ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಸೌರವ್ಯೂಹ ಗ್ರಹಗಳ ಚಲನೆ ಮತ್ತು ಕಾರ್ಯವೈಖರಿ ಕುರಿತು ನಗರದ ಆದಿಚುಂಚನಗಿರಿ ಆಂಗ್ಲ ಪ್ರಾಥಮಿಕ ಶಾಲೆಯು ತನ್ನ ಶಾಲೆಯ ವಿದ್ಯಾರ್ಥಿಗಳಿಗೆ ಖಗೋಳಶಾಸ್ತ್ರದ ವಿಶೇಷ ಪ್ರಾಯೋಗಿಕ ಕಲಿಕೆಗೆ ಮುಂದಾಗುವುದರ ಮೂಲಕ ಪರಿಣಾಮಕಾರಿ ಕಲಿಕೆಗೆ ಒತ್ತು ನೀಡಿ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.ನಗರದ ಆದಿಚುಂಚನಗಿರಿ ಆಂಗ್ಲ ಪ್ರಾಥಮಿಕ ಶಾಲೆಯಲ್ಲಿ ತುಮಕೂರು ಜಿಲ್ಲೆಯ ತುರುವೇಕೆರೆಯ ಖಗೋಳ ವೀಕ್ಷಣೆ ಮಾರ್ಗದರ್ಶಕ ಆನಂದರಾಜ್ ನೇತೃತ್ವದಲ್ಲಿ ಈ ವಿಸ್ಮಯದ ವಾತಾವರಣ ಸೃಷ್ಟಿಯಾಯಿತು. ಇದಕ್ಕೆ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಾಕ್ಷಿಯಾದರು, ಟೆಲಿಸ್ಕೋಪ್ ಮೂಲಕ ಸೌರವ್ಯೂಹದ ಕೆಲವು ಗ್ರಹಗಳ ಚಲನೆಯನ್ನು ವೀಕ್ಷಿಸಿದ ವಿದ್ಯಾರ್ಥಿಗಳು ಸಂಭ್ರಮಿಸಿದರು.
ಪ್ರಾಯೋಗಿಕ ಕಲಿಕೆಗೂ ಮುನ್ನ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಖಗೋಳಶಾಸ್ತ್ರದ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಆನಂದರಾಜ್, ಖಗೋಳಶಾಸ್ತ್ರ ಮತ್ತು ಸೌರವ್ಯೂಹ ರಚನೆ ಹಾಗೂ ನಕ್ಷತ್ರ ಪುಂಜಗಳ ಕಾರ್ಯಗಳ ಬಗ್ಗೆ ವಿದ್ಯಾರ್ಥಿಗಳು ಕೇಳಿದ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಾತನಾಡಿದ ಅವರು, ನಕ್ಷತ್ರಗಳು ವಾಸ್ತವವಾಗಿ ಮಿನುಗುತಾರೆಗಳಲ್ಲ, ಆಕಾಶದಲ್ಲಿ ಕಾಣುವ ನಕ್ಷತ್ರಗಳಿಗೂ ಭೂಮಿಯ ಮೇಲಿರುವ ನಮಗೂ ತೀರಾ ಅಂತರವಿರುವುದರಿಂದ ನಕ್ಷತ್ರಗಳು ಮಿನುಗಿದಂತೆ ನಮಗೆ ಭಾಸವಾಗುತ್ತದೆ ಅಷ್ಟೇ ಎಂದರು.ಸೂರ್ಯ, ಚಂದ್ರ ಹಾಗೂ ಭೂಮಿಯ ನಡುವೆ ಗುರುತ್ವಾಕರ್ಷಣ ಶಕ್ತಿ ಇದೆ, ಇದರ ಪರಿಣಾಮ ಭೂಮಿ ಮೇಲಿನ ನೈಸರ್ಗಿಕ ಏರುಪೇರುಗಳು ಹಾಗೂ ಮಾನವನೂ ಸೇರಿದಂತೆ ಸಕಲ ಜಲಚರ ಪ್ರಾಣಿಗಳ ಉಸಿರಾಟ ಮತ್ತು ಜೀವನ ಅಡಗಿದೆ, ಪ್ರಕೃತಿಯ ಆಗುಹೋಗುಗಳು ಸೌರವ್ಯೂಹವನ್ನು ಅವಲಂಬಿಸಿದೆ, ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನ ನೈಸರ್ಗಿಕವಾಗಿ ವಿಭಿನ್ನ ರೀತಿಯ ಚಟುವಟಿಕೆಗಳು ಅದರಲ್ಲೂ ವಿಶೇಷವಾಗಿ ಪ್ರತಿ ಹುಣ್ಣಿಮೆಯ ರಾತ್ರಿ ಚಂದ್ರ ಭೂಮಿಗೆ ತೀರ ಸಮೀಪಿಸುವುದರಿಂದ ಸಮುದ್ರದ ಅಲೆಗಳಲ್ಲಿ ಏರಿಳಿತಗಳು ವಿಪರೀತವಾಗುವುದರಿಂದ ಭೂಕಂಪನ ಹಾಗೂ ಸುನಾಮಿಯಂಥ ಪ್ರಕೃತಿ ವಿಕೋಪಗಳು ಘೋಷಿಸುತ್ತವೆ.
