ಕರಾವಳಿಯಲ್ಲಿ ಕುಚ್ಚಲಕ್ಕಿ ಬತ್ತ ಬಿತ್ತನೆಗೆ ಒತ್ತು

| Published : Jun 04 2024, 12:31 AM IST

ಸಾರಾಂಶ

ಕಾರ್ಕಳ ಹಾಗು ಅಜೆಕಾರು ಎರಡು ರೈತ ಸಂಪರ್ಕ ಕೇಂದ್ರಗಳಲ್ಲಿ ಭದ್ರ (ಎಂ ಒ 4 ತಳಿ) ಎಂ ಒ 16 (ಉಮಾ) ತಳಿ ಸಹ್ಯಾದ್ರಿ ಕೆಂಪು ಮುಕ್ತಿ ಬಿತ್ತನೆ ಬೀಜಗಳು ಇವೆ. ಒಟ್ಟು 180.40 ಕ್ವಿಂಟಾಲ್ ಬಿತ್ತನೆ ಬೀಜ ಸರಬರಾಜು ಮಾಡಲಾಗಿದ್ದು 75.40 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ಕರಾವಳಿ ಪ್ರದೇಶದಲ್ಲಿ ಕುಚ್ಚಲಕ್ಕಿಯನ್ನೇ ಹೆಚ್ಚು ಆಹಾರದಲ್ಲಿ ಬಳಸುತ್ತಾರೆ. ಈ ಕಾರಣ ಕುಚ್ಚಲಕ್ಕಿಯ ತಳಿಗಳನ್ನು ಕೃಷಿಕರು ಬೆಳೆಸಲು ಹೆಚ್ಚು ಒಲವು ಹೊಂದಿದ್ದು, ಕುಚ್ಚಲಕ್ಕಿ ತಳಿಗಳನ್ನು ಬಿತ್ತನೆ ಮಾಡಲು ಕೃಷಿ ಇಲಾಖೆ ರೈತರಿಗೆ ಉತ್ತೇಜನ ನೀಡುತ್ತಿದೆ.

ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದಿದೆ. ತಾಲೂಕಿನಲ್ಲಿ ಬತ್ತದ ಬಿತ್ತನೆ ಬೀಜಗಳ ವಿತರಣಾ ಪ್ರಕ್ರಿಯೆ ಭರದಿಂದ ನಡೆಯುತ್ತಿದೆ. ಈ ಬಾರಿ ಕಾರ್ಕಳ ತಾಲೂಕಿನ ಕಾರ್ಕಳ ಹಾಗು ಅಜೆಕಾರು ಎರಡು ರೈತ ಸಂಪರ್ಕ ಕೇಂದ್ರಗಳಲ್ಲಿ ಭದ್ರ (ಎಂ ಒ 4 ತಳಿ) ಎಂ ಒ 16 (ಉಮಾ) ತಳಿ ಸಹ್ಯಾದ್ರಿ ಕೆಂಪು ಮುಕ್ತಿ ಬಿತ್ತನೆ ಬೀಜಗಳು ಇವೆ. ಒಟ್ಟು 180.40 ಕ್ವಿಂಟಾಲ್ ಬಿತ್ತನೆ ಬೀಜ ಸರಬರಾಜು ಮಾಡಲಾಗಿದ್ದು 75.40 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ.

ಕಾರ್ಕಳ ಹೋಬಳಿಯಲ್ಲಿ ಭದ್ರ ತಳಿ 65 ಕ್ವಿಂಟಾಲ್‌ ಸರಬರಾಜಾಗಿದ್ದು 49. ಕ್ವಿಂಟಾಲ್ ವಿತರಣೆ ಮಾಡಲಾಗಿದೆ. ಉಮಾ ತಳಿ 10.20 ಕ್ವಿಂಟಾಲ್ ಸರಬರಾಜಾಗಿದ್ದು 0.9 ಕ್ವಿಂಟಾಲ್ ವಿತರಣೆ ಮಾಡಲಾಗಿದೆ. ಸಹ್ಯಾದ್ರಿ ಕೆಂಪು ಮುಕ್ತಿ 25. ಕ್ವಿಂಟಾಲ್ ಸರಬರಾಜು ಮಾಡಲಾಗಿದ್ದು 4 ಕ್ವಿಂಟಾಲ್ ವಿತರಣೆ ಮಾಡಲಾಗಿದೆ.

