ಸಂಗೀತ ಕಣ್ಣಿಗೆ ಕಾಣುವುದಿಲ್ಲವಾದರೂ ಅಸನ್ನು ಆನಂದದಿಂದ ಭಾವಪರವಶರಾಗಿ ಆಸ್ವಾದಿಸಬಹುದು. ಅದೇ ವಿಜ್ಞಾನ ಕಣ್ಣಿಗೆ ಕಾಣುತ್ತದೆಯಾದರೂ ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದ ಕಲೆಗೆ ಭಾವನೆ ಮುಖ್ಯವಾದರೆ, ವಿಜ್ಞಾನಕ್ಕೆ ತರ್ಕವೇ ಮುಖ್ಯ ಎಂದು ಕನ್ನಡದ ಪ್ರಸಿದ್ದ ಬರಹಗಾರ್ತಿ ಹಾಗೂ ಕವಯಿತ್ರಿ ಸಂಧ್ಯಾರಾಣಿ ಎನ್. ತಿಳಿಸಿದರು.
ಕನ್ನಡಪ್ರಭವಾರ್ತೆ ತಿಪಟೂರು
ಸಂಗೀತ ಕಣ್ಣಿಗೆ ಕಾಣುವುದಿಲ್ಲವಾದರೂ ಅಸನ್ನು ಆನಂದದಿಂದ ಭಾವಪರವಶರಾಗಿ ಆಸ್ವಾದಿಸಬಹುದು. ಅದೇ ವಿಜ್ಞಾನ ಕಣ್ಣಿಗೆ ಕಾಣುತ್ತದೆಯಾದರೂ ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದ ಕಲೆಗೆ ಭಾವನೆ ಮುಖ್ಯವಾದರೆ, ವಿಜ್ಞಾನಕ್ಕೆ ತರ್ಕವೇ ಮುಖ್ಯ ಎಂದು ಕನ್ನಡದ ಪ್ರಸಿದ್ದ ಬರಹಗಾರ್ತಿ ಹಾಗೂ ಕವಯಿತ್ರಿ ಸಂಧ್ಯಾರಾಣಿ ಎನ್. ತಿಳಿಸಿದರು.ನಗರದ ಕಲ್ಪತರು ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಪ್ರಾರಂಭವಾದ ಕಲ್ಪೋತ್ಸವ-೨೦೨೬ ಉದ್ಘಾಟಿಸಿ ಮಾತನಾಡಿದ ಅವರು ಕಲೆಯು ಪ್ರತಿಯೊಬ್ಬರ ಜೀವನದಲ್ಲಿ ಅಗತ್ಯ. ಅದು ಒಂದು ಅಭಿವ್ಯಕ್ತಿ ಮಾಧ್ಯಮವಾಗಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಲೆಯು ಒತ್ತಡವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಕಲೆಗೆ ಕರ್ತದ ಅವಶ್ಯಕತೆಯಿಲ್ಲ, ಆದರೆ ಲ್ಯಾಟರಲ್ ಥಿಂಕಿಂಗ್ ನಂತಹ ಕೌಶಲ್ಯವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಆತ್ಮವಿಶ್ವಾಸದ ಕೊರತೆಯಿರುವವರು ಕಲೆಯಲ್ಲಿ ತೊಡಗಿಸಿಕೊಳ್ಳಿ. ಇದು ವೇದಿಕೆ ಭಯವನ್ನು ದೂರಗೊಳಿಸಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಕುವೆಂಪುರವರು ವಿದ್ಯಾವಂತರಿಗೆ ದಾರಿದೀಪವಾದರೆ, ಡಾ. ರಾಜಕುಮಾರ್‌ರವರು ಓದು ಬರಹ ಬಾರದವರಿಗೆ ದಾರಿದೀಪವಾದರು. ನಮಗೆ ಇಷ್ಟ ಇರಲಿ ಇಲ್ಲದಿರಲಿ. ಕಲೆ ನಮಗೇ ತಿಳಿಯದಂತೆ ನಮ್ಮ ಜೀವನದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಒತ್ತಡ ನಿವಾರಣೆಗೆ ಯಾವುದೇ ರೂಪದಲ್ಲಿಯಾದರೂ ಕಲೆ ಪ್ರಮುಖ ಪಾತ್ರ ವಹಿಸುತ್ತದೆ. ರಾಜಸ್ಥಾನದ ಕೋಟಾದಲ್ಲಿ ದೇಶದ ಐಐಟಿಗಳಿಗೆ ಹಾಗೂ ಮೆಡಿಕಲ್ ಕೋರ್ಸ್ ಪ್ರವೇಶಕ್ಕೆ ವಿದ್ಯಾರ್ಥಿಗಳನ್ನು ತಯಾರು ಮಾಡಲಾಗುತ್ತಿದೆ. ಅಲ್ಲಿನ ವಿದ್ಯಾರ್ಥಿಗಳು ಬಹಳ ಒತ್ತಡದಲ್ಲಿರುತ್ತಾರೆ ಎಂದು ಪತ್ರಿಕಾ ಸಮೀಕ್ಷೆ ತಿಳಿಸಿದೆ. ಕೇವಲ ಓದು ಓದು ಎಂಬ ಒತ್ತಡದಿಂದ ಅವರು ವಿಚಲಿತರಾಗುತ್ತಿದ್ದು, ಅವರಿಗೂ ಕಲೆ ಒತ್ತಡ ನಿವಾರಕ ಆಗಬಹುದು ಎಂದರು. ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ರಕ್ಷಿತ್‌ಗೌಡ ಇವರು ಮಾತನಾಡಿ, ವಿದ್ಯಾರ್ಥಿಗಳು ಓದಿನ ಒತ್ತಡದ ನಡುವೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಮರೆಯಬಾರದು. ತಂದೆ ತಾಯಿಗಳನ್ನು ಸದಾ ಗೌರವಿಸಿ, ಜೀವನದಲ್ಲಿ ಹಣಕ್ಕಿಂತ ಮನಃಸಂತೋಷವೇ ಮುಖ್ಯ ಎಂದರು. ಪ್ರಾಂಶುಪಾಲ ಎಚ್.ಸಿ.ಸತೀಶ್‌ಕುಮಾರ್ ಮಾತನಾಡಿ ಈ ಎರಡು ದಿನಗಳ ಕಲ್ಪೋತ್ಸವದಲ್ಲಿ ತಮ್ಮಲ್ಲಿ ಅಡಗಿರುವ ಕಲೆಯನ್ನು ಪ್ರದರ್ಶಿಸುವ ಸಮಯ ಬಂದಿದೆ. ವಿವಿಧತೆಯಲ್ಲಿ ಏಕತೆಯ ಪ್ರದರ್ಶನ ಬಹಳ ಮುಖ್ಯ. ಈ ವೇದಿಕೆಯನ್ನು ನಿಮಗಾಗಿ ನಿರ್ಮಿಸಲಾಗಿದ್ದು ಎಲ್ಲರೂ ಇದರ ಸದ್ಬಳಕೆ ಮಾಡಿಕೊಳ್ಳಿ ಎಂದರು. ಸಂಸ್ಥೆಯ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜು ಮಾತನಾಡಿ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರದಲ್ಲೂ ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳು ಓದು ಮಾತ್ರವಲ್ಲದೆ ತಮ್ಮ ಕಲೆಯನ್ನು ಸದಾ ಇಂತಹ ಕಾರ್ಯಕ್ರಮಗಳ ಮೂಲಕ ಅಭಿವ್ಯಕ್ತಗೊಳಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಕಲ್ಪತರು ವಿದ್ಯಾಸಂಸ್ಥೆಯ ಖಜಾಂಚಿ ಟಿ.ಎಸ್.ಶಿವಪ್ರಸಾದ್, ಕಾರ್ಯದರ್ಶಿಗಳಾದ ಜಿ.ಎಸ್.ಉಮಾಶಂಕರ್, ಎಂ.ಆರ್.ಸಂಗಮೇಶ್, ಟಿ.ಯು.ಜಗದೀಶಮೂರ್ತಿ, ಸಾಂಸ್ಕೃತಿಕ ಸಮಿತಿ ಮುಖ್ಯಸ್ಥೆ ಚಂದ್ರಕಲಾ ಮತ್ತಿತರರು ಉಪಸ್ಥಿತರಿದ್ದರು.