ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಂದಾಯ ಗ್ರಾಮಗಳ ರಚನೆ, ರೈತರ ಜಮೀನುಗಳ ಪೋಡಿ ದುರಸ್ತಿ, ಪೌತಿ ಖಾತೆ ಹಾಗೂ ಸರ್ಕಾರದ ಭೂ ಮಂಜೂರಾತಿ ಪ್ರಕರಣಗಳ ವಿಲೇವಾರಿ ವೇಗ ಹೆಚ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಂದಾಯ ಗ್ರಾಮಗಳ ರಚನೆ, ರೈತರ ಜಮೀನುಗಳ ಪೋಡಿ ದುರಸ್ತಿ, ಪೌತಿ ಖಾತೆ ಹಾಗೂ ಸರ್ಕಾರದ ಭೂ ಮಂಜೂರಾತಿ ಪ್ರಕರಣಗಳ ವಿಲೇವಾರಿ ವೇಗ ಹೆಚ್ಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.

ನಗರ ಹೊರವಲಯದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ, ಜಿಲ್ಲೆಯ ಭೂರಹಿತರಿಗೆ ಸರ್ಕಾರದ ಭೂ ಮಂಜೂರಾತಿಗೆ ಸಂಬಂಧಪಟ್ಟಂತೆ 32,000 ಅರ್ಜಿ ಇತ್ಯರ್ಥಕ್ಕೆ ಬಾಕಿ ಇವೆ. 3ಸಾವಿರ ಅರ್ಜಿ ಇತ್ಯರ್ಥದ ಅಂತಿಮ ಹಂತದಲ್ಲಿವೆ. ಈ ಎಲ್ಲಾ ಜಮೀನುಗಳಿಗೆ ಗಡಿ ಗುರುತಿಸಿ ಪೋಡಿ ದುರಸ್ತಿ ಮಾಡಿಕೊಡಲು ಆದ್ಯತೆ ನೀಡಲಾಗುವುದು. ಜಿಲ್ಲೆ 157 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 10 ಮನೆಗಿಂತ ಹೆಚ್ಚು ಮನೆಗಳಿರುವ ಜನವಸತಿ ಪ್ರದೇಶ ಕಡ್ಡಾಯವಾಗಿ ಕಂದಾಯ ಅಥವಾ ಉಪ ಕಂದಾಯ ಗ್ರಾಮಗಳೆಂದು ಗುರುತಿಸಿ ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳು, ಸರ್ಕಾರಿ ಜಾಗದಲ್ಲಿರಲಿ ಅಥವಾ ಖಾಸಗಿ ಜಾಗದಲ್ಲಿರಲಿ ಅವರಿಗೆ ಶಾಶ್ವತ ಹಕ್ಕು ಪತ್ರ ಪಿಡಿಒ ಮತ್ತು ಗ್ರಾಮ ಆಡಳಿತಾಧಿಕಾರಿಗಳ ಸಮನ್ವಯದೊಂದಿಗೆ ವಿತರಿಸಲಾಗುವುದು. ಜಿಲ್ಲೆಯಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಪಹಣಿ ಮಾಲೀಕರು ಮೃತಪಟ್ಟಿದ್ದು, ವಾರಸುದಾರರಿಗೆ ಕಾನೂನು ರೀತಿ ವಿಭಾಗಪತ್ರದ ಮೂಲಕ ವರ್ಗಾವಣೆಯಾಗದೇ ಹಾಗೇ ಉಳಿದಿವೆ. ಈ ಎಲ್ಲಾ ಪಹಣಿ ಪೌತಿ ಖಾತೆ ಆಂದೋಲನದ ಮೂಲಕ ಕಂದಾಯ ಇಲಾಖೆಯೇ ಜವಾಬ್ದಾರಿ ತೆಗೆದುಕೊಂಡು ಸೂಕ್ತ ರೀತಿ ವಿಲೇವಾರಿ ಮಾಡಲು ತೀರ್ಮಾನಿಸಿದೆ. ಮೃತರ ಜಮೀನುಗಳ ಪಹಣಿ ಮಾಲೀಕರ ವಾರಸುದಾರರ ಮನೆಗಳಿಗೆ ಭೇಟಿ ನೀಡಿ ತಿಳಿವಳಿಕೆ ಪತ್ರ ವಿತರಿಸಿ ಪೌತಿ ಖಾತೆ ಆಂದೋಲನ ಸಂಪೂರ್ಣ ಯಶಸ್ವಿಗೊಳಿಸಲು ತೀರ್ಮಾನಿಸಲಾಗಿದೆ. ಅಲ್ಲದೇ ಭೂ ಸುರಕ್ಷಾ ಯೋಜನೆಯಡಿ ತಾಲೂಕು ಕಚೇರಿ ಅಭಿಲೇಖಾಲಯದ ಎಲ್ಲಾ ದಾಖಲೆ ಸ್ಕ್ಯಾನ್ ಮಾಡಿ ಆನ್ ಲೈನ್‌ ಗೆ ಸೇರ್ಪಡೆಗೊಳಿಸಿ ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಜಿಲ್ಲೆಯ ಎಲ್ಲಾ 8 ತಾಲೂಕುಗಳಲ್ಲೂ ಆದ್ಯತೆ ಮೇಲೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.ಸಹಾಯವಾಣಿ ಆರಂಭ:

ಸಾರ್ವಜನಿಕ ಸ್ಪಂದನೆಗೆ ಜಿಲ್ಲಾಡಳಿತವು 24X7 ಮಾದರಿ ಸೇವೆಗೆ ಬದ್ಧವಾಗಿದ್ದು, ಸಾರ್ವಜನಿಕರ ಕುಂದು ಕೊರತೆ, ಅಹವಾಲು ಸ್ವೀಕರಿಸಲು ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ಸಹಾಯವಾಣಿ ಸೇವೆ ಮರು ಆರಂಭಿಸಲಾಗುವುದು. ಸಾರ್ವಜನಿಕ ಬಂಧುಗಳು ಸಹಾಯವಾಣಿಗೆ ದೂರು ಸಲ್ಲಿಸಿದರೂ ಸಹ ಅವರ ಮನವಿ ಅಥವಾ ಅರ್ಜಿ ಕಾಲೋಚಿತವಾಗಿ ತ್ವರಿತಗತಿಯಲ್ಲಿ ಇತ್ಯರ್ಥ ಮಾಡಲು ಕ್ರಮವಹಿಸಲಾಗುವುದು ಎಂದು ಹೇಳಿದರು. ಜಿಲ್ಲಾ ವಾರ್ತಾಧಿಕಾರಿ ಎಂ. ಜುಂಜಣ್ಣ, ವಾರ್ತಾ ಸಹಾಯಕ ಎಂ.ಆರ್. ಮಂಜುನಾಥ್ ಹಾಗೂ ವಿವಿಧ ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.