ವೀರಶೈವ ಲಿಂಗಾಯಿತ ಸಮಾಜದ ಒಳ ಪಂಗಡಗಳ ಆರ್ಥಿಕ ಮತ್ತು ಸಾಮಾಜಿಕ ಸ್ವರೂಪಗಳ ಬದಲಾವಣೆಯ ನಿಟ್ಟಿನಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ಅನುದಾನ ಒದಗಿಸಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಶಾಸಕ ನೇಮಿರಾಜ್ ನಾಯ್ಕ ತಿಳಿಸಿದರು.
ಹಗರಿಬೊಮ್ಮನಹಳ್ಳಿ: ವೀರಶೈವ ಲಿಂಗಾಯಿತ ಸಮಾಜದ ಒಳ ಪಂಗಡಗಳ ಆರ್ಥಿಕ ಮತ್ತು ಸಾಮಾಜಿಕ ಸ್ವರೂಪಗಳ ಬದಲಾವಣೆಯ ನಿಟ್ಟಿನಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ಅನುದಾನ ಒದಗಿಸಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಶಾಸಕ ನೇಮಿರಾಜ್ ನಾಯ್ಕ ತಿಳಿಸಿದರು.
ಪಟ್ಟಣದ ತಂಬ್ರಹಳ್ಳಿ ರಸ್ತೆಯಲ್ಲಿ ಕೆಕೆಆರ್‌ಡಿಬಿ ಯೋಜನೆಯ ₹65 ಲಕ್ಷ ಅನುದಾನದ ಕಂಚಿನ ಪುತ್ಥಳಿ ಸಹಿತ ಕಿತ್ತೂರು ರಾಣಿ ಚೆನ್ನಮ್ಮ ವೃತ್ತಕ್ಕೆ ಭಾನುವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.ವೀರಶೈವ ಲಿಂಗಾಯಿತ ಸಮಾಜದ ಬಹುತೇಕ ಜನರು ಹೆಚ್ಚಾಗಿ ಕೃಷಿಕರು ಮತ್ತು ಕೃಷಿ ಉತ್ಪನ್ನಗಳ ಮಾರಾಟದಿಂದ ಜೀವನ ಸಾಗಿಸುತ್ತಿದ್ದಾರೆ. ಈ ಭಾಗದ ಏತ ನೀರಾವರಿ ಸಹಿತ ಹಗರಿಬೊಮ್ಮನಹಳ್ಳಿ ಜಲಾಶಯದ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ 17 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಜಾರಿಗೆ ಸದನದಲ್ಲಿ ನಿರಂತರವಾಗಿ ಒತ್ತಾಯಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಕೊಟ್ಟೂರಿನಲ್ಲಿಯೂ ಈ ವರ್ಷಾಂತ್ಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರ ವೃತ್ತ ನಿರ್ಮಾಣಕ್ಕೆ ಹಾಗೂ ಚಪ್ಪರದಳ್ಳಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ₹1 ಕೋಟಿ ಅನುದಾನ ಒದಗಿಸುವ ಭರವಸೆ ನೀಡಿದರು.ಪಟ್ಟಣದಲ್ಲಿ ರಾಜ್ಯಕ್ಕೆ ಮಾದರಿಯಾಗಿರುವ ಬಸವೇಶ್ವರ ವೃತ್ತ ನಿರ್ಮಾಣ ಮಾಡಲಾಗಿದೆ. ಹಾಗೆಯೇ ತಲಾ ₹65 ಲಕ್ಷ ಅನುದಾನ ಒದಗಿಸಿ ಅಂಬೇಡ್ಕರ್, ಕನಕದಾಸ, ಜಗಜೀವನರಾಮ್ ಹಾಗೂ ವಾಲ್ಮೀಕಿ ವೃತ್ತಗಳ ನಿರ್ಮಾಣಕ್ಕೆ ಶ್ರಮಿಸಲಾಗಿದೆ. ಪ್ರತಿ ಸಮಾಜದ ಅಭಿವೃದ್ಧಿಗೆ ಅಗತ್ಯ ಕ್ರಮ ಜಾರಿಗೊಳಿಸಲಾಗುತ್ತದೆ ಎಂದರು.
ನಂದೀಪುರ ಡಾ. ಮಹೇಶ್ವರ ಶ್ರೀ, ನವಲಿ ಹಿರೇಮಠದ ರುದ್ರಮುನಿ ಶಿವಾಚಾರ್ಯ ಶ್ರೀಗಳು, ಕೌದಿ ಮಹಾಂತೇಶ ಮಠದ ಶಿವಶಾಂತ ಶ್ರೀಗಳು, ಹಾಲಸಿದ್ದೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾದಾಮಿ ಮೃತ್ಯುಂಜಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರಿಹರದ ಮಾಜಿ ಶಾಸಕ ಎಚ್. ಶಿವಶಂಕರ್ ಮತ್ತು ಪಂಚಮಶಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ್ ಪಾಟೀಲ್ ಮಾತನಾಡಿದರು.
ಅಖಿಲ ಭಾರತ ಲಿಂಗಾಯಿತ ಮಹಾಸಭಾದ ತಾಲೂಕು ಅಧ್ಯಕ್ಷ ಕೊಟ್ರೇಶ್ ಶೆಟ್ಟರ್, ಪಂಚಮಶಾಲಿ ಸಮಾಜದ ತಾಲೂಕು ಅಧ್ಯಕ್ಷ ಮಂಜುನಾಥ್ ಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ವೈ. ಮಲ್ಲಿಕಾರ್ಜುನ, ಜಿಪಂ ಮಾಜಿ ಸದಸ್ಯೆ ಮಮತಾ ಸುರೇಶ್, ಚಿನಮಲ್ಲಿ ಸುರೇಶ್, ಮುಖಂಡರಾದ ಕಿನ್ನಾಳ್ ಸುಭಾಷ್, ಚಿತವಾಡಗಿ ಪ್ರಕಾಶ್, ಎಪಿಎಂಸಿ ಮಾಜಿ ಅಧ್ಯಕ್ಷ ರೋಹಿತ್, ಸಿ.ಎಚ್. ಸಿದ್ಧರಾಜ್, ಡಿಶ್ ಪಾಂಡುರಂಗ ನಾಯ್ಕ, ಡಾ. ಬಿ.ಆರ್. ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಎಚ್. ದೊಡ್ಡಬಸಪ್ಪ ಸೇರಿದಂತೆ ವೀರಶೈವ ಲಿಂಗಾಯಿತ ಸಮಾಜದ ಒಳ ಪಂಗಡಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.