ಅಜೆಕಾರು ಹೋಬಳಿ ಯಲ್ಲಿ ಭದ್ರ ತಳಿ 60 ಕ್ವಿಂಟಾಲ್‌ ಸರಬರಾಜಾಗಿದ್ದು 20.750. ಕ್ವಿಂಟಾಲ್ ವಿತರಣೆ ಮಾಡಲಾಗಿದೆ. ಉಮಾ ತಳಿ 10.20 ಕ್ವಿಂಟಾಲ್ ಸರಬರಾಜಾಗಿದ್ದು ರೈತರು ಪಡೆದುಕೊಂಡಿಲ್ಲ. ಸಹ್ಯಾದ್ರಿ ಕೆಂಪು ಮುಕ್ತಿ 10 ಕ್ವಿಂಟಾಲ್ ಸರಬರಾಜು ಮಾಡಲಾಗಿದ್ದು 0.750 ಕ್ವಿಂಟಾಲ್ ವಿತರಣೆ ಮಾಡಲಾಗಿದೆ.ಭದ್ರ (ಎಂ ಒ 4 ತಳಿ) ಎಂ ಒ 16 (ಉಮಾ) ತಳಿ, ಸಹ್ಯಾದ್ರಿ ಕೆಂಪು ಮುಕ್ತಿ ಬಿತ್ತನೆ ಗಳನ್ನೇ ರೈತರು ಮಜಲು ಗದ್ದೆಗಳಲ್ಲಿ ಬೆಳೆಯಲು ಸಿದ್ಧತೆ ನಡೆಸುತ್ತಿದ್ದಾರೆ.ಹೆಚ್ಚು ಸಹಿಷ್ಣುತೆ: ಭದ್ರ (ಎಂ ಒ 4 ತಳಿ) ಯು ತಳಿಯು ಐ. .ಆರ್ .8X ಪಿಟಿಬಿ. 20 ವಂಶವಾಗಿದ್ದು 130-135 ದಿನಗಳಲ್ಲಿ ಕಟಾವಿಗೆ ಸಿದ್ಧವಾಗುತ್ತದೆ. 80-85 ಸೆ.ಮೀ ಎತ್ತರ ಬೆಳೆಯುತ್ತಿದ್ದು ಪ್ರತಿ ಹೆಕ್ಟೇರ್ ಗೆ 45-50 ಕ್ವಿಂಟಾಲ್ ಇಳುವರಿ ನಿರೀಕ್ಷಿಸಲಾಗುತ್ತದೆ. ಈ ತಳಿಯು ಮಧ್ಯಮ ಗಾತ್ರವಾಗಿದ್ದು ಹೆಚ್ಚಿನ ಗೊಂಚಲುಗಳು ಕಾಣಿಸುತ್ತದೆ. ಕಣೆ ಕೀಟ ಬಾಧೆಗೆ ಹೆಚ್ಚು ಸಹಿಷ್ಣುತೆ ಹೊಂದಿದೆ.ಎಂ ಒ 16 (ಉಮಾ) ತಳಿಯು ಎಂ .ಒ 6X ಪೊಕ್ಕಲಿ ವಂಶವಾಗಿದ್ದು , 90 ಸೆ.ಮೀ ಎತ್ತರ ಬೆಳೆಯುತ್ತದೆ. ಪ್ರತಿ ಎಕರೆಗೆ 15-18 ಕ್ವಿಂಟಾಲ್ ಇಳುವರಿ ಬರುತ್ತದೆ. ಇದು ಕಣೆ ಕೀಟ ನಿರೋಧಕ ಶಕ್ತಿ ಹೊಂದಿದೆ‌.

