ಮೂಲಸೌಕರ್ಯ ಒದಗಿಸಲು ಒತ್ತು ನೀಡುವೆ

| Published : Aug 24 2024, 01:29 AM IST / Updated: Aug 24 2024, 01:30 AM IST

ಸಾರಾಂಶ

Emphasis on providing infrastructure

-ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಭರವಸೆ । ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಶರಣಗೌಡ ಕಂದಕೂರು ಶಂಕುಸ್ಥಾಪನೆ

------

ಕನ್ನಡಪ್ರಭ ವಾರ್ತೆ ಗುರುಮಠಕಲ್

ಗಡಿಭಾಗಕ್ಕೆ ಹೊಂದಿಕೊಂಡಿರುವ ಗುರುಮಠಕಲ್ ಮತಕ್ಷೇತ್ರದ ಹಳ್ಳಿಗಳ ಹಾಗೂ ತಾಂಡಾಗಳ ಜನರಿಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಹೇಳಿದರು.

ಮತಕ್ಷೇತ್ರದ ಹೋರುಂಚಾ ನಡುವಿನ ತಾಂಡಾದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ 2023-24ನೇ ಕೆಕೆಆರ್‌ಡಿಬಿ ಸಾಲಿನ ಯೋಜನೆಯಲ್ಲಿ 3 ಕೋಟಿ ರು.ಗಳು ವೆಚ್ಚದಲ್ಲಿ ಅಲ್ಲಿಪುರ ಮುಖ್ಯರಸ್ತೆಯಿಂದ ಹೋರುಂಚಾ ಗ್ರಾಮದವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಈ ಹಿಂದೆ ನಮ್ಮ ತಂದೆಯವರು ದಿ. ನಾಗನಗೌಡ ಕಂದಕೂರ ಅವಧಿಯಲ್ಲಿ 5 ವರ್ಷಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಯಿತು. ಕಳೆದ ವರ್ಷ ಪ್ರವಾಹದಿಂದ ಯಡ್ಡಳ್ಳಿ ಸೇತುವೆ ಕುಸಿಯಿತು. 3 ಕೋಟಿ ರು.ಗಳ ವೆಚ್ಚದಲ್ಲಿ ತುರ್ತಾಗಿ ಸೇತುವೆ ನಿರ್ಮಾಣ ಮಾಡಲಾಯಿತು. ಇದರಿಂದ ಜನರ ಹಾಗೂ ವಾಹನಗಳ ಸಂಚಾರಕ್ಕೆ ಅನುಕೂಲವಾಯಿತು. ಹಲವಾರು ರಸ್ತೆಗಳನ್ನು ಕೂಡ ಅಭಿವೃದ್ಧಿಪಡಿಸಲಾಯಿತು ಎಂದರು.

ಅದರಂತೆ, ನಾನೂ ಕೂಡ 1 ವರ್ಷದಲ್ಲಿ ಕ್ಷೇತ್ರದ 55 ತಾಂಡಾಗಳಿಗೆ ಜನರ ಬೇಡಿಕೆಯಂತೆ ಅಭಿವೃದ್ಧಿ ಕಾಮಗಾರಿ ಕೈಗೊಂಡು ಬದಲಾವಣೆಗೆ ಯತ್ನಿಸಿದ್ದೇನೆ. ಇನ್ನು ಒಂದು ವಾರದಲ್ಲಿ ಯಡ್ಡಳ್ಳಿ ಗ್ರಾಮದ ಕೆರೆಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಈ ಭಾಗದ ರೈತರು ಪ್ರಮುಖವಾಗಿ ಹತ್ತಿಕುಣಿ, ಸೌದಾಗರ ಜಲಾಶಯಗಳ ನೀರನ್ನು ಆಶ್ರಯಿಸಿ ತಮ್ಮ ಜಮೀನನ್ನು ನೀರಾವರಿ ಕ್ಷೇತ್ರವನ್ನಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ, ಕಾಲುವೆಗಳ ದುರಸ್ತಿ ಕಾಮಗಾರಿ ಕೈಗೊಳ್ಳುವುದು ಅವಶ್ಯಕವಾಗಿದೆ. ನಾನು, ಈಗಾಗಲೇ ನೀರಾವರಿ ಸಚಿವರನ್ನು ಭೇಟಿಯಾಗಿ ಅನುದಾನ ನೀಡಲು ಮನವಿ ಮಾಡಿದ್ದೇನೆ. ಅನುದಾನ ಬಿಡುಗಡೆಯಾದರೆ ರೈತರ ಸಮಸ್ಯೆ ದೂರವಾಗಲಿದೆ ಎಂದರು.