ಜ್ಯೋತಿಷ್ಯ ಶಾಸ್ತ್ರ ಹಾಗೂ ಪಂಚಾಂಗವು ಖಗೋಳಶಾಸ್ತ್ರವನ್ನೇ ಅವಲಂಬಿಸಿರುವುದು ವಿಶೇಷ, ಗ್ರಹಗಳ ಚಲನೆ, ಗ್ರಹಣಗಳು, ಆಕಾಶಕಾಯಗಳು, ಧೂಮಕೇತು, ನಕ್ಷತ್ರಗಳು, ಸೌರಮಂಡಲದಲ್ಲಿ ಜರುಗುವ ಕೆಲವು ವಿಶೇಷ ವಿಸ್ಮಯಗಳಿಗೂ ಭೂಮಿಗೂ ತನ್ನದೇಯಾದ ಸಂಬಂಧವಿದೆ, ಜತೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಯೂ ಸೌರವ್ಯೂಹವನ್ನೇ ಅವಲಂಬಿಸಿದೆ, ಇತ್ತೀಚೆಗೆ ಭಾರತದಲ್ಲಿ ಯಶಸ್ವಿಯಾದ ಚಂದ್ರಯಾನ 2 ಹಾಗೂ ಹಿಂದಿನಿಂದಲೂ ಇಸ್ರೋ ಮೂಲಕ ಉಡಾವಣೆಯಾಗುತ್ತಿರುವ ಸ್ಯಾಟ್ಲೇಟ್ ಉಢಾವಣೆಗಳು ಸೌರವ್ಯೂಹ ಮತ್ತು ಖಗೋಳಶಾಸ್ತ್ರವನ್ನೇ ಆಧರಿಸಿದೆ.ಜ್ಞಾನ ಮತ್ತು ವಿಜ್ಞಾನಕ್ಕೂ ಪರಸ್ಪರ ಅವಿನಾಭಾವ ಸಂಬಂಧವಿದೆ, ಗಣಿತಶಾಸ್ತ್ರವು ವಿಜ್ಞಾನದ ಇನ್ನೊಂದು ಮುಖ, ವಿದ್ಯಾರ್ಥಿಗಳಿಗೆ ವಿಜ್ಞಾನದ ಅರಿವು ಅಗತ್ಯ, ಸೌರವ್ಯೂಹದ ಅಧ್ಯಯನದಿಂದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವುದು ಸುಲಭ, ಸೂರ್ಯನ ಸುತ್ತ ಸುತ್ತುವ ಗ್ರಹಗಳು ಅದರಲ್ಲೂ ವಿಶೇಷವಾಗಿ ಭೂಮಿಯು ಸೂರ್ಯನ ಸುತ್ತ ಸುತ್ತುವಿಕೆಯ ವಿಶೇಷ ಜ್ಞಾನವನ್ನು ಅರಿಯಬಹುದು ಎಂದರು. ಆದಿಚುಂಚನಗಿರಿ ಆಂಗ್ಲ ಪ್ರಾಥಮಿಕ ಶಾಲೆಯು ಮುಖ್ಯ ಶಿಕ್ಷಕಿ ಜ್ಞಾನೇಶ್ವರಿ ಮಾತನಾಡಿ, ನಮ್ಮ ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರು ಪರಿಸರ ರಕ್ಷಣೆ ಮತ್ತು ಸ್ವಚ್ಛತೆ ಹಾಗೂ ಹಸಿರು ಸಸ್ಯಗಳ ಬೆಳವಣಿಗೆಗೆ ವಿಶೇಷ ಆಸಕ್ತಿ ಹೊಂದಿದ್ದರು, ಈಗಿನ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿಯವರೂ ಕೂಡ ತಮ್ಮ ಆದಿಚುಂಚನಗಿರಿ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಜ್ಞಾನ ಮತ್ತು ವಿಜ್ಞಾನ ಕಲಿಕೆಗೆ ಅಗತ್ಯವಿರುವ ಪೂರಕ ವಾತಾವರಣ ನಿರ್ಮಿಸಿಕೊಡುತ್ತಿದ್ದಾರೆ.
ಅವರ ಮಾರ್ಗದರ್ಶನದಿಂದ ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳ ವಿಶೇಷ ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಲಾಗುತ್ತಿದೆ, ಪ್ರತಿಯೊಬ್ಬರಲ್ಲೂ ಖಗೋಳಶಾಸ್ತ್ರ ಅದರಲ್ಲೂ ಮುಖ್ಯವಾಗಿ ಸೌರವ್ಯೂಹದ ಬಗ್ಗೆ ಜ್ಞಾನ ಸಂಪಾದಿಸಿಕೊಳ್ಳಬೇಕು, ಇದು ಸಮಾಜ ವಿಜ್ಞಾನ ಹಾಗೂ ವಿಜ್ಞಾನದ ಎರಡೂ ವಿಷಯಗಳಲ್ಲಿರುವ ಪಠ್ಯವಾಗಿದೆ, ಇದರಿಂದ ಸ್ಯಾಟ್ಲೇಟ್ ಉಡಾವಣೆಗಳ ಜ್ಞಾನ ಸಂಪಾದಿಸಲು ಸಹಕಾರಿ ಆಗಲಿದೆ, ವಿದ್ಯಾರ್ಥಿಗಳು ಈ ಪ್ರಾಯೋಗಿಕ ಕಲಿಕೆಯನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸೇರಿದಂತೆ ಇತರರು ಭಾಗವಹಿಸಿದ್ದರು