ಕೊಪ್ಪಳ ತಾಲೂಕಿನ ಕಿನ್ನಾಳ ರಸ್ತೆಯಲ್ಲಿರುವ ವಿಠ್ಠಲ ಕೃಷ್ಣ ವಾಣಿಜ್ಯಸಂಕೀರ್ಣ ಹಿಂಭಾಗದ ಸಭಾಂಗಣದಲ್ಲಿ ಶನಿವಾರ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸದಸ್ಯತ್ವ ಅಭಿಯಾನ ನಡೆಯಿತು.
ಕೊಪ್ಪಳ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವತಿಯಿಂದ ಸಮುದಾಯದ ಸಂಘಟನೆಗೆ ಒತ್ತು ಕೊಡಲಾಗುತ್ತಿದೆ. ಜಿಲ್ಲೆ, ತಾಲೂಕು ಹಾಗೂ ಹೋಬಳಿ ಹಂತದಲ್ಲಿಯೂ ಸಂಘಟನೆ ಮಾಡಬೇಕು, ಸದಸ್ಯತ್ವ ನೋಂದಣಿ ಅಭಿಯಾನ ಹೆಚ್ಚಿಸಬೇಕು ಎಂದು ಮಹಾಸಭಾದ ರಾಜ್ಯಾಧ್ಯಕ್ಷ ಎಸ್. ರಘುನಾಥ ಹೇಳಿದರು.
ತಾಲೂಕಿನ ಕಿನ್ನಾಳ ರಸ್ತೆಯಲ್ಲಿರುವ ವಿಠ್ಠಲ ಕೃಷ್ಣ ವಾಣಿಜ್ಯಸಂಕೀರ್ಣ ಹಿಂಭಾಗದ ಸಭಾಂಗಣದಲ್ಲಿ ಶನಿವಾರ ನಡೆದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮುದಾಯದ ಜನರ ಭಾವನೆಗಳಿಗೆ ಧಕ್ಕೆತರುವ ಘಟನೆಗಳು ನಡೆದರೆ ಹೋರಾಡಬೇಕು. ಚುನಾವಣೆಯ ಸಮಯದಲ್ಲಿ ಸ್ಪರ್ಧೆ–ಪ್ರತಿಸ್ಪರ್ಧೆ ಇದ್ದೇ ಇರುತ್ತದೆ. ಅದರ ಬಳಿಕ ಸಮಾಜದ ಎಲ್ಲರೂ ಸೇರಿ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು. ರಾಜ್ಯದಲ್ಲಿ 90 ಸಾವಿರ ಜನರ ಸದಸ್ಯತ್ವ ಮಾಡಿಸಲಾಗಿದ್ದು, ಇದನ್ನು ಇನ್ನಷ್ಟು ಹೆಚ್ಚಿಸಬೇಕು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ವೇಣುಗೋಪಾಲಚಾರ್ ಜಹಗೀರದಾರ, ಜಿಲ್ಲೆಯಲ್ಲಿ ಐದು ವರ್ಷದಲ್ಲಿ ಐದು ಸಾವಿರಕ್ಕಿಂತಲೂ ಹೆಚ್ಚು ಸದಸ್ಯತ್ವ ಮಾಡಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ ಮೂರೂವರೆ ಸಾವಿರ ಸದಸ್ಯತ್ವ ಮಾಡಿಸಲಾಗಿದೆ ಎಂದು ಹೇಳಿದರು.
ಪ್ರಭಾಕರ ಪಟವಾರಿ, ಅನನ್ಯಾ ದೇಸಾಯಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಸಮುದಾಯದ ವಿದ್ಯಾರ್ಥಿಗಳ ಓದಿಗೆ ಅನುಕೂಲಕ್ಕಾಗಿ ಮಹಾಸಭಾದ ವತಿಯಿಂದ ಆರ್ಥಿಕ ನೆರವು ಒದಗಿಸಲಾಯಿತು. ಮಹಾಸಭಾದ ಮಹಿಳಾ ಘಟಕಕ್ಕೆ ಸಾಕ್ಷಿ ಶ್ರೀಕಾಂತ ತಿಕೋಟಿಕರ ಅವರನ್ನು ಜಿಲ್ಲಾ ಸಂಚಾಲಕಿಯಾಗಿ ನೇಮಿಸಲಾಯಿತು.ಮಹಾಸಭಾದ ಜಿಲ್ಲಾ ಚುನಾಯಿತ ಪ್ರತಿನಿಧಿ ಗುರುರಾಜ ಎನ್. ಜೋಶಿ, ರಾಜ್ಯ ಉಪಾಧ್ಯಕ್ಷ ಪ್ರಾಣೇಶ ಮಾದಿನೂರು, ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಾಣೇಶ ಕುಲಕರ್ಣಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಹನುಮಂತರಾವ್ ಬಿ. ದೇಶಪಾಂಡೆ, ಜಿಲ್ಲಾ ಯುವ ಘಟಕದ ಸಂಚಾಲಕ ಪ್ರಶಾಂತ ಕುಲಕರ್ಣಿ, ಬ್ರಾಹ್ಮಣ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಡಾ. ಕೆ.ಜಿ. ಕುಲಕರ್ಣಿ, ಶಂಕರ ಸೇವಾ ಸಮಿತಿ ಅಧ್ಯಕ್ಷ ಡಿ.ವಿ. ಜೋಶಿ, ಬ್ರಾಹ್ಮಣ ಸದಾಚಾರ ಸದನದ ಅಧ್ಯಕ್ಷ ರಾಘವೇಂದ್ರ ನರಗುಂದ, ನಿಕಟಪೂರ್ವ ಜಿಲ್ಲಾ ಮಹಿಳಾ ಸಂಚಾಲಕಿ ವೈಷ್ಣವಿ ಹುಲಗಿ ಭಾಗವಹಿಸಿದ್ದರು.