ಸಹ್ಯಾದ್ರಿ ಕೆಂಪು ಮುಕ್ತಿ ತಳಿಯು ಜ್ಯೋತಿX ಕೆಪಿಆರ್ -1 ( ಬ್ಲಾಕ್ ಕ್ರಾಸ್‌) ಪೋಷಕ ತತ್ವ ಹೊಂದಿದ್ದು 125-130ದಿನಗಳಲ್ಲಿ ಅವಧಿಯಲ್ಲಿ ಬೆಳೆಯುತ್ತದೆ. ಪ್ರತಿ ಹೆಕ್ಟೇರ್ ಗೆ 50 ಕ್ವಿಂಟಾಲ್ ಧಾನ್ಯ ಇಳುವರಿ ಬರುತ್ತದೆ. ಈ ತಳಿಯು ಬೆಂಕಿ ರೋಗ ಹಾಗೂ ಊದು ಬತ್ತ ರೋಗ ನಿರೋಧಕ ಶಕ್ತಿ ಹೊಂದಿದೆ.

ಈ ಎಲ್ಲ ಬತ್ತದ ತಳಿಗಳನ್ನು ಮಜಲು ಗದ್ದೆಗಳಲ್ಲಿ ಪ್ರಾಶಸ್ತ್ಯ ಸ್ಥಳವಾಗಿದ್ದು, ಮುಂಗಾರು ಹಂಗಾಮಿನ ಸಮಯದಲ್ಲಿ ಬೆಳೆಯಲಾಗುತ್ತದೆ.

ರಸಗೊಬ್ಬರ ಪೂರೈಕೆ: ಕಾರ್ಕಳ ಹೆಬ್ರಿ ಭಾಗಗಳಲ್ಲಿ ಹೆಚ್ಚಾಗಿ ರೈತರು ಹಟ್ಟಿ ಗೊಬ್ಬರ ಗಳಿಗೆ ಒತ್ತು ನೀಡುತ್ತಿದ್ದಾರೆ. ಆದರೆ ಪೋಷಕಾಂಶಗಳನ್ನು ಗಮನಿಸಿ ರಸಗೊಬ್ಬರ ಪೂರೈಕೆ ಅತ್ಯಗತ್ಯವಾಗಿದೆ.

ಖಾಸಗಿ ಅಧಿಕೃತ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ವಿವಿಧ ಶ್ರೇಣಿಗಳ ರಸಗೊಬ್ಬರಗಳು ಬೇಡಿಕೆಗೆ ಅನುಗುಣವಾಗಿ ಲಭ್ಯವಿದ್ದು ಕಾರ್ಕಳ ಹಾಗೂ ಹೆಬ್ರಿ ತಾಲೂಕಿಗೆ ಅನುಗುಣವಾಗಿ ಮೇ ತಿಂಗಳಾಂತ್ಯಕ್ಕೆ 573 ಟನ್ ಬೇಡಿಕೆ ಯಿದ್ದು ರಸಗೊಬ್ಬರ ಮಳಿಗೆಯಲ್ಲಿ 655.62 ಟನ್ ವಿವಿಧ ಶ್ರೇಣಿಯ ರಸಗೊಬ್ಬರ ಗಳು ದಾಸ್ತಾನಿರಿಸಲಾಗಿದೆ.-----------

