ಸಾರಾಂಶ
ಬರೀ ರೊಕ್ಕದ ಹಿಂದ ಬಿದ್ದು ಮೆಡಿಕಲ್, ಇಂಜಿನಿಯರಿಂಗ್ ಕಾಲೇಜಂತ ಹೋಗ್ದೆ ಪ್ರೈಮರಿ, ಹೈಸ್ಕೂಲ್ ಶುರು ಮಾಡ್ರಿ: ಹೈಕಶಿ ಸಂಸ್ಥೆಗೆ ಡಾ. ಖರ್ಗೆ ಕಿವಿಮಾತು.
ಕನ್ನಡಪ್ರಭ ವಾರ್ತೆ ಕಲಬುರಗಿ
ಶಿಕ್ಷಣ ಸಂಸ್ಥೆಗಳು ಬರೀ ದುಡ್ಡಿನ ಹಿಂದೆ ಬಿದ್ದು ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳಿಗೆ ಜೋತು ಬೀಳದೆ ಗುಣಮಟ್ಟದ ಶಿಕ್ಷಣ ಕೊಡುವಂತಹ ಪ್ರಾಥಮಿಕ, ಪ್ರೌಢ ಶಾಲೆಗಳನ್ನು ಶುರು ಮಾಡುವ ಮೂಲಕ ಈ ಬಾಗದಲ್ಲಿನ ಗುಣಮಟ್ಟದ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಬೇಕು ಎಂದು ಎಐಸಿಸಿ ಅದ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಕಿವಿಮಾತು ಹೇಳಿದ್ದಾರೆ.ನಗರದ ಹೈಕ ಶಿಕ್ಷಣ ಸಂಸ್ಥೆಯ ಎಂ.ಆರ್. ಮೆಡಿಕಲ್ ಕಾಲೇಜಿನ ಚಂದ್ರಶೇಖರ ಪಾಟೀಲ ಮೆಮೊರಿಯಲ್ ಹಾಸ್ಟೆಲ್ ಪ್ರಾಂಗಣದಲ್ಲಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಚಟುವಟಿಕೆ ಕೇಂದ್ರದ (ಸ್ಯಾಕ್ ) ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಹೈಕಶಿ ಸಂಸ್ಥೆಯವರು ತಮ್ಮಶಿಕ್ಷಣ ಗುಣಮಟ್ಟದಲ್ಲಿನ ಸುಧಾರಣೆಗೆ ಪಕ್ಕದ ಬೆಳಗಾವಿಯ ಕೆಎಲ್‌ಇ ಸಂಸ್ಥೆಯನ್ನು ಬೇಕಾದರೆ ಮಾದರಿಯಾಗಿ ತೆಗೆದುಕೊಳ್ಳಲಿ ಎಂದು ಸಲಹೆ ನೀಡಿದ ಡಾ. ಖರ್ಗೆ, ಡೋನೇಷನ್ ಬರೋ ಕಾಲೇಜು ಕಟ್ಟಿ ಬೆಳೆಸೋದಕ್ಕಿಂತ ಪ್ರಾಥಮಿಕ, ಮಾಧ್ಯಮಿಕ, ಹೈಸ್ಕೂಲ್ ಶಿಕ್ಷಣದಲ್ಲಿನ ಗುಣಟ್ಟ ಕಾಪಾಡಲು ಶಿಕ್ಷಣ ಸಂಸ್ಥೆಗಳು ಮುಂದಾದಲ್ಲಿ ಭದ್ರ ಬುನಾದಿ ಹಾಕಿದಂತಾಗುತ್ತದೆ. ಇದರಿಂದ ಈ ಬಾಗ ಬೆಳಯಲಿದೆ ಎಂದರು.ವಿದ್ಯಾರ್ಥಿ ಯುವಜನರಲ್ಲಿ ಕೌಶಲ್ಯ ವೃದ್ಧಿಸಿ. ಅದಕ್ಕಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನ ಬಳಸಿಕೊಳ್ಳಿ. ಈ ಭಾಗದ ಪ್ರತಿ ತಾಲೂಕಿನಲ್ಲೂ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪಿಸಿ. ಇದರಿಂದ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಲಭಿಸಲಿ ಎಂದು ಸಲಹೆ ನೀಡಿದರು.
ಅತ್ಯಾಧುನಿಕ ಗುಣಮಟ್ಟದ ಐಟಿಐ ಸೆಂಟರ್, ಜಿಟಿ ಟಿಸಿ ಉದ್ಯೋಗ ತರಬೇತಿ ಕೇಂದ್ರಗಳು ಆರಂಭಿಸಬೇಕು. ನಿರುದ್ಯೋಗ ಸಮಸ್ಯೆ ಒಂದು ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ತೆರೆಯಲು ಮುಂದಾಗಬೇಕೆಂದರು.ಹೈಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ ಮಾತನಾಡಿ, ತಮ್ಮ ಅಧ್ಯಕ್ಷ ಅವಧಿಯಲ್ಲಿ ಹೈಕ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳಲ್ಲಿ ಕಟ್ಟಡಗಳ ನಿರ್ಮಾಣಕ್ಕಾಗಿ ಒಟ್ಟು ₹195 ಕೋಟಿ ವಿನಿಯೋಗಿಸಲಾಗಿದೆ. ಮೆಡಿಕಲ್ ಕಾಲೇಜು, ಆಸ್ಪತ್ರೆಗಳಲ್ಲಿ ₹25 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸಲಕರಣೆ, ತಂತ್ರೋಪಕರಣಗಳನ್ನು ಅಳವಡಿಸಲಾಗಿದೆ ಎಂದರು.
ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ,ಶಾಸಕರಾದ ಅಲ್ಲಮಪ್ರಭು ಪಾಟೀಲ, ಯು.ಬಿ. ವೆಂಕಟೇಶ, ತಿಪ್ಪಣ್ಣಪ್ಪ ಕಮಕನೂರ, ಅರವಿಂದಕುಮಾರ ಅರಳಿ, ಸಂಸ್ಥೆ ಕಾರ್ಯದರ್ಶಿ ಡಾ.ಜಗನ್ನಾಥ ಬಿಜಾಪುರ, ಸಹ ಕಾರ್ಯದರ್ಶಿ ಡಾ.ಮಹಾದೇವಪ್ಪ ರಾಮಪುರೆ, ಆಡಳಿತ ಮಂಡಳಿ ಸದಸ್ಯರಾದ ಅರುಣಕುಮಾರ ಪಾಟೀಲ, ಡಾ.ಎಸ್.ಬಿ ಕಾಮರೆಡ್ಡಿ, ನಾಗೇಂದ್ರ ಮಂಠಾಳೆ, ಕೈಲಾಸ ಪಾಟೀಲ, ವಿನಯ ನಿಗ್ಗುಡಗಿ, ಸಾಯಿನಾಥ, ಗಿರಿಜಾಶಂಕರ, ರಜನೀಶ ವಾಲಿ, ವಿರೇಂದ್ರ ಪಾಟೀಲ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))