆ.ಯೋಗೇಶ್, ಎನ್.ಆರ್.ಎಂ.ಎಲ್. ಜಿಲ್ಲಾ ಸಂಯೋಜಕ ಕಿಶೋರ್, ತಾಲೂಕು ಸಂಯೋಜಕ ನಂಜುಂಡಯ್ಯ ಬ್ಯಾಂಕ್ ಆಫ್ ಬರೋಡ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಸಂಪನ್ಮೂಲ ವ್ಯಕ್ತಿ ಸುಶ್ಮಿತ, ಗ್ರಾಪಂ ವನಸಿರಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಲಕ್ಷ್ಮಿದೇವಿ, ಉಪಾದ್ಯಕ್ಷೆ ವೀಣಾ, ಎಂ.ಬಿ.ಕೆ. ಶೃತಿ, ಎಲ್.ಸಿ.ಆರ್.ಪಿ. ವಾಣಿ, ಜಯಲಕ್ಷ್ಮಿ , ಪಶುಸಕಿ ಯಶಸ್ವಿನಿ, ಕೃಷಿಸಕಿ ದಿವ್ಯ ಸೇರಿದಂತೆ ನೂರಾರು ಸಾರ್ವಜನಿಕರು ಹಾಜರಿದ್ದರು.