ಅನಾದಿಕಾಲದಿಂದಲೂ ಕರಾವಳಿ ಪ್ರದೇಶದಲ್ಲಿ ಕುಚ್ಚಲಕ್ಕಿ ತಳಿಗಳನ್ನು ವಿತರಣೆ ಮಾಡಲಾಗುತ್ತಿದೆ. ಇಲ್ಲಿಯ ಜನರು ಕುಚ್ಚಲಕ್ಕಿಯನ್ನೇ ಇಷ್ಟ ಪಡುತ್ತಾರೆ. 125 - 140 ದಿನಗಳ ಕಾಲ ಗದ್ದೆಗಳಲ್ಲಿ ನೀರು ಹೊಂದಿರುವ ಪ್ರದೇಶಗಳಲ್ಲಿ ಕುಚ್ಚಲಕ್ಕಿ ತಳಿಗಳನ್ನು ಬೆಳೆಸಬಹುದು. ಮುಂಗಾರು ಹಂಗಾಮಿಗೆ (ಎಂ ಒ 4 ತಳಿ) ಎಂ ಒ 16 (ಉಮಾ) ತಳಿ, ಸಹ್ಯಾದ್ರಿ ಕೆಂಪು ಮುಕ್ತಿ ಬಿತ್ತನೆಗಳನ್ನೇ ಇಲಾಖೆ ಸರಬರಾಜು ಮಾಡುತ್ತದೆ. ಕುಚ್ಚಲಕ್ಕಿ ತಳಿಗಳು ಹೆಚ್ಚು ಪ್ರೋಟಿನ್ ಅಂಶ ಹೊಂದಿದೆ. ‌

। ಸಿದ್ದಪ್ಪ, ಕೃಷಿಯಾಧಿಕಾರಿ, ಅಜೆಕಾರು ರೈತ ಸಂಪರ್ಕ ಕೇಂದ್ರ

------------

ಬಿತ್ತನೆ ಬೀಜಕ್ಕೆ ಸರ್ಕಾರದಿಂದ ಸಬ್ಸಿಡಿ

ಭದ್ರ (ಎಂಒ 4 ತಳಿ) ಹಾಗೂ ಸಹ್ಯಾದ್ರಿ ಕೆಂಪುಮುಕ್ತಿ ಕೆ.ಜಿ.ಯೊಂದಕ್ಕೆ 55.5 ದರ ನಿಗದಿ ಪಡಿಸಿದ್ದು ಅದರಲ್ಲಿ 8 ರು. ಸರ್ಕಾರದಿಂದ ಸಹಾಯಧನ ಸಿಗುತ್ತದೆ. ರೈತರಿಗೆ ಕೆ.ಜಿ.ಯೊಂದಕ್ಕೆ 47.5 ರುಪಾಯಿಯಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. 25 ಕೆಜಿ ಬ್ಯಾಗೊಂದಕ್ಕೆ 1387.5 ರು. ದರ ನಿಗದಿ ಪಡಿಸಲಾಗಿದ್ದು, 200 ರು. ಸಬ್ಸಿಡಿಯೊಂದಿಗೆ ರೈತರಿಗೆ 1187.5 ರು. ದರದಲ್ಲಿ ಬಿತ್ತನೆ ಬೀಜ ನೀಡಲಾಗುತ್ತಿದೆ.ಉಮಾ ಕೆ.ಜಿ.ಯೊಂದಕ್ಕೆ 47.5 ರು. ದರ ನಿಗದಿಪಡಿಸಿದ್ದು, ಅದರಲ್ಲಿ 8 ರು. ಸರ್ಕಾರದಿಂದ ಸಹಾಯಧನ ಸಿಗುತ್ತದೆ. ರೈತರಿಗೆ ಕೆ.ಜಿ.ಯೊಂದಕ್ಕೆ 39.25 ರುಪಾಯಿಯನ್ನು ಬಿತ್ತನೆ ಬೀಜಕ್ಕೆ ನಿಗದಿಪಡಿಸಲಾಗಿದೆ. 30 ಕೆ.ಜಿ. ಬ್ಯಾಗೊಂದಕ್ಕೆ 1417.5 ರು. ದರ ನಿಗದಿ ಪಡಿಸಲಾಗಿದ್ದು, 240 ರು. ಸಬ್ಸಿಡಿಯೊಂದಿಗೆ ರೈತರಿಗೆ 1175.5 ರು. ನಿಗದಿಪಡಿಸಲಾಗಿದೆ.