ಈಗಾಗಲೇ ರೈತರ ವಿದ್ಯುತ್ ಸಮಸ್ಯೆ ಗಮನಿಸಿರುವ ರಾಜ್ಯ ಸರ್ಕಾರದ ಮಟ್ಟದಲ್ಲಿ ಬರುವ ದಿನಗಳಲ್ಲಿ ಸೌರಶಕ್ತಿ ಹೆಚ್ಚು ಉತ್ಪಾದನೆ ಹಾಗೂ ಬಳಕೆ ಮಾಡುವ ಉದ್ದೇಶ ಹೊಂದಲಾಗಿದೆ. ಜನರು ಅದರತ್ತ ಗಮನ ಹರಿಸಬೇಕು ಎಂದರು.

ರಸ್ತೆ ನಿರ್ಮಾಣ ಜವಾಬ್ದಾರಿ ತೆಗೆದುಕೊಂಡಿರುವ ಗುತ್ತಿಗೆದಾರರು ಇಲಾಖೆಯ ನಿಯಮಗಳನ್ನು ಪಾಲಿಸಿ, ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು. ಅಂದಾಗ ಮಾತ್ರ ಅದು ಬಹು ವರ್ಷಗಳ ಕಾಲ ಜನರಿಗೆ ಅನುಕೂಲವಾಗಲಿದೆ. ಇದರಲ್ಲಿ ಅಧಿಕಾರಿಗಳು ಕೂಡ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಪ್ರಾಸ್ತಾವಿಕವಾಗಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀಧರ ಮಾತನಾಡಿದರು.

ಅಲ್ಲಿಪುರ ಗ್ರಾಪಂ ಅಧ್ಯಕ್ಷ ವಿಠಲ್ ರಾಠೋಡ, ಜೆಸ್ಕಾಂ ಎಇಇ ಮಾಣಿಕರಾವ ಕುಲಕರ್ಣಿ, ಗುತ್ತಿಗೆದಾರ ಮೋಹನ ಜಯರಾಮ ರಾಠೋಡ, ಇಂಜಿನಿಯರ್ ಸುನೀಲ್, ಭೋಜಣ್ಣಗೌಡ ಯಡ್ಡಳ್ಳಿ, ಈಶ್ವರ ರಾಠೋಡ, ಸುಭಾಶ್ಚಂದ್ರ ಹೊನಗೇರಾ, ಪಿಎಸ್‌ಐ ಹಣಮಂತ ಬಂಕಲಗಿ, ಮಾರ್ಥಾಂಡಪ್ಪ ಮಾನೇಗಾರ, ಸಂತೋಷ ಚವ್ಹಾಣ, ಮಲ್ಲಣಗೌಡ ಹೋರುಂಚಾ, ಸೋಮು ಚವ್ಹಾಣ, ನಿಂಗಾರಡ್ಡಿ ಗೌಡ ಯಡ್ಡಳ್ಳಿ, ಸಿದ್ದಪ್ಪ ಹೋರುಂಚಾ ಇದ್ದರು.

-----

ಫೋಟೊ: 23ವೈಡಿಆರ್6: ಗುರುಮಠಕಲ್ ಮತಕ್ಷೇತ್ರದ ಹೋರುಂಚಾ ನಡುವಿನ ತಾಂಡಾದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಡೆದ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಶರಣಗೌಡ ಕಂದಕೂರು ಶಂಕುಸ್ಥಾಪನೆ ನೆರವೇರಿಸಿ, ಮಾತನಾಡಿದರು.

------

23ವೈಡಿಆರ್‌7 : ಗುರುಮಠಕಲ್ ಮತಕ್ಷೇತ್ರದ ಹೋರುಂಚಾ ನಡುವಿನ ತಾಂಡಾದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಡೆದ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಶರಣಗೌಡ ಕಂದಕೂರು ಶಂಕುಸ್ಥಾಪನೆ ನೆರವೇರಿಸಿದರು.