ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ದೇಶದಲ್ಲಿ ಹೇರಿದ ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅನ್ಯಾಯ. ಆಗ ತುರ್ತು ಪರಿಸ್ಥಿತಿ ವಿರುದ್ಧ ದೇಶದ ತುಂಬಾ ಜನ ಹೋರಾಟ ಮಾಡದಿದ್ದರೆ ಈಗ ರಾಹುಲ್ ಗಾಂಧಿಯವರು ಹೋದ- ಬಂದಕಡೆ ಸಂವಿಧಾನ ಪ್ರತಿಯ ಪುಸ್ತಕ ಹಿಡಿದು ಅಲ್ಲಾಡಿಸುವುದು ಇಂದಿರಾ ಗಾಂಧಿ ತಿದ್ದುಪಡಿ ಮಾಡಿದ ಸಂವಿಧಾನ ಆಗಿರುತ್ತಿತ್ತು ಹೊರತು ಅಂಬೇಡ್ಕರ್ ರಚಿಸಿದ ಸಂವಿಧಾನ ಆಗಿರುತ್ತಿರಲಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.ನಗರದಲ್ಲಿ ಕಾಂಗ್ರೆಸ್ ಸರ್ಕಾರ ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ವಿವಿಧ ಸಂಘ, ಸಂಸ್ಥೆಗಳು ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಬುಧವಾರ ಮಾತನಾಡಿದರು.ಜೂನ್ 25, 1975 ಭಾರತದ ಇತಿಹಾಸದಲ್ಲಿ ಕರಾಳ ದಿನ. ಅಂದಿನ ಪ್ರಧಾನಿ ಇಂದಿರಾಗಾಂಧಿ ತಮ್ಮ ಅಧಿಕಾರ ಉಳಿಸಿಕೊಳ್ಳಲು ಸಂವಿಧಾನದ ಆಶಯಗಳನ್ನು ಉಲ್ಲಂಘಿಸಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು. ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ತಳ್ಳಿದ್ದು, ಪತ್ರಿಕಾ ಸ್ವಾತಂತ್ರ್ಯ ಹರಣ ಮಾಡಿದ್ದು ಮಾನವ ಹಕ್ಕುಗಳನ್ನು ಮೊಟಕುಗೊಳಿಸಿದರು ಎಂದರು.ತುರ್ತು ಪರಿಸ್ಥಿತಿ ಹೇರಿ 21 ತಿಂಗಳು ಕಾಲ ಭಾರತದ ಪ್ರಜಾಪ್ರಭುತ್ವ ಹತ್ಯೆಗೈಯ್ಯಲಾಯಿತು. ಸಂವಿಧಾನವನ್ನು ಧಿಕ್ಕರಿಸಿ ಅದನ್ನು ತಿರುಚಿ ಅಪಚಾರವೆಸಗಿದ ಪಾಪ ಕಾಂಗ್ರೆಸ್ ಪಕ್ಷಕ್ಕೆ ತಗುಲಿದೆ. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಸ್ವಾರ್ಥಕ್ಕಾಗಿ ಮನಸೋ ಇಚ್ಛೇ ತಿದ್ದುಪಡಿ ಮಾಡಲಾಯಿತು ಎಂದರು.ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನದ ಬಗ್ಗೆ ಮಾತನಾಡುವ ಹಕ್ಕಿಲ್ಲ, ಅಧಿಕಾರ ದೊರೆತಾಗಲೆಲ್ಲಾ ವಿರೋಧ ಧ್ವನಿಯನ್ನು ಸಂವಿಧಾನಬಾಹಿರವಾಗಿ ಅಡಗಿಸುವ ಕುತಂತ್ರ ಕಾಂಗ್ರೆಸಿಗರಿಗಿದೆ. ತಮ್ಮ ಟೀಕಾಕಾರರ ವಿರುದ್ಧ ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ಕಿರುಕುಳ ಕೊಡುವ ಕಾಂಗ್ರೆಸ್‌ನ ಪ್ರವೃತ್ತಿ ಇಂದಿಗೂ ನಡೆಯುತ್ತಿದೆ ಎಂದರು.ಅಂದು ಕುರ್ಚಿ ಉಳಿಸಿಕೊಳ್ಳಲು ಇಂದಿರಾಗಾಂಧಿ ಸಂವಿಧಾನದ ದುರ್ಬಳಕೆ ಮಾಡಿಕೊಂಡರೆ ಇಂದು ರಾಹುಲ್ ಗಾಂಧಿ ಅಧಿಕಾರ ಗಳಿಸಲು ಅಪಪ್ರಚಾರದ ಮೂಲಕ ಸಂವಿಧಾನವನ್ನು ತಮ್ಮ ಸ್ವಹಿತಾಸಕ್ತಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಂವಿಧಾನವನ್ನು ದುರ್ಬಲಗೊಳಿಸಿ ತಮ್ಮ ನಿರಂಕುಶ ಆಡಳಿತ ಸ್ಥಾಪಿಸಲು ಮುಂದಾಗಿದ್ದ ಕಾಂಗ್ರೆಸ್ ಎಂದಿಗೂ ನಂಬಲು ಅರ್ಹವಲ್ಲದ ಪಕ್ಷ ಎಂದರು.ಸಂವಿಧಾನವನ್ನು ದುರುಪಯೋಗಪಡಿಸಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಿದ ಶಕ್ತಿಗಳ ವಿರುದ್ಧ ನಡೆದ ಹೋರಾಟವು ಇಂದಿಗೂ ಪ್ರೇರಣೆ ನೀಡುತ್ತದೆ. ದೇಶದ ಪ್ರತಿಯೊಬ್ಬ ನಾಗರಿಕರೂ ಈ ಹೋರಾಟದ ಕ್ಷಣಕ್ಷಣವನ್ನೂ ಅರಿಯಬೇಕು ಮತ್ತು ತಮ್ಮಜೀವನವನ್ನೇ ಲೆಕ್ಕಿಸದೆ ಹೋರಾಡಿದವರನ್ನು ಸ್ಮರಿಸುವುದು ನಮ್ಮಕರ್ತವ್ಯ ಎಂದು ಪ್ರತಾಪ್ ಸಿಂಹ ಹೇಳಿದರು.ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಸೆರೆವಾಸ ಅನುಭವಿಸಿದ ಲೋಕಸಭೆ ಮಾಜಿ ಉಪಸಭಾಪತಿ ದಿ.ಎಸ್.ಮಲ್ಲಿಕಾರ್ಜುನಯ್ಯ ಅವರ ಪತ್ನಿ ಜಯದೇವಮ್ಮ, ಹಿರಿಯರಾದ ಎ.ಬಿ.ರಾಮಚಂದ್ರ, ರೇವಣಸಿದ್ದಪ್ಪ ಅವರನ್ನು ಗೌರವಿಸಲಾಯಿತು. ಅವರು ತಮ್ಮ ಹೋರಾಟದ ಅನುಭವಗಳನ್ನು ಹಂಚಿಕೊಂಡರು.ಶಾಸಕರಾದ ಬಿ.ಸುರೇಶ್‌ಗೌಡರು, ಜಿ.ಬಿ.ಜ್ಯೋತಿಗಣೇಶ್ ಮತ್ತಿತರ ಮುಖಂಡರುಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.